ಬೆಂಗಳೂರು : ಕೇಸರಿ ಬೆಳೆಯಲು ಸೂಕ್ತ ವಾತಾವರಣ ಇರುವುದು ಕಾಶ್ಮೀರ ಮತ್ತು ಇರಾನ್ನಲ್ಲಿ ಮಾತ್ರ. ಆದರೆ, ಕಾಶ್ಮೀರದ ಪ್ರಮುಖ ಬೆಳೆಯಾಗಿರುವ ಕೇಸರಿ ಬೆಳೆಯನ್ನು ಕರ್ನಾಟಕದಲ್ಲೂ ಬೆಳೆಯಬಹುದು. ಹೌದು, ಮಾರುಕಟ್ಟೆಯಲ್ಲಿ ನಿಮಗೆ ಸಿಗುವುದು ಕಾಶ್ಮೀರಿ ಕೇಸರಿ. ಆದರೆ, ಕರ್ನಾಟಕದಲ್ಲೂ ಕೇಸರಿ ಬೆಳೆಯಬಹುದೆಂದು ತೋರಿಸಿಕೊಟ್ಟವರು ಕೋಲಾರ ಜಿಲ್ಲೆ ಮಾಲೂರಿನ ಸಾವಯವ ಕೃಷಿಕ ಮತ್ತು ಕೃಷಿ ವಿಜ್ಞಾನಿ ಲೋಕೇಶ್ ಅವರು. ಬಯಲು ಸೀಮೆಯಲ್ಲೂ ಕೇಸರಿ ಬೆಳೆಯುವ ಮೂಲಕ ಯಶಸ್ಸು ಕಂಡಿದ್ದಾರೆ.
ಲೋಕೇಶ್ ಅವರು ಮಾಲೂರಿನ ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕೇಸರಿ ಬೆಳೆಯಲು ಕೃತಕ ವಾತಾವರಣವನ್ನು ಸೃಷ್ಟಿಸಿಕೊಂಡು ಅಲ್ಲಿ ಕೇಸರಿ ಬೆಳೆಯುತ್ತಿದ್ದಾರೆ. ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕಾಶ್ಮೀರದ ರೀತಿಯಲ್ಲಿರುವ ಹವಾನಿಯಂತ್ರಿತ ಕೊಠಡಿ ಸೃಷ್ಟಿಸಿದ್ದಾರೆ. ಇದಕ್ಕೆ ಎಸಿ, ಚಿಲ್ಲರ್, ಲೈಟ್ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಮೊದಲು ಹತ್ತು ಕೆ.ಜಿ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು ಪ್ರಾಯೋಗಿಕವಾಗಿ ಬೆಳೆದಿದ್ದಾರೆ. ಮೊದಲ ಬಾರಿಗೆ ಸ್ವಲ್ಪ ಮಟ್ಟಿನ ಅಡೆತಡೆಗಳು ಎದುರಾದರೂ, ಇದರಲ್ಲೇ ಸಂಶೋಧನೆ ಮಾಡುತ್ತಾ ಲೋಕೇಶ್ ಅವರು ಯಶಸ್ವಿಯಾಗಿದ್ದಾರೆ.
ಐದಾರು ವರ್ಷಗಳಿಂದಲೂ ಅವರು ಕೇಸರಿ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಆಸಕ್ತರಿಗೆ ತರಬೇತಿಯನ್ನೂ ಕೊಡುತ್ತಿದ್ದಾರೆ. ಹವಾನಿಯಂತ್ರಿತ ಕೊಠಡಿಯಲ್ಲಿ ಬೆಳೆಯುತ್ತಿರುವ ಕೇಸರಿ ಗಡ್ಡೆಗಳು, ಇನ್ನೊಂದೆಡೆ ಬೆಳೆದು ಹೂ ಬಿಟ್ಟಿರುವ ಕೇಸರಿಯ ದೃಶ್ಯಗಳನ್ನು ಈ ಹವಾನಿಯಂತ್ರಿತ ಕೊಠಡಿಯಲ್ಲಿ ಕಾಣಬಹುದು.
