ಬ್ರಿಸ್ಬೇನ್, ಆಸ್ಟ್ರೇಲಿಯಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ನಡುವೆಯೇ ಅನುಭವಿ ಸ್ಪಿನ್ ಬೌಲರ್ ಆರ್. ಅಶ್ವಿನ್ ಅವರು ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಬ್ರಿಸ್ಬೇನ್ನ ಗಬ್ಬಾದಲ್ಲಿ ಮೂರನೇ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡ ಬೆನ್ನಲ್ಲೇ ಅಶ್ವಿನ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮೂಲಕ ಬಿಸಿಸಿಐ ಸ್ಪಿನ್ ದಿಗ್ಗಜನ ಅದ್ಭುತ ವೃತ್ತಿಜೀವನ ಹಾಗೂ ಕ್ರಿಕೆಟ್‌ಗೆ ಅವರು ನೀಡಿರುವ ಕೊಡುಗೆಯನ್ನು ಶ್ಲಾಘಿಸಿದೆ. "ಧನ್ಯವಾದ ಅಶ್ವಿನ್. ಪಾಂಡಿತ್ಯ, ಮಾಂತ್ರಿಕತೆ, ತೇಜಸ್ಸು ಮತ್ತು ನಾವೀನ್ಯತೆಗೆ ಸಮಾನಾರ್ಥಕವಾದ ಹೆಸರು. ಸ್ಪಿನ್ನರ್ ಮತ್ತು ಟೀಮ್ ಇಂಡಿಯಾದ ಅಮೂಲ್ಯ ಆಲ್‌ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಲೆಜೆಂಡರಿ ವೃತ್ತಿಜೀವನಕ್ಕೆ ಅಭಿನಂದನೆಗಳು'' ಎಂದು ಬಿಸಿಸಿಐ ಪೋಸ್ಟ್ ಮಾಡಿದೆ.
𝙏𝙝𝙖𝙣𝙠 𝙔𝙤𝙪 𝘼𝙨𝙝𝙬𝙞𝙣 🫡
— BCCI (@BCCI) December 18, 2024
A name synonymous with mastery, wizardry, brilliance, and innovation 👏👏
The ace spinner and #TeamIndia's invaluable all-rounder announces his retirement from international cricket.
Congratulations on a legendary career, @ashwinravi99 ❤️ pic.twitter.com/swSwcP3QXA
765 ವಿಕೆಟ್ ಕಿತ್ತ ಸಾಧನೆ: 2010ರಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭಿಸಿದ ಅಶ್ವಿನ್ ಸದ್ಯ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೇವಲ ಒಂದು ಟೆಸ್ಟ್ ಆಡಿದ್ದರು. ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ಗಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಅವರು ಕೇವಲ ಒಂದು ವಿಕೆಟ್ ಉರುಳಿಸಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಗೆದ್ದಿತ್ತು. ಅಲ್ಲದೇ, ಬ್ಯಾಟಿಂಗ್ನಲ್ಲಿ 22 ಮತ್ತು 7 ರನ್ ಗಳಿಸಿದ್ದರು. ಭಾರತೀಯ ಕ್ರಿಕೆಟ್‌ಗೆ ಸುದೀರ್ಘ ಸೇವೆ ಸಲ್ಲಿಸಿರುವ ಅಶ್ವಿನ್, ದೇಶದ ಶ್ರೇಷ್ಠ ಆಫ್-ಸ್ಪಿನ್ನರ್‌ಗಳಲ್ಲಿ ಒಬ್ಬರು. ಭಾರತಕ್ಕಾಗಿ 106 ಟೆಸ್ಟ್‌ಗಳು, 116 ಏಕದಿನ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದಾರೆ, ಎಲ್ಲಾ ಸ್ವರೂಪಗಳಲ್ಲಿ ಒಟ್ಟಾರೆ 765 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಶ್ವಿನ್ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್‌ನಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್ ಕಬಳಿಸಿರುವ ಅವರು, 156 ಏಕದಿನ ಹಾಗೂ 72 ಟಿ20 ವಿಕೆಟ್ ಕಿತ್ತಿದ್ದಾರೆ. ಟೆಸ್ಟ್‌ನಲ್ಲಿ 37 ಬಾರಿ 5 ವಿಕೆಟ್ ಹಾಗೂ 8 ಸಲ ಹತ್ತು ವಿಕೆಟ್ ಉರುಳಿಸಿದ್ದಾರೆ. ಅಶ್ವಿನ್ ಟೆಸ್ಟ್‌ನಲ್ಲಿ ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಪ್ರಸ್ತುತ ಟೆಸ್ಟ್‌ಗಳಲ್ಲಿ ಆಫ್-ಸ್ಪಿನ್ನರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆಸೀಸ್ನ ನಾಥನ್ ಲಿಯಾನ್ ಅವರ ದಾಖಲೆಯ ಸಮೀಪವಿದ್ದಾರೆ.
