Team India Next Captain: ಇತ್ತೀಚೆಗೆ ತವರಿನಲ್ಲಿ ನಡೆದ ಟೆಸ್ಟ್ನಲ್ಲಿ ಟೀಂ ಇಂಡಿಯಾ (Team India) ಹೀನಾಯ ಸೋಲನುಭಸಿದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳನ್ನು ಸೋತು ಸರಣಿಯನ್ನು ಕೈಚೆಲ್ಲಿದೆ. ಇದರೊಂದಿಗೆ ತವರಿನಲ್ಲಿ ನಡೆದ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ವಿಫಲವಾಗಿದೆ. ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli)ಯಂತಹ ದಿಗ್ಗಜ ಆಟಗಾರರಿದ್ದರೂ ತಂಡ ಹೀನಾಯವಾಗಿ ಸೋಲನ್ನು ಕಂಡಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಜತೆಗೆ ರೋಹಿತ್ ನಿವೃತ್ತಿ ಹೊಂದಿದ ಬಳಿಕ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗಳು ಜನರಿಂದ ಕೇಳಿ ಬರುತ್ತಿವೆ.
ಈ ಗೊಂದಲದ ನಡುವೆಯೇ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹ್ಮದ್ ಕೈಫ್ (Mohammad Kaif) ರೋಹಿತ್ ಶರ್ಮಾ ಬಳಿಕ ನಾಯಕತ್ವಕ್ಕೆ ಸೂಕ್ತ ಆಟಗಾರ ಯಾರು ಎಂಬುದನ್ನು ತಿಳಿಸಿದ್ದಾರೆ. ಮಾಧ್ಯಮವೊಂದರಲ್ಲಿ ನಡೆದ ಸಂದರ್ಶನದ ವೇಳೆ ಕೈಫ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರಸ್ತುತ ಟೀಂ ಇಂಡಿಯಾದಲ್ಲಿರುವ ಆಟಗಾರರ ಪೈಕಿ ರಿಷಭ್ ಪಂತ್ (Rishb Pant) ಒಬ್ಬರೇ ರೋಹಿತ್ ಬಳಿಕ ತಂಡದ ನಾಯಕತ್ವಕ್ಕೆ ಸೂಕ್ತ ಆಗಿದ್ದಾರೆ. ಪಂತ್ ಬಳಿ ನಾಯಕತ್ವದ ಎಲ್ಲಾ ಲಕ್ಷಣಗಳು ಇವೆ" ಎಂದು ಹೇಳಿದ್ದಾರೆ.
"ಯಾವುದೇ ಕ್ರಮಾಂಕದಲ್ಲಿ ಮತ್ತು ಎಂತಹ ಕಠಿಣ ಸಂದರ್ಭಗಳಿದ್ದರು ಪಂತ್ ಉತ್ತಮ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯಹೊಂದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಪಂತ್ ಕ್ರೀಸ್ನಲ್ಲಿರುವವರೆಗೂ ಕಿವೀಸ್ ಆಟಗಾರರಿಗೆ ಪಂದ್ಯ ಗೆಲ್ಲುವ ವಿಶ್ವಾಸ ಇರಲಿಲ್ಲ. ಪಂತ್ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಕಠಿಣ ಪಿಚ್ಗಳಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರ ಬಳಿ ಯಾವುದೇ ಪಿಚ್ ಇರಲಿ, ಪೇಸ್ ಅಥವಾ ಸ್ಪಿನ್ ಬೌಲರ್ ಇರಲಿ ಬ್ಯಾಟಿಂಗ್ ಮಾಡಬಲ್ಲರು" ಎಂದಿದ್ದಾರೆ.