ಕೇಸರಿ ಬೆಳೆಯಲು ಬೇಕಿರುವ ಸಲಕರಣೆ : ಮೊದಲು 10 ಅಡಿ ಉದ್ದ, 10 ಅಡಿ ಅಗಲವಾದ ಕೊಠಡಿ ಇರಬೇಕು. ಅದಕ್ಕೆ ಎಸಿ ಹಾಕಿಸಿ ಕಾಶ್ಮೀರದ ವಾತಾವರಣ ಸೃಷ್ಟಿಸಬೇಕು. ಕೇಸರಿ ಗಡ್ಡೆ ನಾಟಿ ಮಾಡಲು ಸ್ಟ್ಯಾಂಡ್ ಮಾಡಿಸಬೇಕು. ಅದಕ್ಕೆ ಬೇಕಾಗುವ ಬೆಳಕು ಬರಲು ಲೈಟ್ಗಳ ವ್ಯವಸ್ಥೆ, ಚಿಲ್ಲರ್ ಅಳವಡಿಸಬೇಕು. ಅದಕ್ಕಿಂತ ಮುಖ್ಯವಾಗಿ ಕೊಠಡಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ಇದಕ್ಕೆ 3 ರಿಂದ 4 ಲಕ್ಷ ರೂ. ವೆಚ್ಚವಾಗಲಿದೆ.
ವರ್ಷಕ್ಕೆ ಒಂದೇ ಬೆಳೆ : ಕೇಸರಿ ವರ್ಷದಲ್ಲಿ ಒಮ್ಮೆ ಮಾತ್ರ ಹೂ ಬಿಡುತ್ತದೆ. ವರ್ಷಕ್ಕೆ ಒಂದೇ ಬೆಳೆ. ಏಪ್ರಿಲ್ ತಿಂಗಳಲ್ಲಿ ಕೇಸರಿ ಗಡ್ಡೆಯನ್ನು ನಾಟಿ ಮಾಡಲಾಗುತ್ತದೆ. ಅದು ಸೆಪ್ಟಂಬರ್ ತಿಂಗಳಲ್ಲಿ ಮೊಳಕೆ ಬರಲು ಶುರುವಾಗಿ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹೂ ಬಿಡುತ್ತದೆ. ಹೂ ಬಿಡುವ ಸಮಯ 53 ದಿನಗಳು ಮಾತ್ರ. ನಂತರ ಒಂದು ವಾರದಲ್ಲಿ ಹೂ ಖಾಲಿಯಾದರೆ ಮತ್ತೆ ಕೇಸರಿ ಹೂ ಬರುವುದು ಮುಂದಿನ ವರ್ಷಕ್ಕೆ.

ಕೇಸರಿ ಸಂಗ್ರಹಿಸುವುದೇಗೆ ? ಕೇಸರಿ ಗಡ್ಡೆಯಿಂದ ಹೂ ಬಿಟ್ಟಾಗ ಹೂವಿನ ಮಧ್ಯದಿಂದ ಕೇಸರಿ ಶಲಾಕೆಗಳು ಹೊರ ಬರುತ್ತವೆ. ಅವುಗಳನ್ನು ಹೂವುಗಳಿಂದ ಹುಷಾರಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಲಾಗುವ ಕೇಸರಿಯನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇಡುವ ಅವಶ್ಯಕತೆ ಇರುವುದಿಲ್ಲ. ಒಂದು ಕೆ.ಜಿ ಗಡ್ಡೆಯಿಂದ ಉತ್ತಮವಾಗಿ ಬೆಳೆದರೆ ಒಂದು ಗ್ರಾಂ ಕೇಸರಿ ಸಿಗುತ್ತದೆ.

ಕೇಸರಿಗೆ ಬೇಡಿಕೆ ಹೆಚ್ಚು : ಭಾರತದಲ್ಲಿ ಪ್ರಸ್ತುತ ಕೇಸರಿಗೆ ಪ್ರತಿ ವರ್ಷ 100 ಟನ್ ಬೇಡಿಕೆ ಇದೆ. ಆದರೆ, ಸದ್ಯ 3.8 ಟನ್ ಮಾತ್ರ ಕೇಸರಿ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಕೃಷಿಯಲ್ಲಿ ಒಂದಲ್ಲಾ ಒಂದು ರೀತಿ ಸಂಶೋಧನಾ ಪ್ರಯೋಗ ಮಾಡುತ್ತಿರುವ ಲೋಕೇಶ್ ಅವರು, ಕೇಸರಿಗೆ ಸೀಮಿತವಾಗಿಲ್ಲ. ತಮ್ಮ ಪ್ರಯೋಗಾಲಯದಲ್ಲಿ ದುಬಾರಿ ಬೆಲೆಯ ಬ್ರೆಜಿಲ್ ಆಲೂಗಡ್ಡೆ, ಕಾರ್ಡಿಸೆಪ್ಸ್ ಮಶ್ರೂಮ್ ಕೂಡ ಬೆಳೆಯುತ್ತಿದ್ದಾರೆ.