ಬ್ಯಾಟ್ ಮೂಲಕವೂ ಆಸರೆ: ಜೊತೆಗೆ, ಅನೇಕ ಸಲ ತಂಡವು ಇಕ್ಕಟ್ಟಿನಲ್ಲಿ ಸಿಲುಕಿದ್ದಾಗ ಬ್ಯಾಟ್ ಮೂಲಕವೂ ಅಶ್ವಿನ್ ಆಸರೆಯಾಗಿರುವ ಅವರು ಟೆಸ್ಟ್‌ನಲ್ಲಿ 3503 ರನ್ ಬಾರಿಸಿದ್ದಾರೆ. ಜೊತೆಗೆ, ದೀರ್ಘ ಮಾದರಿಯಲ್ಲಿ 6 ಶತಕ ಹಾಗೂ 14 ಅರ್ಧಶತಕಗಳನ್ನು ಬಾರಿಸಿ ಬ್ಯಾಟಿಂಗ್ನಲ್ಲೂ ಮಿಂಚಿದ್ದಾರೆ. ಒಂದು ಏಕದಿನ ಅರ್ಧಶತಕವನ್ನೂ ದಾಖಲಿಸಿದ್ದಾರೆ.
2011 ಮತ್ತು 2013ರಲ್ಲಿ ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲಿ ಅಶ್ವಿನ್ ಇದ್ದರು. ತಮಿಳುನಾಡು ಮೂಲದ ಸ್ಪಿನ್ನರ್ ಭಾರತದ ಪರ ಎಲ್ಲಾ ಸ್ವರೂಪಗಳಲ್ಲಿ 765 ವಿಕೆಟ್‌ಗಳನ್ನು ಪಡೆದು, ಅನಿಲ್ ಕುಂಬ್ಳೆ (951) ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ ದಿಗ್ಗಜ ಅನಿಲ್ ಕುಂಬ್ಳೆ (619) ಭಾರತದ ಪರ ಅಗ್ರ ಸ್ಥಾನದಲ್ಲಿದ್ದಾರೆ. ಧೋನಿ ನಾಯಕತ್ವದಲ್ಲಿ ಪವರ್‌ಪ್ಲೇಯಲ್ಲೇ ದಾಳಿಗಿಳಿಯುತ್ತಿದ್ದ ಅಶ್ವಿನ್ ಕ್ರಿಸ್ ಗೇಲ್‌ರಂತಹ ಆಟಗಾರರನ್ನು ಔಟ್ ಮಾಡುವ ಹೊಸ ವಿಭಿನ್ನ ಪ್ರಯೋಗವನ್ನು ಯಶಸ್ವಿಗೊಳಿಸಿದ್ದರು. ಐಪಿಎಲ್‌ನಲ್ಲಿ ಅಶ್ವಿನ್ ಅವರನ್ನು ವಿಭಿನ್ನವಾಗಿ ಬಳಸಿಕೊಂಡಿದ್ದ ಧೋನಿ, ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದರು.
ಸುಳಿವು ನೀಡಿದ್ದ ಭಾವುಕ ವಿಡಿಯೋ: ಗಬ್ಬಾ ಟೆಸ್ಟ್ನ 5ನೇ ದಿನದಾಟದ ವೇಳೆ ಮಳೆ ಬಂದಿದ್ದರಿಂದ ಬ್ರೇಕ್ ಸಿಕ್ಕಾಗ, ವಿರಾಟ್ ಕೊಹ್ಲಿ ಭಾವುಕರಾಗಿದ್ದ ಅಶ್ವಿನ್ ಅವರನ್ನು ತಬ್ಬಿಕೊಳ್ಳುತ್ತಿರುವ ದೃಶ್ಯವನ್ನು ಕ್ಯಾಮೆರಾಗಳು ಸೆರೆಹಿಡಿದಾಗಲೇ ಆರ್.ಅಶ್ವಿನ್ ನಿವೃತ್ತಿ ಬಗ್ಗೆ ಊಹಾಪೋಹಗಳು ಶುರುವಾಗಿದ್ದವು. ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುತ್ತಿದ್ದಂತೆ ಅಶ್ವಿನ್ ತಮ್ಮ ನಿರ್ಧಾರ ತಿಳಿಸಿದರು.
2025ರ ಐಪಿಎಲ್ ಟೂರ್ನಿಗೆ ಅಶ್ವಿನ್ ಕೆಲ ವರ್ಷಗಳ ಬಳಿಕ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದ್ದರೆ. ಸಿಎಸ್ಕೆ ಅವರನ್ನು 9.75 ಕೋಟಿ ಬೆಲೆಗೆ ಖರೀದಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯ ಹಿನ್ನೆಲೆಯಲ್ಲಿ ಇನ್ನುಮುಂದೆ ಐಪಿಎಲ್‌ನಲ್ಲಿ ಮಾತ್ರ ಅವರು ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಫಾಲೋ-ಆನ್ ಭೀತಿಯಿಂದ ಪಾರಾದ ಭಾರತ: ಟೆಸ್ಟ್ ಕ್ರಿಕೆಟ್‌ನಲ್ಲಿ 'ಫಾಲೋ-ಆನ್ ಅಂದ್ರೇನು?