ಬೆಂಗಳೂರು: ದೇಶದಲ್ಲಿ ಕ್ರಿಕೆಟ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು (NCA) ಬಿಸಿಸಿಐ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ಎನ್ಸಿಎ ದೇಶದ ಕ್ರಿಕೆಟ್ ಬೆಳವಣಿಗೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ ಎಂದು ಬಿಸಿಸಿಐ ಆಶಿಸಿದೆ. ಹಾಗಾದ್ರೆ ಹೊಸದಾಗಿ ಆರಂಭವಾಗಿರುವ ಈ ನೂತನ ಕ್ರಿಕೆಟ್ ಅಕಾಡೆಮಿಯಲ್ಲಿ ಇರುವಂತಹ ಅತ್ಯಾಧುನಿಕ ಸೌಲಭ್ಯಗಳು ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ..
ಎನ್ಸಿಎಯಲ್ಲಿನ ಸೌಲಭ್ಯಗಳು:40 ಎಕರೆಯಲ್ಲಿ ನಿರ್ಮಾಣಗೊಂಡಿರುವ ಎನ್ಸಿಎ, ಮೂರು ವಿಶ್ವ ದರ್ಜೆಯ ಕ್ರೀಡಾ ಮೈದಾನಗಳು, ಒಳಾಂಗಣ ಮತ್ತು ಹೊರಾಂಗಣ ಸೇರಿದಂತೆ ಒಟ್ಟು 86 ಪಿಚ್ಗಳನ್ನು ಹೊಂದಿದೆ. ಗ್ರೌಂಡ್ A ನಲ್ಲಿರುವ ಮೈದಾನವು 85 ಗಜ ಸುತ್ತಳತೆಯ ಬೌಂಡರಿಯನ್ನು ಹೊಂದಿದ್ದು, ಇದರಲ್ಲಿ ಮುಂಬೈನ ಕೆಂಪು ಮಣ್ಣು ಬಳಸಲಾಗಿದೆ. ಜತೆಗೆ ಅತ್ಯಾಧುನಿಕ ಫ್ಲಡ್ ಲೈಟಿಂಗ್ನೊಂದಿಗೆ ಪ್ರಸಾರ ಸೌಲಭ್ಯಗಳು ಇಲ್ಲಿವೆ. ಫ್ಲಡ್ ಲೈಟ್‌ಗಳ ಮೂಲಕವೇ ಪಂದ್ಯಗಳನ್ನು ನಡೆಸಬಹುದಾಗಿದೆ. ಇನ್ನು B, C ಮೈದಾನದ ಬೌಂಡರಿಯ ಸುತ್ತಳತೆ 75 ಗಜಗಳಷ್ಟಿದ್ದು, ಇದು ಅಭ್ಯಾಸದ ಮೈದಾನವಾಗಿ ಕಾರ್ಯನಿರ್ವಹಿಸಲಿದೆ. ಇವುಗಳಲ್ಲಿ ಮಂಡ್ಯದ ಮಣ್ಣು ಮತ್ತು ಒಡಿಶಾದ ಕಪ್ಪು ಹತ್ತಿ ಮಣ್ಣು ಬಳಕೆ ಮಾಡಲಾಗಿದೆ.
ಮಳೆ ಬಂದರೂ ನೋ ಟೆನ್ಷನ್:ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಬ್ ಸರ್ಫೇಸ್ ಡ್ರೈನೇಜ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಮೈದಾನದಲ್ಲಿ ಮಳೆ ಬಂದರೂ ಕ್ಷಣಾರ್ಧದಲ್ಲೇ ನೀರು ಹೀರಿಕೊಳ್ಳಲಿದೆ. ವೈಟ್ ಪಿಕೆಟ್ ಫೆನ್ಸಿಂಗ್ ಕೂಡ ಹಾಕಲಾಗಿದ್ದು, ಈ ಮೈದಾನಗಳು ಇಂಗ್ಲಿಷ್ ಕೌಂಟಿ ಪಿಚ್‌ನಂತೆ ಕಾಣುತ್ತವೆ. ಅಲ್ಲದೇ 45 ಔಟ್ಡೋರ್ ನೆಟ್ ಪ್ರಾಕ್ಟಿಸ್ ಪಿಚ್ಗಳು ಇವೆ. ಇವುಗಳಲ್ಲಿ UKಯಿಂದ ತರಲಾದ ಸೇಫ್ಟಿ ನೆಟ್ಸ್ ಬಳಕೆ ಮಾಡಲಾಗಿದೆ. ಇದರ ಜೊತೆಗೆ ಆರು ಹೊರಾಂಗಣ ರನ್ನಿಂಗ್ ಟ್ರ್ಯಾಕ್‌ಗಳನ್ನು ಸ್ಥಾಪಿಸಲಾಗಿದೆ.