Who Is John McFall : ಬಾಹ್ಯಾಕಾಶದಲ್ಲಿ ಇತಿಹಾಸ ಬರೆಯಲು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸಜ್ಜಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಿಶೇಷಚೇತನ ಗಗನಯಾತ್ರಿಯೊಬ್ಬರನ್ನು ಕಳುಹಿಸಲು ಸಜ್ಜಾಗಿದೆ. ಅವರು ಯಾರು, ಈ ಕ್ಷೇತ್ರಕ್ಕೆ ಅವರು ಹೇಗೆ ಬಂದರು, ಗಗನಯಾತ್ರಿ ಆಗಿದ್ದು ಹೇಗೆ ಎಂಬುದರ ಸಂಪೂರ್ಣ ವಿವರ ತಿಳಿಯೋಣ..
ಜಾನ್ ಮೆಕ್‌ಫಾಲ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯಾಚರಣೆಗೆ ಅರ್ಹತೆ ಪಡೆದ ಮೊದಲ ದೈಹಿಕ ಅಂಗವೈಕಲ್ಯ (ವಿಶೇಷಚೇತನ) ಹೊಂದಿರುವ ಗಗನಯಾತ್ರಿಯಾಗಿದ್ದಾರೆ. ವಿಕಲಚೇತನರು ಬಾಹ್ಯಾಕಾಶಕ್ಕೆ ಕನಸು ಕಾಣಲು ಮತ್ತು ತಲುಪಲು ಅವರು ಸ್ಫೂರ್ತಿಯಾಗಿದ್ದಾರೆ.
🚴♂️💫 Cycling into the future of spaceflight!
— Human Spaceflight (@esaspaceflight) January 31, 2025
As part of ESA’s #Fly! initiative, member of the @esa astronaut reserve John McFall put his prosthesis to the test—cycling 🚲 in a -6° head-down position 🔄 to study how fluid shifts in microgravity might affect the fit.
🌍🚀 Find… pic.twitter.com/NWfQ5qigdk
‘ನಾನು ಪ್ಯಾರಾ-ಸರ್ಜನ್ ಅಲ್ಲ, ನಾನೊಬ್ಬ ಸರ್ಜನ್. ನಾನು ಪ್ಯಾರಾ-ಡ್ಯಾಡ್ ಅಲ್ಲ, ನಾನೊಬ್ಬ ಅಪ್ಪ. ದೈಹಿಕ ಅಂಗವೈಕಲ್ಯ ಹೊಂದಿರುವ ಯಾರಾದರೂ ಮಾಡುವ ಯಾವುದೇ ಕೆಲಸಕ್ಕಿಂತ ಪ್ಯಾರಾವನ್ನು ಸೇರಿಸುವುದು ಅವರನ್ನು ಕುಗ್ಗಿಸುವಂತಹ ಕೆಲಸ. ನಾವು ಪ್ಯಾರಾವನ್ನು ಬಳಸುತ್ತಲೇ ಇದ್ರೆ ಅದು ಬಹುಶಃ ನಮ್ಮ ಸಾಧನೆಯ ಅಂತರವನ್ನು ಸೃಷ್ಟಿಸುತ್ತಲೇ ಇರುತ್ತದೆ. ಅದು ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಜಾನ್ ಮೆಕ್‌ಫಾಲ್ ಅವರ ಮನದಾಳದ ಮಾತಾಗಿದೆ.
ಜಾನ್ ಮೆಕ್‌ಫಾಲ್ ಯಾರು ? 43 ವರ್ಷದ ಬ್ರಿಟಿಷ್ ಶಸ್ತ್ರಚಿಕಿತ್ಸಕ ಮತ್ತು ಮಾಜಿ ಪ್ಯಾರಾಲಿಂಪಿಯನ್ ಆಗಿರುವ ಜಾನ್ ಮೆಕ್‌ಫಾಲ್, ಭವಿಷ್ಯದ ISS ಕಾರ್ಯಾಚರಣೆಗೆ ಸೇರಲು ವೈದ್ಯಕೀಯ ಅನುಮತಿ ಪಡೆದಿದ್ದಾರೆ. ಜಾನ್ ಹ್ಯಾಂಪ್‌ಶೈರ್‌ನಲ್ಲಿ ಬೆಳೆದರು. ಅವರು ಹದಿಹರಿಯ ವಯಸ್ಸಿನಲ್ಲಿ ಯಾವಾಗಲೂ ಸೈನ್ಯಕ್ಕೆ ಸೇರಲು ಬಯಸುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. 19ನೇ ವಯಸ್ಸಿನಲ್ಲಿ ಸಂಭವಿಸಿದ ಅಪಘಾತವೊಂದು ಅವರ ಜೀವನವನ್ನೇ ಬದಲಾಯಿಸಿತು.

