ಕುಲ್ಗಾಮ್, ಜಮ್ಮು ಕಾಶ್ಮೀರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕಾದರ್ ಬೆಹಿಬಾಗ್ ಪ್ರದೇಶದಲ್ಲಿ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಐವರು ಉಗ್ರರು ಹತರಾಗಿದ್ದಾರೆ.
ಕಾದರ್ ಬೆಹಿಬಾಗ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ: ಸಿಆರ್‌ಪಿಎಫ್, ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇರಿದಂತೆ ಭದ್ರತಾ ಪಡೆಗಳ ಜಂಟಿ ತಂಡವು ಕಾದರ್ ಬೆಹಿಬಾಗ್ ಪ್ರದೇಶವನ್ನು ಸುತ್ತುವರೆದಿದೆ. ಅಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿಯ ಮೇಲೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನಮ್ಮ ತಂಡವು ನಿರ್ದಿಷ್ಟ ಸ್ಥಳವನ್ನು ಸಮೀಪಿಸಿದ ತಕ್ಷಣ ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದರು, ಇದಕ್ಕೆ ಸೇನೆ ತಕ್ಕ ಪ್ರತ್ಯುತ್ತರ ನೀಡಿ ಗುಂಡು ಹಾರಿಸಿದರು ಎಂದು ಉನ್ನತ ಸೇನಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮುಂದುವರಿದ ಗುಂಡಿನ ಚಕಮಕಿ: ಉಗ್ರರನ್ನು ಸದೆಬಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ. ಮೂಲಗಳ ಪ್ರಕಾರ ಎರಡರಿಂದ ಮೂರು ಉಗ್ರರು ಈ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ನಂಬಲಾಗಿದೆ. ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ಮುಂದುವರೆದಿದೆ.
ಕುಲ್ಗಾಮ್ ಜಿಲ್ಲೆಯ ಕಡ್ಡರ್ ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಉಗ್ರರ ಬೇಟೆಗೆ ಕಾರ್ಯಾಚಣೆ ಕೈಗೊಂಡಿದೆ. ಹೆಚ್ಚಿನ ವಿವರ ಲಭ್ಯವಾಗಬೇಕಿದೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ (ಈ ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ, ಭಯೋತ್ಪಾದಕರು ಭಾರೀ ಪ್ರಮಾಣದದಲ್ಲಿ ಗುಂಡಿನ ದಾಳಿ ನಡೆಸಿದರು ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಹೇಳಿದೆ.
ಇಂದು ಗೃಹಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನು ಓದಿ: ನಿವೃತ್ತ ಪೊಲೀಸ್ ಮನೆಯಲ್ಲಿ ಅಗ್ನಿ ಅವಘಡ: ಇಬ್ಬರು ಮಕ್ಕಳು ಸೇರಿ 6 ಮಂದಿ ದಾರುಣ ಸಾವು