ಕರ್ನಾಟಕ

karnataka

ETV Bharat / sports

ಜೋರ್ಡನ್​ ಹ್ಯಾಟ್ರಿಕ್​, ಬಟ್ಲರ್​ ಅಬ್ಬರದಾಟ: ಅಮೆರಿಕ ಮಣಿಸಿದ ಇಂಗ್ಲೆಂಡ್​ ಸೆಮೀಸ್​ಗೆ ಲಗ್ಗೆ - England Enters Semifinals - ENGLAND ENTERS SEMIFINALS

ಅಮೆರಿಕ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡವು ಟಿ20 ವಿಶ್ವಕಪ್​ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದೆ.

england beat usa
ಇಂಗ್ಲೆಂಡ್, ಅಮೆರಿಕ ಆಟಗಾರರು (Photo: IANS)

By PTI

Published : Jun 24, 2024, 7:07 AM IST

ಬಾರ್ಬಡೋಸ್:ಭಾನುವಾರ ಇಲ್ಲಿನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅಬ್ಬರಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಅಮೆರಿಕವನ್ನು 10 ವಿಕೆಟ್​ಗಳಿಂದ ಸೋಲಿಸಿ, ಮೊದಲ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಯಕ ಜೋಸ್ ಬಟ್ಲರ್ ಆಕ್ರಮಣಕಾರಿ ಬ್ಯಾಟಿಂಗ್​ ಹಾಗೂ ವೇಗಿ ಕ್ರಿಸ್ ಜೋರ್ಡನ್ ಹ್ಯಾಟ್ರಿಕ್ ಸಾಧನೆಯಿಂದ ಆಂಗ್ಲರು ಸುಲಭದ ಜಯ ದಾಖಲಿಸಿದರು.

ಟಾಸ್​ ಗೆದ್ದ ಇಂಗ್ಲೆಂಡ್​ ಮೊದಲ ಫೀಲ್ಡಿಂಗ್​ ಮಾಡುವ ನಿರ್ಧಾರ ಕೈಗೊಂಡಿತು. ಅಮೆರಿಕ ಮೊತ್ತ 9 ರನ್​ ಆಗಿದ್ದಾಗಲೇ ಮೊದಲ ವಿಕೆಟ್​ ಆಗಿ ವಿಕೆಟ್​ ಕೀಪರ್​ ಆಂಡ್ರೀಸ್ ಗೌಸ್ (8) ಪೆವಿಲಿಯನ್​ಗೆ ಮರಳಿದರು. ಬಳಿಕ ಸ್ಟೀವನ್ ಟೇಲರ್ (12) ಹಾಗೂ ನಿತೀಶ್ ಕುಮಾರ್ (30) ಎರಡನೇ ವಿಕೆಟ್​ಗೆ 34 ರನ್​ ಸೇರಿಸಿ ತಂಡಕ್ಕೆ ಆಸರೆಯಾದರು. ಈ ಹಂತದಲ್ಲಿ ಕರನ್​ ಬೌಲಿಂಗ್​ನಲ್ಲಿ ಟೇಲರ್ ಔಟಾದರು. ತದನಂತರ ಅಮೆರಿಕ​ ನಿರಂತರ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು.

ನಾಯಕ ಆರನ್ ಜೋನ್ಸ್ (10) ಮತ್ತೊಮ್ಮೆ ವಿಫಲರಾದರು. ಮಿಲಿಂದ್​ ಕುಮಾರ್​ ಕೇವಲ 4 ರನ್​ಗೆ ವಿಕೆಟ್​ ಒಪ್ಪಿಸಿದರು. ​ಈ ನಡುವೆ ಕೋರಿ ಆ್ಯಂಡರ್ಸನ್ 29 ಹಾಗೂ ಹರ್ಮಿತ್​ ಸಿಂಗ್​ 21 ರನ್​ ಬಾರಿಸಿ ತಂಡಕ್ಕೆ ನೆರವಾದರು. ಕೊನೆಯ ಓವರ್​ಗಳಲ್ಲಿ ದಿಢೀರ್​ ವಿಕೆಟ್​ಗಳನ್ನು ಕಳೆದುಕೊಂಡ ಅಮೆರಿಕ​​ 18.5 ಓವರ್​ಗಳಲ್ಲಿ ಕೇವಲ 115 ರನ್​ಗೆ ಆಲೌಟ್​ ಆಯಿತು. ಕ್ರಿಸ್​ ಜೋರ್ಡನ್​ 10ಕ್ಕೆ 4, ಸ್ಯಾಮ್​ ಕರನ್​ 23ಕ್ಕೆ2 ಹಾಗೂ ಆದಿಲ್ ರಶೀದ್​ 13ಕ್ಕೆ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ:ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್​ ಕಮಿನ್ಸ್​ 'ಹ್ಯಾಟ್ರಿಕ್​' ವಿಶ್ವದಾಖಲೆ - pat Cummins hat tricks