ಹೌದು, ಅವರು ಥೈಲ್ಯಾಂಡ್‌ಗೆ ಭೇಟಿ ನೀಡಿದಾಗ ಸಂಭವಿಸಿದ ಬೈಕ್ ಅಪಘಾತದಲ್ಲಿ ಅವರ ಬಲಗಾಲನ್ನು ಮೊಣಕಾಲಿನವರೆಗೆ ಕತ್ತರಿಸಲಾಯಿತು. ಈ ಅಪಘಾತ ಅವರ ಮಿಲಿಟರಿ ವೃತ್ತಿಜೀವನದ ಆಕಾಂಕ್ಷೆಗಳನ್ನು ನುಚ್ಚುನೂರು ಮಾಡಿತು. ಆದ್ರೂ ಮೆಕ್‌ಫಾಲ್ ಅವರು ನಿರುತ್ಸಾಹಗೊಳ್ಳಲಿಲ್ಲ. 2005 ರಲ್ಲಿ ಅವರು ಪ್ಯಾರಾಥ್ಲೀಟ್ ಆದರು. ಅಷ್ಟೇ ಅಲ್ಲ, ಪ್ಯಾರಾಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್ ಅನ್ನು ಪ್ರತಿನಿಧಿಸಿದರು. ಅವರು ಅನೇಕ ಯುರೋಪಿಯನ್, ವಿಶ್ವ ಮತ್ತು ಪ್ಯಾರಾಲಿಂಪಿಕ್ ಪದಕಗಳನ್ನು ಗೆದ್ದರು. ಅಪಘಾತದ ನಂತರ ಜಾನ್ ಮೇಕ್ಫಾಲ್ ಅವರಿಗೆ ಆರಂಭಿಕದ ಪ್ರತಿ ದಿನಗಳು ಸವಾಲಿನಿಂದ ಕೂಡಿದ್ದವು. ಹತಾಶೆ ಮತ್ತು ತನ್ನ ಶಕ್ತಿಯನ್ನು ವಿಶ್ವಕ್ಕೆ ತೋರಿಸಲು ಅವರು ಕ್ರೀಡೆಯ ಮಾರ್ಗವನ್ನು ಕಂಡುಕೊಂಡರು.
ವೈದ್ಯರಾಗಿದ್ದು ಹೇಗೆ ? ಕ್ರೀಡೆಯಲ್ಲಿ ಅವರ ವೃತ್ತಿಜೀವನದ ನಂತರ ಜಾನ್ ವಿಜ್ಞಾನದ ಬಗ್ಗೆ ಅವರ ಉತ್ಸಾಹ ಮತ್ತು ಕುತೂಹಲವನ್ನು ಹೆಚ್ಚಿಸಿಕೊಂಡರು. ತಮ್ಮ 28ನೇ ವಯಸ್ಸಿನಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯಕ್ಕೆ ಮರಳಿದರು. ಜಾನ್ ತಮ್ಮ ವೈದ್ಯಕೀಯ ಅಧ್ಯಯನದ ಸಮಯದಲ್ಲಿ, 2009 ರಿಂದ 2011 ರವರೆಗೆ ಯುಕೆಯ ಕಾರ್ಡಿಫ್‌ನಲ್ಲಿರುವ ಮೇರಿ ಕ್ಯೂರಿ ಹಾಸ್ಪಿಸ್‌ನಲ್ಲಿ ನರ್ಸಿಂಗ್ ಸಹಾಯಕರಾಗಿ ಕೆಲಸ ಮಾಡಿದರು.
