ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಸಿಸಿ ಚಾಂಪಿಯನ್ಶಿಪ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತೆಯರು ರನ್ ಮಳೆ ಸುರಿಸಿದರು. ಚಿಕ್ಕ ಬೌಂಡರಿಯಲ್ಲಿ ಎರಡೂ ಇನ್ನಿಂಗ್ಸ್ ಮೂಲಕ ಬರೋಬ್ಬರಿ 646 ರನ್ಗಳು ಹರಿದುಬಂದವು. ಕೊನೆಯ ಎಸೆತದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ 4 ರನ್ಗಳಿಂದ ಗೆಲುವಿನ ಕೇಕೆ ಹಾಕಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿರುವಾಗಲೇ 2-0 ಅಂತರದಿಂದ ಭಾರತೀಯ ವನಿತೆಯರು ಜಯಿಸಿದರು.
ಭಾನುವಾರ ಇದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಬಳಗ 143 ರನ್ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು. ಇಂದಿನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕಿ ಲೌರಾ ವೊಲ್ವಾರ್ಡ್ಟ್ ಟಾಸ್ ಗೆದ್ದು, ಭಾರತೀಯ ವನಿತೆಯರಿಗೆ ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.
ಹರಿಣ ಪಡೆಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (136) ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ (103 ಅಜೇಯ) ನೆರವಿನಿಂದ ಕೇವಲ ಮೂರು ವಿಕೆಟ್ ನಷ್ಟಕ್ಕೆ ಟೀಂ ಇಂಡಿಯಾ 325 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆಟಗಾರ್ತಿಯರು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಲಷ್ಟೇ ಶಕ್ತವಾದರು.
ಎರಡು ಇನ್ನಿಂಗ್ಸ್; ತಲಾ ಎರಡು ಸೆಂಚುರಿ!: ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಮಂಧಾನ ಹಾಗೂ ಕೌರ್ ಇಬ್ಬರೂ ಶತಕ ಸಿಡಿಸಿ ಮಿಂಚಿದರು. ನಂತರ ಬೃಹತ್ ಟಾರ್ಗೆಟ್ ಅನ್ನು ಸವಾಲಾಗಿ ಸ್ವೀಕರಿಸಿದ ದಕ್ಷಿಣ ಆಫ್ರಿಕಾ ನಾಯಕಿ ವೂಲ್ವಾರ್ಡ್ ಹಾಗೂ ಮರಿಝನ್ನೆ ಕಪ್ಪ್ ಸಹ ಅಮೋಘ ಬ್ಯಾಟಿಂಗ್ ಮೂಲಕ ಶತಕ ಬಾರಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಸ್ಮೃತಿ ಮತ್ತು ಕೌರ್ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ ವೂಲ್ವಾರ್ಡ್, ಕಪ್ಪ್ ಜೋಡಿ ಅತ್ಯುತ್ತಮ ಜೊತೆಯಾಟ ನೀಡಿ ಪ್ರೇಕ್ಷಕರ ಮನಸೂರೆಗೊಳಿಸಿತು.
ಮಂಧಾನ-ಕೌರ್; 171 ರನ್ ಜೊತೆಯಾಟ: ಭಾರತದ ಪರ ಮಂಧಾನ ಜೊತೆಗೆ ಕ್ರೀಸ್ಗೆ ಬಂದಿದ್ದ ಶಫಾಲಿ ವರ್ಮಾ 20 ರನ್ಗೆ ವಿಕೆಟ್ ಒಪ್ಪಿಸಿದರು. ಎರಡನೇ ಕ್ರಮಾಂಕದಲ್ಲಿ ಬಂದ ಹೇಮಲತಾ ಸಹ 24 ರನ್ಗೆ ಸೀಮಿತವಾದರು. ಈ ವೇಳೆ, ತಂಡದ ಮೊತ್ತ 23 ಓವರ್ಗಳಲ್ಲಿ ಕೇವಲ 100 ರನ್ ಆಗಿತ್ತು. ಆಗ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಸ್ಮೃತಿ ಮಂಧಾನ ಜೊತೆಗೂಡಿದರು. ಈ ಜೋಡಿ ಅದ್ಭುತ ಹೊಡೆತಗಳೊಂದಿಗೆ ರನ್ ವೇಗ ನೀಡಿದರು. ಇದರ ನಡುವೆ ಬಿರುಸಾಗಿ ಬ್ಯಾಟ್ ಬೀಸಿದ ಸ್ಮೃತಿ ಮಂಧಾನ 103 ಎಸೆತಗಳಲ್ಲಿ ಶತಕ ಪೂರೈಸಿದರು. ಏಕದಿನ ಕ್ರಿಕೆಟ್ನಲ್ಲಿ 7ನೇ ಶತಕದ ದಾಖಲೆ ಬರೆದರು.