ಲಂಡನ್:ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಸಾಧನೆ ಮಾಡಿದ ವಿಶ್ವದ ಏಕೈಕ ವೇಗದ ಬೌಲರ್ ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್, ತಮ್ಮ ಸುದೀರ್ಘ 20 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆಯಲು ಸಜ್ಜಾಗಿದ್ದಾರೆ.
ಟೆಸ್ಟ್‌ನಲ್ಲಿ 700 ವಿಕೆಟ್ ಸಾಧನೆಗೈದ ವಿಶ್ವದ ಮೊದಲ ವೇಗಿ: ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯ ಮೊದಲ ಪಂದ್ಯ ಅವರ ಕೊನೆಯ ಪಂದ್ಯವಾಗಿರಲಿದೆ ಎಂದು ದಿಗ್ಗಜ ಬೌಲರ್ ಶನಿವಾರ ಘೋಷಿಸಿದರು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿರುವ ಜೇಮ್ಸ್, ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ ಮತ್ತು ಮೂರನೇ ಬೌಲರ್ ಆಗಿದ್ದಾರೆ.
41 ವರ್ಷದ ದಿಗ್ಗಜ ವೇಗಿ ತಮ್ಮ ನಿವೃತ್ತಿ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದು, ಲಾರ್ಡ್ಸ್‌ನಲ್ಲಿ ಕೆರೆಬಿಯನ್ನರ ವಿರುದ್ಧದ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಪಂದ್ಯ ಆಗಲಿದೆ. 20 ವರ್ಷಗಳಿಂದ ದೇಶಕ್ಕಾಗಿ ಆಡಿದ ಸಂತೋಷ, ತೃಪ್ತಿ ನನಗಿದೆ. ತಂಡದಿಂದ ನಿವೃತ್ತನಾಗುತ್ತಿರುವ ಬೇಸರವೂ ಇದೆ ಎಂದು ತಿಳಿಸಿದ್ದಾರೆ.
ಯುವ ಆಟಗಾರರಿಗೆ ಅವಕಾಶ ನೀಡಲು ವಿದಾಯ:ಯುವ ಆಟಗಾರರಿಗೆ ಅವಕಾಶ ಮಾಡಿಕೊಡಲು ಮತ್ತು ವೃತ್ತಿಜೀವನಕ್ಕೆ ವಿದಾಯ ಹೇಳಲು ಇದು ಸಕಾಲ. ನನ್ನನ್ನು ವಿಶ್ವದ ಶ್ರೇಷ್ಠ ಬೌಲರ್ ಆಗಿ ಮಾಡಿದ ಸಹ ಆಟಗಾರರು ಮತ್ತು ತರಬೇತುದಾರರಿಗೆ ಚಿರಋಣಿ. ಕ್ರಿಕೆಟ್ ವೃತ್ತಿ ಆರಂಭದಿಂದ ಈವರೆಗೂ ಬೆಂಬಲಿಸಿದ ಅಭಿಮಾನಿಗಳು, ಕ್ರಿಕೆಟ್‌ಪ್ರೇಮಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.