ಇನ್ನು, ಜಾನ್ ಅವರು 2014 ರಿಂದ 2016 ರವರೆಗೆ ಬ್ರಿಟಿಷ್ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಫೌಂಡೇಶನ್ ಡಾಕ್ಟರ್ ಆಗಿದ್ದರು. ಯುಕೆಯ ಆಗ್ನೇಯ ವೇಲ್ಸ್‌ನಲ್ಲಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಶೇಷತೆಗಳಲ್ಲಿ ಕೆಲಸ ಮಾಡಿದರು. 2016 ಮತ್ತು 2018 ರ ನಡುವೆ ಅವರು ಯುಕೆಯ ವೆಸೆಕ್ಸ್ ಡೀನರಿಯಲ್ಲಿ ಜನರಲ್ ಸರ್ಜರಿ, ಮೂತ್ರಶಾಸ್ತ್ರ, ಆಘಾತ ಮತ್ತು ಮೂಳೆಚಿಕಿತ್ಸೆಗಳನ್ನು ಒಳಗೊಂಡ ಕೋರ್ ಸರ್ಜಿಕಲ್ ತರಬೇತಿಯನ್ನು ಪೂರ್ಣಗೊಳಿಸಿದರು.

2018 ರಲ್ಲಿ ಜಾನ್ ಯುಕೆಯ ರಾಷ್ಟ್ರೀಯ ಟ್ರಾಮಾ & ಆರ್ಥೋಪೆಡಿಕ್ ಸ್ಪೆಷಲಿಸ್ಟ್ ರಿಜಿಸ್ಟ್ರಾರ್ ತರಬೇತಿ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಸ್ಥಾನ ಪಡೆದರು. ಪ್ರಸ್ತುತ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ (FRCS) ಪರೀಕ್ಷೆಗಳ ಫೆಲೋಗಾಗಿ ಜಾನ್ ಅವರು ಅಧ್ಯಯನ ಮಾಡುತ್ತಿದ್ದಾರೆ.
ಇನ್ನೋವೆಟಿವ್ ಪ್ಯಾರಾಲಿಂಪಿಕ್ ಇನ್ಸ್ಪಿರೇಶನ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ: 2012 ರಲ್ಲಿ ಜಾನ್ ತನ್ನ ವೈದ್ಯಕೀಯ ಅಧ್ಯಯನದ ಜೊತೆಗೆ ಇನ್ನೋವೆಟಿವ್ ಪ್ಯಾರಾಲಿಂಪಿಕ್ ಇನ್ಸ್ಪಿರೇಶನ್ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾದರು.
ಜಾನ್ ಗಗನಯಾತ್ರಿ ಆಗುವ ಪ್ರಯಾಣ : 2022 ರಲ್ಲಿ ವಿಕಲಚೇತನ ಗಗನಯಾತ್ರಿಯನ್ನು ISS ಗೆ ಕರೆದೊಯ್ಯುವ ಸವಾಲುಗಳನ್ನು ನೋಡಲು ಇಎಸ್ಎ ಎರಡು ವರ್ಷಗಳ “ಫ್ಲೈ! ಕಾರ್ಯಸಾಧ್ಯತಾ ಅಧ್ಯಯನವನ್ನು ಪ್ರಾರಂಭಿಸಿತು. ಬಳಿಕ ಮೆಕ್‌ಫಾಲ್ ಅವರನ್ನು ಇಎಸ್ಎ ಗಗನಯಾತ್ರಿ ಮೀಸಲು ಪ್ರದೇಶದ ಸದಸ್ಯರಾಗಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಯಿತು. ಆರಂಭದಲ್ಲಿ ಮೆಕ್‌ಫಾಲ್ ಗಗನಯಾತ್ರಿಯಾಗುವುದರ ಬಗ್ಗೆ ಕಲ್ಪಿಸಿಕೊಂಡಿರಲಿಲ್ಲ. ಆದರೂ ESA ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಅಭ್ಯರ್ಥಿಗಳನ್ನು ಹುಡುಕುತ್ತಿರುವಾಗ ಅವರು ಅರ್ಜಿ ಸಲ್ಲಿಸಲು ಒತ್ತಾಯಿಸಲ್ಪಟ್ಟರು, ಅವರಿಗೆ ಕಾಯುತ್ತಿದ್ದ ಸವಾಲುಗಳು ಮತ್ತು ವೈಜ್ಞಾನಿಕ ಅವಕಾಶಗಳಿಂದ ಆಕರ್ಷಿತರಾದರು.

