ಚೆನ್ನೈ:ಐಪಿಎಲ್ ಟೂರ್ನಿಯ ಡೇಂಜರಸ್ ತಂಡ ಎನಿಸಿಕೊಂಡಿದ್ದ ಸನ್ರೈಸರ್ಸ್ ಹೈದರಾಬಾದ್, ಚೆಪಾಕ್ ಕ್ರೀಡಾಂಗಣದಲ್ಲಿ ಮಕಾಡೆ ಮಲಗಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 78 ರನ್ಗಳ ಹೀನಾಯ ಸೋಲು ಕಂಡಿತು. ಇದಕ್ಕೆ ಕಾರಣವಾಗಿದ್ದು, ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ತುಷಾರ್ ದೇಶಪಾಂಡೆ.
ದೈತ್ಯ ಬ್ಯಾಟಿಂಗ್ ಪಡೆಯೊಂದಿಗೆ ಈ ಋತುವಿನ ಐಪಿಎಲ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ತಂಡ 134 ರನ್ಗೆ ಆಲೌಟ್ ಆಗಿ ಅಚ್ಚರಿ ಮೂಡಿಸಿತು. ಇದು 17ನೇ ಆವೃತ್ತಿಯಲ್ಲಿ ತಂಡವೊಂದು ದಾಖಲಿಸಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ. ಸಿಎಸ್ಕೆಗೆ ಭಾರಿ ಸವಾಲಿನ ಬೆದರಿಕೆ ಹಾಕಿದ್ದ ತಂಡ, ತಾಳ - ಮೇಳ ಕಳೆದುಕೊಂಡು, ಟೂರ್ನಿಯಲ್ಲಿ 4 ಸೋಲು ಅನುಭವಿಸಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿತು.
ಬ್ಯಾಟಿಂಗ್ ಪಡೆಯೇ ಧ್ವಂಸ:ಹೈದರಾಬಾದ್ ತಂಡವು ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದೆ. ಆಡಿದ 9 ಪಂದ್ಯಗಳಲ್ಲಿ ಎರಡು ಬಾರಿ ಐಪಿಎಲ್ ಸಾರ್ವಕಾಲಿಕ ದಾಖಲೆ ಸೃಷ್ಟಿಸಿ, ಸಂಚಲ ಮೂಡಿಸಿದೆ. ಇಂತಹ ದೈತ್ಯ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ತಂಡ ಕೇವಲ 134 ರನ್ಗೆ ಮೊದಲ ಬಾರಿಗೆ ಆಲೌಟ್ ಆಗಿದ್ದಲ್ಲದೇ, ಸತತ ಎರಡನೇ ಮುಖಭಂಗ ಅನುಭವಿಸಿತು. ಟ್ರಾವಿಸ್ ಹೆಡ್ 13, ಅಭಿಷೇಕ್ ಶರ್ಮಾ 15, ಅನ್ಮೋಲ್ ಪ್ರೀತ್ ಸಿಂಗ್ 0, ನಿತೀಶ್ ರೆಡ್ಡಿ 15, ಹೆನ್ರಿಕ್ ಕ್ಲಾಸಿನ್ 20, ಅಬ್ದುಲ್ ಸಮದ್ 19, ಆ್ಯಡಂ ಮಾರ್ಕ್ರಮ್ 32 ರನ್ ಮಾತ್ರ ಗಳಿಸಿದರು. ಕನಿಷ್ಠ 10 ರಿಂದ 15 ರನ್ಗಳ ಅಂತರದಲ್ಲಿ ಒಂದು ಅಥವಾ 2 ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಪತನಗೊಂಡಿತು.