ಚೆನ್ನೈ (ತಮಿಳುನಾಡು) :ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ಗಳು ಗುಜರಾತ್ ಟೈಟಾನ್ಸ್ ತಂಡಕ್ಕೆ 207 ರನ್ಗಳ ಬೃಹತ್ ಟಾರ್ಗೆಟ್ ನೀಡಿದ್ದಾರೆ. ಮಾಧ್ಯಮ ಕ್ರಮಾಂಕದಲ್ಲಿ ಅಬ್ಬರದ ಆಟವಾಡಿದ ಶಿವಂ ದುಬೆ ಅರ್ಧಶತಕದ ಬಲದಿಂದ ಸಿಎಸ್ಕೆ 206 ರನ್ಗಳನ್ನು ಪೇರಿಸಲು ಸಾಧ್ಯವಾಯಿತು.
ಗುಜರಾತ್ ವಿರುದ್ದ ಟಾಸ್ ಸೋತು ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಬ್ಯಾಟಿಂಗ್ ಆರಂಭಿಸಿದರು. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಎದುರು ತೋರಿದ ಪರಕ್ರಮ ಬ್ಯಾಟಿಂಗ್ ಶೈಲಿಯನ್ನು ಮುಂದುವರೆಸಿದ ಈ ಜೋಡಿ 62 ಜೊತೆಯಾಟವಾಡಿತು. ಈ ಮೂಲಕ ಪವರ್ ಫ್ಲೇನಲ್ಲಿ ಸಿಎಸ್ಕೆ ಮುನ್ನಡೆ ಸಾಧಿಸಿತು. ರಚಿನ್ ರವೀಂದ್ರ ಕೇವಲ 20 ಚೆಂಡುಗಳಲ್ಲಿ ಆರು ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ ಮಿಂಚಿದರು. ನಾಯಕನ ಆಟವಾಡಿದ ಋತುರಾಜ್ ಗಾಯಕ್ವಾಡ್ ಕೂಡ 36 ಚೆಂಡುಗಳಲ್ಲಿ 46 ರನ್ಗಳನ್ನು ಗಳಿಸಿದರು. ತಂಡದ ಮೊತ್ತ 62 ರನ್ ಇರುವಾಗ ರಚಿನ್ ವಿಕೆಟ್ ಕೆಳದುಕೊಂಡರೆ, 104 ರನ್ಗೆ ಎರಡನೇ ವಿಕೆಟ್ ಆಗಿ ಗಾಯಕ್ವಾಡ್ ಔಟ್ ಆದರು.
ನಂತರ ಬಂದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಹೇಳಿಕೊಳ್ಳವಂತ ಪ್ರದರ್ಶನವನ್ನು ನೀಡಿಲಿಲ್ಲ. 12 ರನ್ ಗಳಿಸಿ ಔಟ್ ಆಗುವ ಮೂಲಕ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಈ ಹಂತದಲ್ಲೂ ಸಿಎಸ್ಕೆ ಬ್ಯಾಟರ್ಗಳನ್ನು ತವರಿನಲ್ಲಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳಲ್ಲಿಲ್ಲ. ಸಿಡಿದೆದ್ದ ಯುವ ಆಲ್ ರೌಂಡರ್ ಶಿವಂ ದುಬೆ ಗುಜರಾತ್ ಬೌಲರ್ಸ್ಗಳನ್ನು ಮನ ಬಂದಂತೆ ದಂಡಿಸಿದರು. ಡೇರಿಲ್ ಮಿಚೆಲ್ ಜೊತೆಯಾದ ದುಬೆ ಮೈದಾನ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 23 ಚೆಂಡುಗಳನ್ನು ಎದುರಿದ ಶಿವಂ ದುಬೆ 53 ರನ್ಗಳನ್ನು ಗಳಿಸಿ ಕ್ಯಾಚ್ ಕೊಟ್ಟು ಕ್ರೀಸ್ನಿಂದ ನಿರ್ಗಮಿಸಿದರು.
ಕೊನೆಯ ಡೆತ್ ಐದರು ಓವರ್ಗಳಲ್ಲಿ ಸಿಎಸ್ಕೆ ಮೂರು ವಿಕೆಟ್ ಕಳೆದುಕೊಂಡರೂ ರನ್ ವೇಗವನ್ನು ಕಡಿಮೆ ಮಾಡಲಿಲ್ಲ. ಸಮೀರ್ ರಿಜ್ವಿ (14) ಎರಡು ಸಿಕ್ಸರ್ ಹೊಡೆದು ಔಟ್ ಆದರು. ಬಳಿಕ ರವೀಂದ್ರ ಜಡೇಜಾ (7) ಸಹಾ ಒಂದು ಬೌಂಡರಿ ಗಳಿಸಿ ರನ್ ಔಟ್ಗೆ ಬಲಿಯಾದರು. ಡೇರಿಲ್ ಮಿಚೆಲ್ ಮಾತ್ರ ತಾಳ್ಮೆಯುಕ್ತ ಆಟವಾಡುವ ಮೂಲಕ ಉಳಿದ ಬ್ಯಾಟರ್ಗಳಿಗೆ ದೊಡ್ಡ ಹೊಡೆತ ಹೊಡೆಯುವುದಕ್ಕೆ ಸಾಥ್ ನೀಡಿದರು. ಹೀಗಾಗಿ ಮಿಚೆಲ್ 24 ರನ್ ಬಾರಿಸುವ ಮೂಲಕ ಅಜೇಯರಾಗಿ ಉಳಿದರು.