ಕಾರ್ಯಸಾಧ್ಯತಾ ಅಧ್ಯಯನದಲ್ಲಿ ಸವಾಲುಗಳನ್ನು ನಿವಾರಿಸುವುದು: ಅಧ್ಯಯನದ ಹಂತದಲ್ಲಿ ಮೆಕ್‌ಫಾಲ್ ಅಂತಹ ಪ್ರವರ್ತಕ ಯೋಜನೆಯಲ್ಲಿ ಭಾಗವಹಿಸುವ ವಿಶಿಷ್ಟ ಸವಾಲುಗಳನ್ನು ಪ್ರತಿಬಿಂಬಿಸುತ್ತಾ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಸಮೀಪಿಸಿದರು. ವಿಶೇಷವಾಗಿ ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ ಅವರ ದೈಹಿಕ ಸಾಮರ್ಥ್ಯಗಳ ಬಗ್ಗೆ ದುರ್ಬಲತೆ ಮತ್ತು ಅನಿಶ್ಚಿತತೆಯ ಕ್ಷಣಗಳನ್ನು ಅವರು ಒಪ್ಪಿಕೊಂಡರು. ಆದರೂ ವಿಶೇಷಚೇತನ ವ್ಯಕ್ತಿಗಳು ಅಸಾಧಾರಣ ಸಾಧನೆಗಳನ್ನು ಮಾಡಬಹುದು ಎಂಬುದನ್ನು ಸಾಬೀತುಪಡಿಸಲು ಅವರು ಗಮನಹರಿಸಿದರು.
ವೈಯಕ್ತಿಕ ಜೀವನ : ಜಾನ್ ಮೆಕ್‌ಫಾಲ್‌ಗೆ ಈ ಪ್ರಯಾಣವು ಅಂಗವೈಕಲ್ಯ ಹೊಂದಿರುವ ಮೊದಲ ಗಗನಯಾತ್ರಿಯಾಗಿ ಇತಿಹಾಸ ನಿರ್ಮಿಸುವುದಕ್ಕಿಂತ ಹೆಚ್ಚಿನದಾಗಿದೆ. ಅಷ್ಟೇ ಅಲ್ಲ, ಹಲವಾರು ವಿಭಿನ್ನ ವೃತ್ತಿಪರ ಕ್ಷೇತ್ರಗಳಲ್ಲಿ ಅಂಗವಿಕಲರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಇದು ಒಂದು ಅವಕಾಶವಾಗಿದೆ. ಮೆಕ್‌ಫಾಲ್ ಅವರ ಉದ್ಘಾಟನಾ ಬಾಹ್ಯಾಕಾಶ ಕಾರ್ಯಾಚರಣೆಯ ಸಮಯವನ್ನು ಇನ್ನೂ ನಿಗದಿ ಪಡಿಸಲಾಗಿಲ್ಲ. ಆದರೂ ಸಹ ಅವರನ್ನು ಈಗ ಅಧಿಕೃತವಾಗಿ ಗಗನಯಾತ್ರಿ ಎಂದು ಕರೆಯಲಾಗುತ್ತಿದೆ. ಅವರು ತಮ್ಮ ಮಿಷನ್‌ನ ನಿಯೋಜನೆಗಾಗಿ ಕಾಯುತ್ತಿದ್ದಾರೆ.
ಓದಿ: ಚಂದಮಾಮನ ಮಣ್ಣು ತರುವ ತವಕದ ಬಗ್ಗೆ ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡ ಇಸ್ರೋ ಅಧ್ಯಕ್ಷ