Follow-on Rules In Test: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯ ಭಾಗವಾಗಿ 5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ನಡೆಯುತ್ತಿದೆ. ಈಗಾಗಲೇ ಎರಡು ಪಂದ್ಯಗಳು ಮುಗಿದಿದ್ದು, ಉಭಯ ತಂಡಗಳು ತಲಾ 1-1 ಪಂದ್ಯಗಳನ್ನು ಗೆದ್ದು ಸರಣಿ ಸಮಬಲ ಸಾಧಿಸಿವೆ.
ಇದೀಗ ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ 3ನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎರಡೂ ತಂಡಗಳು ಸೆಣಸುತ್ತಿವೆ. ಸದ್ಯ ನಾಲ್ಕನೇ ದಿನದಾಟ ಮುಕ್ತಾಯಗೊಂಡಿದೆ. ಇನ್ನೊಂದು ದಿನದಾಟ ಮಾತ್ರ ಬಾಕಿ ಇದೆ. ಈ ಪರಿಸ್ಥಿತಿಯನ್ನು ಗಮನಿಸಿದರೆ ಪಂದ್ಯ ಡ್ರಾ ಆಗುವ ಸಾಧ್ಯತೆ ದಟ್ಟವಾಗಿದೆ.
ಮಳೆಪೀಡಿತ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 445 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ 4ನೇ ದಿನದಾಟದ ಮುಕ್ತಾಯದ ವೇಳೆಗೆ 9 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿತು. ಇದರೊಂದಿಗೆ ಫಾಲೋ-ಆನ್ ಭೀತಿಯಿಂದಲೂ ಪಾರಾಯಿತು. ಟೀಂ ಇಂಡಿಯಾವನ್ನು 200 ರನ್‌ಗಳ ಅಂತರದಿಂದ ಆಲೌಟ್ ಮಾಡಿ ಫಾಲೋ-ಆನ್ ಮಾಡಬೇಕೆಂದುಕೊಂಡಿದ್ದ ಕಾಂಗರೂ ಪಡೆಯ ಕನಸು ನನಸಾಗಲಿಲ್ಲ. 9ನೇ ವಿಕೆಟ್‌ಗೆ ಜೊತೆಯಾದ ಬುಮ್ರಾ ಮತ್ತು ಆಕಾಶ್ದೀಪ್ ತಂಡವನ್ನು ಫಾಲೋ-ಆನ್ನಿಂದ ಪಾರು ಮಾಡಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಕೇಳುವ ಫಾಲೋ-ಆನ್ ಅಂದರೆ ಏನು?, ಅದರ ನಿಯಮಗಳೇನು? ಈ ನಿಯಮದಿಂದ ತಂಡಕ್ಕೆ ಯಾವ ರೀತಿ ಲಾಭವಾಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.
ಫಾಲೋ-ಆನ್ ಎಂದರೇನು?: ಸರಳವಾಗಿ ಹೇಳುವುದಾದರೆ, ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಟೆಸ್ಟ್ ಪಂದ್ಯ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿ 500 ರನ್ ಕಲೆ ಹಾಕಿದೆ ಎಂದುಕೊಳ್ಳೋಣ. ಆಗ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 300 ಅಥವಾ ಅದಕ್ಕಿಂತ ಕಡಿಮೆ ರನ್ಗೆ ಆಲೌಟಾಗಿ 200 ರನ್‌ಗಳ ಹಿನ್ನಡೆ ಅನುಭವಿದರೆ, ಭಾರತ ತಂಡದ ನಾಯಕ ಫಾಲೋ-ಆನ್ ಹೇರುವ ಅವಕಾಶವಿರುತ್ತದೆ.
ಅಂದರೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಮುಗಿಸಿದ ಬೆನ್ನಲ್ಲೇ ಮತ್ತೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಬೇಕು. ಎರಡನೇ ಇನ್ನಿಂಗ್ಸ್‌ನಲ್ಲೂ ಇಂಗ್ಲೆಂಡ್ ತಂಡ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ನೀಡಿದ್ದ ಗುರಿ ತಲುಪಲು ಸಾಧ್ಯವಾಗದಿದ್ದರೆ ಆಗ ಭಾರತ ಇನ್ನಿಂಗ್ಸ್‌ಸಮೇತ ಗೆಲುವು ಸಾಧಿಸಿತು ಎಂದು ಘೋಷಿಸಲಾಗುತ್ತದೆ.
ಒಂದು ವೇಳೆ, ಇಂಗ್ಲೆಂಡ್ 200 ರನ್ ಗಳಿಸಿದರೆ ಅದರ ನಂತರ ಎಷ್ಟು ರನ್ ಕಲೆ ಹಾಕಿರುತ್ತದೋ ಅದನ್ನು ಭಾರತ ಚೇಸ್ ಮಾಡಬೇಕಾಗುತ್ತದೆ.
ಫಾಲೋಆನ್ ನಿರ್ಧಾರ ಕೈಗೊಳ್ಳಲು ತಂಡ ಎಷ್ಟು ರನ್ ಮುನ್ನಡೆ ಸಾಧಿಸಿರಬೇಕು?: ಐದು ದಿನಗಳ ಟೆಸ್ಟ್ ಪಂದ್ಯವಾದರೆ 200 ರನ್ ಮುನ್ನಡೆಯಲ್ಲಿದ್ದಾಗ ಮಾತ್ರ ಫಾಲೋಆನ್ ನಿರ್ಧಾರ ಕೈಗೊಳ್ಳಬಹುದು. ರಣಜಿ ಟ್ರೋಫಿಯಂತಹ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಂದರೆ 3-4 ದಿನಗಳ ಪಂದ್ಯಗಳಲ್ಲಿ 150 ರನ್‌ಗಳ ಮುನ್ನಡೆ ಹೊಂದಿರಬೇಕು. ಎರಡು ದಿನದ ಪಂದ್ಯಗಳಲ್ಲಿ 100 ರನ್‌ಗಳ ಮುನ್ನಡೆ, ಒಂದು ದಿನದ ಪಂದ್ಯಗಳಿಗೆ 75 ರನ್‌ಗಳ ಮುನ್ನಡೆ ಅಗತ್ಯವಿರುತ್ತದೆ.
ಫಾಲೋ ಆನ್ ಹೇರಿ ಗೆದ್ದ ತಂಡಗಳಿವು:
ಗೆದ್ದ ತಂಡ | ಅಂತರ | ಯಾರ ವಿರುದ್ಧ? | ಮೈದಾನ | ಪಂದ್ಯ ನಡೆದ ದಿನ |
ಇಂಗ್ಲೆಂಡ್ | 10 ರನ್ | ಆಸ್ಟ್ರೇಲಿಯಾ | ಸಿಡ್ನಿ | 14 ಡಿಸೆಂಬರ್ 1894 |
ಇಂಗ್ಲೆಂಡ್ | 18 ರನ್ | ಆಸ್ಟ್ರೇಲಿಯಾ | ಲೀಡ್ಸ್ | 16 ಜುಲೈ 1981 |
ಭಾರತ | 171 ರನ್ | ಆಸ್ಟ್ರೇಲಿಯಾ | ಈಡನ್ ಗಾರ್ಡನ್ಸ್ | 11 ಮಾರ್ಚ್ 2001 |
ನ್ಯೂಜಿಲೆಂಡ್ | 1 ರನ್ | ಇಂಗ್ಲೆಂಡ್ | ವೆಲ್ಲಿಂಗ್ಟನ್ | 24 ಫೆಬ್ರವರಿ 2023 |