ಬೆಳಗಾವಿ: ಬೆಳಗಾವಿಯಲ್ಲಿ ನಡೆಯುವ ಗಾಂಧಿ ಭಾರತ ಕಾರ್ಯಕ್ರಮ ಯಾವ ಅಡಚಣೆ ಇಲ್ಲದೇ ಯಶಸ್ವಿಯಾಗಿ ನೆರವೇರಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ದೇವರ ಮೊರೆ ಹೋಗಿದ್ದಾರೆ. ದಕ್ಷಿಣ ಕಾಶಿ ಎಂದೇ ಕರೆಸಿಕೊಳ್ಳುವ ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ ಇಂದು ಡಿಸಿಎಂ ವಿಶೇಷ ಪೂಜೆ ಸಲ್ಲಿಸಿದರು.
ಕಪಿಲೇಶ್ವರ ಮಂದಿರದಲ್ಲಿ ಡಿ.ಕೆ.ಶಿವಕುಮಾರ ಅವರು ಶಿವಲಿಂಗಕ್ಕೆ ಪಂಚಾಮೃತ ಅಭೀಷೇಕ ಮಾಡಿ, ಆರ್ಶೀವಾದ ಪಡೆದರು. ಬಳಿಕ ದೇವಸ್ಥಾನ ಕಮೀಟಿಯು ಡಿಸಿಎಂ ಅವರನ್ನು ಸತ್ಕರಿಸಿತು.
ಈ ದೇಶಕ್ಕೆ ಹೊಸ ಇತಿಹಾಸ ಸೃಷ್ಟಿಯಾಗಬೇಕು. ಸಂವಿಧಾನ ರಕ್ಷಣೆ ಆಗಬೇಕು. ಮಹಾತ್ಮ ಗಾಂಧೀಜಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆದರ್ಶ, ಆಚಾರ, ವಿಚಾರಗಳು ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಆ ಹಿನ್ನೆಲೆಯಲ್ಲಿ ಈಶ್ವರನ ಆಶೀರ್ವಾದ ಸಿಗಲಿ. ಜೊತೆಗೆ ಶಾಂತಿ, ನೆಮ್ಮದಿಯಿಂದ ರಾಜ್ಯದ ಜನತೆಗೆ ಒಳ್ಳೆಯದು ಆಗಲಿ ಎಂದು ಪ್ರಾರ್ಥಿಸಿ 111 ಲೀಟರ್ ಹಾಲಿನಿಂದ ಕ್ಷೀರಾಭಿಷೇಕ ಮಾಡಿದ್ದೇನೆ. ಭಗವಂತನಲ್ಲಿ ಬಹಳ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದ್ದೇನೆ. ಅದೇ ರೀತಿ ಕಾರ್ಯಕ್ರಮವೂ ಯಶಸ್ವಿಯಾಗಬೇಕು. ರಾಜ್ಯದ ಜನತೆಗೂ ಮತ್ತು ಮಾಧ್ಯಮಗಳಿಗೂ ಒಳ್ಳೆಯದು ಆಗಲಿ ಎಂದು ಪೂಜೆ ಮಾಡಿದ್ದೇನೆ ಎಂದರು.

ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳವೇ ದೇವಾಲಯ. ನಮ್ಮ ಹಿಂದೂ ಧರ್ಮದಲ್ಲಿ ಎಲ್ಲ ದೇವರಗಿಂತ ದೊಡ್ಡ ದೇವರು ಪರಮೇಶ್ವರ. ಪರಮೇಶ್ವರನ ಪ್ರತಿರೂಪ ಈಶ್ವರ. ಕಪಿಲೇಶ್ವರ ದೇವಸ್ಥಾನವನ್ನು ದಕ್ಷಿಣ ಕಾಶಿ ಅಂತಾ ಕರೆಯುತ್ತಾರೆ. 1924ರಲ್ಲಿ ಕಾಂಗ್ರೆಸ್ ಅಧಿವೇಶನಕ್ಕೆ ಬಂದ ವೇಳೆ ಮಹಾತ್ಮ ಗಾಂಧೀಜಿ ಈ ಕಪಿಲೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಅದೇ ರೀತಿ ಬಾಲಗಂಗಾಧರ ತಿಲಕ್, ಸ್ವಾಮಿ ವಿವೇಕಾನಂದ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಇಲ್ಲಿಗೆ ಬಂದ ಇತಿಹಾಸವಿದೆ. ಹಾಗಾಗಿ, ನಾನು ಬಂದು ಪೂಜೆ ಸಲ್ಲಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕುಂಭಮೇಳಕ್ಕೆ ಹೋಗುತ್ತೇನೆ: ನಾನು ಕೂಡ ಈ ಬಾರಿ ಕುಂಭಮೇಳಕ್ಕೆ ಹೋಗುತ್ತಿದ್ದೇನೆ. ಉತ್ತರಪ್ರದೇಶ ಸರ್ಕಾರದ ಹಿರಿಯ ಸಚಿವರು ನನಗೆ ಆಹ್ವಾನಿಸಿದ್ದಾರೆ. ಯಾವುದೇ ಧರ್ಮದವರು ಆಗಲಿ, ಎಲ್ಲರಿಗೂ ಒಂದೊಂದು ನಂಬಿಕೆ ಇರುತ್ತದೆ ಎಂದ ಡಿ.ಕೆ.ಶಿವಕುಮಾರ ತಿಳಿಸಿದರು.
ಈ ವೇಳೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಬಾಳ್ಕರ್ ಸೇರಿ ಮತ್ತಿತರರು ಇದ್ದರು.
ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶಕ್ಕೆ 100 ವರ್ಷವಾದ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಜ.21ರಂದು ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: 'ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ಕೆಲಸ, ಬೇರೆಯವರ ಮಾತು ಗೌಣ': ಡಿಕೆಶಿ ಖಡಕ್ ನುಡಿ
ಇದನ್ನೂ ಓದಿ: 'ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್' ; ಶೃಂಗೇರಿಯಲ್ಲಿ ಘೋಷಣೆ ಕೂಗಿದ ಕಾರ್ಯಕರ್ತರು