ಬೆಂಗಳೂರು : ಬಹುಭಾಷಾ ನಟ ಪ್ರಕಾಶ್ ರಾಜ್ ಮಹಾ ಕುಂಭಮೇಳದಲ್ಲಿ ಮಿಂದೆದ್ದಿದ್ದಾರೆ ಎಂದು ಅವರು ನೀರಿನಲ್ಲಿ ಮುಳುಗಿ ನಮಸ್ಕಾರ ಮಾಡುತ್ತಿರುವ ಸುಳ್ಳು ಚಿತ್ರ ಪ್ರಕಟಿಸಿ ಪ್ರಕಾಶ್ ರಾಜ್ ಅವರ ಎಲ್ಲಾ ಪಾಪಗಳನ್ನು ಕ್ಷಮಿಸಲಾಗಿದೆ ಎಂಬುದಾಗಿ ಎಂಬ ಶೀರ್ಷಿಕೆ ನೀಡಿದ್ದ ಆರೋಪದಡಿ ಪ್ರಶಾಂತ್ ಸಂಬರಗಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ಪ್ರಶಾಂತ್ ಸಂಬರಗಿ ಸಲ್ಲಿಸಿದ್ದ ಅರ್ಜಿ ಸಂಬಂಧ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಏಸಕದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಪ್ರಕರಣಕ್ಕೆ ತಡೆ ನೀಡಿದೆ. ಪ್ರತಿವಾದಿಗಳಾದ ಲಕ್ಷ್ಮಿಪುರಂ ಠಾಣೆ ಅಧಿಕಾರಿ ಮತ್ತು ಪ್ರಕಾಶ್ ರಾಜ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಪ್ರಶಾಂತ್ ಸಂಬರಗಿ ಅವರು ಉದ್ದೇಶಪೂರ್ವಕವಾಗಿ ನನ್ನ ಹೆಸರು ಮತ್ತು ಭಾವಚಿತ್ರ ಉಪಯೋಗಿಸಿಕೊಂಡು, ಸುಳ್ಳು ಶೀರ್ಷಿಕೆ ಸೃಷ್ಟಿಸಿ, ನನ್ನ ಖ್ಯಾತಿಗೆ ಕುಂದು ಬರುವಂತೆ ಮಾಡಿರುತ್ತಾರೆ ಎಂದು ನಟ ಪ್ರಕಾಶ್ ರಾಜ್ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ (ಬಿಎನ್‌ಎಸ್) ಕಲಂ 336 (4)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ಅಂತೆಯೇ, ತನಿಖಾಧಿಕಾರಿ ಮುಂದೆ ಖುದ್ದು ಹಾಜರಾಗುವಂತೆ ಸಂಬರಗಿ ಅವರಿಗೆ ಬಿಎನ್‌ಎಸ್ ಕಲಂ 35 (3)ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದ್ದರು.
ಇದನ್ನೂ ಓದಿ: ಕುಂಭಮೇಳದಲ್ಲಿ ಪ್ರಕಾಶ್ ರಾಜ್ ಪವಿತ್ರ ಸ್ನಾನದ ನಕಲಿ ಫೋಟೋ: ಹರಿಬಿಟ್ಟವರ ವಿರುದ್ಧ ದೂರು ದಾಖಲು
ಇದನ್ನೂ ಓದಿ: 'ನಾನು ಧರ್ಮವಿರೋಧಿಯಲ್ಲ, ಆದ್ರೆ ಕುಂಭ ಮೇಳಕ್ಕೆ ಹೋಗಲ್ಲ' : ನಟ ಪ್ರಕಾಶ್ ರಾಜ್