ಈ ಕುರಿತು ಕೃಷಿ ವಿಜ್ಞಾನಿ ಲೋಕೇಶ್ 'ಈಟಿವಿ ಭಾರತ' ಜೊತೆ ಮಾತನಾಡಿ, " ಹೊಸದಾಗಿ ಕೇಸರಿ ಕೃಷಿ ಮಾಡುವವರು ಎಲ್ಲವೂ ತಿಳಿದುಕೊಂಡು ಮಾಡುವುದು ಉತ್ತಮ. ಸಾಫ್ಟ್ವೇರ್ ಎಂಜಿನಿಯರ್ಗಳು ಕೇಸರಿ ಬೆಳೆಯಲು ಮುಂದೆ ಬರುತ್ತಿದ್ದಾರೆ. ಆದರೆ, ರೈತರಿಗೆ ಸರಿಯಾದ ಮಾಹಿತಿ ಇಲ್ಲದಿರುವ ಕಾರಣ ಅಷ್ಟಾಗಿ ಗಮನಕೊಡುತ್ತಿಲ್ಲ. ಹಾಕಿದ ಬಂಡವಾಳ ಎಲ್ಲೂ ಹೋಗುವುದಿಲ್ಲ. ಸರಿಯಾದ ಮಾಹಿತಿ ತಿಳಿದು ಮಾಡಿದರೆ ಉತ್ತಮ ಬೆಳೆ ತೆಗೆಯಬಹುದು. ಇದಕ್ಕೆ ನಾವೇ ತರಬೇತಿಯನ್ನೂ ಸಹ ಕೊಡುತ್ತೇವೆ ಎಂದು ತಿಳಿಸಿದರು.

ಕಾಶ್ಮೀರದ ಭೂಮಿಯಲ್ಲಿ ಬೆಳೆಯುವ ಕೇಸರಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕಲಾಗುತ್ತದೆ. ಆದರೆ, ಇಲ್ಲಿ ಒಂದು ರೂಮಿನಲ್ಲಿ ಅದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿ ಕಾಶ್ಮೀರ ಕೇಸರಿ ಬೆಳೆಯಲಾಗುತ್ತದೆ. ಇದಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಹಾಕುವುದಿಲ್ಲ. ನೈಸರ್ಗಿಕವಾಗಿ ಇರುತ್ತದೆ. ಒಂದು ಗ್ರಾಂ ಕೇಸರಿಗೆ 1000 ರೂ.ನಿಂದ 1500 ರೂ.ವರೆಗೆ ಬೆಲೆ ಇದೆ. ಗಡ್ಡೆ ನಮ್ಮ ಬಳಿಯೇ ಇರುತ್ತದೆ. ಇನ್ನು ಹಾಕಿರುವ ಬಂಡವಾಳ ಒಂದೇ ವರ್ಷದಲ್ಲಿ ಬರುತ್ತದೆ. ಒಂದು ಗಡ್ಡೆ 8 ಗ್ರಾಂ ತೂಕವಿದ್ದರೆ ಹೂ ಸಹ ತುಂಬಾ ಚೆನ್ನಾಗಿಯೇ ಬರುತ್ತದೆ. ಇನ್ನು 7 ರಿಂದ 8 ವರ್ಷಗಳವರೆಗೆ ಕೇಸರಿ ಗಡ್ಡೆ ಹೂ ಬಿಡುತ್ತದೆ. ಇದರಿಂದ ರೈತರಿಗೆ ಲಾಭವೂ ಸಿಗುತ್ತೆ. ಅಲ್ಲದೆ ಕ್ಯಾನ್ಸರ್ಗೆ ಔಷಧೀಯ ಗುಣಗಳನ್ನು ಹೊಂದಿರುವ ಅಂಶಗಳು ಈ ಕೇಸರಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ" ಎಂದು ಮಾಹಿತಿ ನೀಡಿದರು.
"ಕೇಸರಿಯನ್ನು ಬಳಸಿ ಕಾಸ್ಮೆಟಿಕ್ಸ್ ತಯಾರಿಸಿದ್ದೇವೆ. ಕೇಸರಿ ಸಿರಮ್, ಬಾಡಿ ಬಟರ್, ಇದು ದೇಹವನ್ನು ಮೃದುವಾಗಿಸುತ್ತದೆ. ಪೇಸ್ಟ್ ಜೆಲ್ ಸೇರಿ ನಾಲ್ಕು ಉತ್ಪನ್ನಗಳನ್ನು ತಯಾರು ಮಾಡಲಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ಯಾನ್ಸರ್ಗೂ ಈ ಕೇಸರಿ ಉಪಯುಕ್ತವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: 18 ಗುಂಟೆ ಜಮೀನಿನಲ್ಲಿ 28 ಬೆಳೆಗಳು; ಖರ್ಚಿಲ್ಲದೆ ಸಾವಯವ ಕೃಷಿಯಲ್ಲಿ ಯಶಸ್ವಿಯಾದ ರೈತ!