ಕರ್ನಾಟಕ

karnataka

By ETV Bharat Karnataka Team

Published : Feb 20, 2024, 9:19 PM IST

ETV Bharat / sports

ವಿರಾಟ್ ಕೊಹ್ಲಿ ಡೀಪ್‌ಫೇಕ್ ವಿಡಿಯೋ ವೈರಲ್

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಬೆಟ್ಟಿಂಗ್ ಆ್ಯಪ್ ಬಗ್ಗೆ ಪ್ರಚಾರ ಮಾಡುತ್ತಿರುವಂತೆ ಬಿಂಬಿಸುವ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದೆ.

deepfake-video-of-virat-kohli-promoting-betting-app-goes-viral
ವಿರಾಟ್ ಕೊಹ್ಲಿ ಡೀಪ್‌ಫೇಕ್ ವಿಡಿಯೋ ವೈರಲ್

ಹೈದರಾಬಾದ್: ಡೀಪ್‌ಫೇಕ್ ಫೋಟೋಗಳು ಮತ್ತು ವಿಡಿಯೋಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿವೆ. ಆದರೂ, ಸೈಬರ್ ಅಪರಾಧಿಗಳು ಪ್ರತಿನಿತ್ಯ ಸೆಲೆಬ್ರಿಟಿಗಳ ಡೀಪ್‌ಫೇಕ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಮುಜುಗರ, ಕಿರಿಕಿರಿಯನ್ನುಂಟು ಮಾಡುವಂತಿದೆ.

ಇದರ ನಡುವೆ ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡುತ್ತಿರುವುದನ್ನು ಬಿಂಬಿಸಲಾಗಿದೆ.

ಪ್ರಮುಖ ಟಿವಿ ಚಾನಲ್‌ನ ಲೈವ್​ ಸುದ್ದಿ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಅವರ ಜಾಹೀರಾತನ್ನು ಪ್ರಸಾರ ಮಾಡಿರುವ ರೀತಿಯಲ್ಲಿ ಈ ವಿಡಿಯೋವನ್ನು ಸೈಬರ್ ಅಪರಾಧಿಗಳು ರಚಿಸಿದ್ದಾರೆ. ಈ ಹಿಂದೆ ಕೊಹ್ಲಿ ನೀಡಿದ ಸಂದರ್ಶನಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ತಿರುಚಿ ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕಾಗಿ ಬಳಸಲಾಗಿದೆ. ಕಡಿಮೆ ಹೂಡಿಕೆಯಲ್ಲಿ ಸುಲಭವಾಗಿ ಹಣ ಗಳಿಸುವುದು ಹೇಗೆಂದು ಕ್ರಿಕೆಟಿಗ ಹೇಳುವಂತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ನೆಟಿಜನ್‌ಗಳು ಇದೊಂದು ನಕಲಿ ಎಂದು ಕಮೆಂಟ್ ಮಾಡಿದ್ದಾರೆ. ಆದರೆ, ಈ ಫೇಕ್ ವಿಡಿಯೋ ಬಗ್ಗೆ ಖುದ್ದು ಕೊಹ್ಲಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸೃಷ್ಟಿಕರ್ತ ಅರೆಸ್ಟ್: ದೆಹಲಿ ಪೊಲೀಸರು

ಇತ್ತೀಚೆಗೆ ಸೆಲೆಬ್ರಿಟಿಗಳ ಡೀಪ್‌ಫೇಕ್ ವಿಡಿಯೋಗಳು ಸಂಚಲನ ಮೂಡಿಸುತ್ತಿರುವುದನ್ನು ನಾವು ಸ್ಮರಿಸಬಹುದು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗೇಮಿಂಗ್ ಅಪ್ಲಿಕೇಶನ್ ಬಗ್ಗೆ ಪ್ರಚಾರ ಮಾಡುವ ರೀತಿಯ ನಕಲಿ ವಿಡಿಯೋ ವೈರಲ್ ಆಗಿತ್ತು. ನಂತರ ಅದನ್ನು ನೇರವಾಗಿ ಸಚಿನ್ ನಿರಾಕರಿಸುವ ಮೂಲಕ ವಿಡಿಯೋದಲ್ಲಿರುವುದು ನಾನಲ್ಲ ಎಂದು ಸ್ಪಷ್ಟಪಡಿಸಿದ್ದರು.

ತಂತ್ರಜ್ಞಾನದ ಈ ಅತಿರೇಕದ ದುರುಪಯೋಗವು ಸಮಸ್ಯಾತ್ಮಕವಾಗಿದೆ. ಅಂತಹ ವಿಡಿಯೋಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳನ್ನು ನೀವು ಎಲ್ಲಿ ನೋಡಿದರೂ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತನ್ನಿ. ಸಾಮಾಜಿಕ ಮಾಧ್ಯಮಗಳು ಜಾಗರೂಕರಾಗಿರಬೇಕು. ಈ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ನಕಲಿ ಮಾಹಿತಿ ಮತ್ತು ಡೀಪ್‌ಫೇಕ್ ವಿಡಿಯೋಗಳ ಹರಡುವಿಕೆಯನ್ನು ತಡೆಯಲು ತ್ವರಿತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದೂ ಸಚಿನ್ ಪೋಸ್ಟ್ ಮಾಡಿದ್ದರು.

ಇದಕ್ಕೂ ಮೊದಲು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಅವರ ಡೀಪ್‌ಫೇಕ್ ಫೋಟೋಗಳು ಕೂಡ ವೈರಲ್ ಆಗಿದ್ದವು. ಸಿನಿಮಾ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಮಾರ್ಫಿಂಗ್ ವಿಡಿಯೋಗಳು ಸಂಚಲನ ಮೂಡಿಸಿದ್ದವು. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹವನ್ನು ನಿರ್ಬಂಧಿಸಲು ಅಗತ್ಯಬಿದ್ದರೆ ಹೊಸ ಕಾನೂನು ತರಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದರು.

ಇದನ್ನೂ ಓದಿ:ಡೀಪ್‌ಫೇಕ್ ವಿರುದ್ಧ ವಾರದಲ್ಲಿ ಕಠಿಣ ಐಟಿ ನಿಯಮ ಜಾರಿ: ಕೇಂದ್ರ ಸರ್ಕಾರ

ABOUT THE AUTHOR

...view details