ಜೋರ್ಡನ್​ ಹ್ಯಾಟ್ರಿಕ್​:ಮಾರ್ಕ್ ವುಡ್ ಬದಲಿಗೆ ಪುನರಾಗಮನ ಮಾಡಿದ ಜೋರ್ಡನ್ (4/10) 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ 5 ಎಸೆತಗಳಲ್ಲಿ 4 ವಿಕೆಟ್‌ ಪಡೆದು ಮಿಂಚಿದರು. ಓವರ್​ನ ಮೊದಲ ಬಾಲ್​ಗೆ ಕೋರಿ ಆ್ಯಂಡರ್ಸನ್​ ಅವರನ್ನು ಔಟ್​ ಮಾಡಿದರೆ, 3, 4 ಹಾಗೂ 5ನೇ ಎಸೆತಗಳಲ್ಲಿ ಕ್ರಮವಾಗಿ ಅಲಿ ಖಾನ್, ನೊಸ್ತುಶ್ ಕೆಂಜಿಗೆ ಮತ್ತು ಸೌರಭ್ ನೇತ್ರವಲ್ಕರ್ ವಿಕೆಟ್​ ಕಬಳಿಸಿ ಅಮೆರಿಕಕ್ಕೆ ಆಘಾತ ನೀಡಿದರು. ಇದು ಈ ವಿಶ್ವಕಪ್​ನಲ್ಲಿ ಮೂಡಿಬಂದ ಮೂರನೇ ಹ್ಯಾಟ್ರಿಕ್​ ಆಗಿದೆ. ಇದಕ್ಕೂ ಮುನ್ನ ಟೂರ್ನಿಯಲ್ಲಿ ಎರಡು ಸಲ ಆಸೀಸ್​ ವೇಗಿ ಪ್ಯಾಟ್​ ಕಮಿನ್ಸ್ ಈ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್​ ಸಿಡಿಲಬ್ಬರದ ಚೇಸಿಂಗ್​: 116 ರನ್​ ಬೆನ್ನಟ್ಟಿದ ಇಂಗ್ಲೆಂಡ್​ ಕೇವಲ 9.4 ಓವರ್​ಗಳಲ್ಲೇ ಗುರಿ ತಲುಪಿತು. ಅಮೆರಿಕ​ ಬೌಲಿಂಗ್​ನ್ನು ಚೆಂಡಾಡಿದ ನಾಯಕ ಜೋಸ್​​​ ಬಟ್ಲರ್​ 38 ಎಸೆತಗಳಲ್ಲಿ ಅಜೇಯ 83 ರನ್​ ಚಚ್ಚಿದರು. ಇನ್ನೊಂದೆಡೆ, ಫಿಲಿಪ್​ ಸಾಲ್ಟ್​ 25* ರನ್​ ಬಾರಿಸಿದರು. ಭಾರಿ ಅಂತರದ ಗೆಲುವಿನೊಂದಿಗೆ ರನ್​ರೇಟ್​ನಲ್ಲಿ (+1.992) ಭರ್ಜರಿ ಏರಿಕೆ ಕಂಡ ಆಂಗ್ಲರು, ಗ್ರೂಪ್​ 2ರಲ್ಲಿ ಮೊದಲ ತಂಡವಾಗಿ ಸೆಮಿಫೈನಲ್​ ತಲುಪಿದ್ದಾರೆ. ಇನ್ನೊಂದು ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್ ನಡುವೆ ಪೈಪೋಟಿ ಇದೆ.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಕ್ಲೀನ್​ಸ್ವೀಪ್​: ಇದು 'ಸ್ಮೃತಿ'ಯಲ್ಲಿ ಉಳಿಯುವ ಟೂರ್ನಿ - INDW vs SAW match

ABOUT THE AUTHOR

...view details