ಕರ್ನಾಟಕ

karnataka

ETV Bharat / sports

ಐಪಿಎಲ್ ಪಂದ್ಯದ​ ವೇಳೆ ವಿಡಿಯೋ, ಫೋಟೋ ತೆಗೆದರೆ ದಂಡ: ಬಿಸಿಸಿಐ ಎಚ್ಚರಿಕೆ - BCCI Warning - BCCI WARNING

ಐಪಿಎಲ್​ ಪಂದ್ಯದ ವೇಳೆ ಲೈವ್​ ವಿಡಿಯೋ ಮತ್ತು ಫೋಟೋ ತೆಗೆಯದಂತೆ ಬಿಸಿಸಿಐ ಎಚ್ಚರಿಸಿದೆ.

ಐಪಿಎಲ್ ಪಂದ್ಯದ​ ವೇಳೆ ವಿಡಿಯೋ, ಫೋಟೋ ತೆಗೆದರೆ ದಂಡ
ಐಪಿಎಲ್ ಪಂದ್ಯದ​ ವೇಳೆ ವಿಡಿಯೋ, ಫೋಟೋ ತೆಗೆದರೆ ದಂಡ

By ETV Bharat Karnataka Team

Published : Apr 15, 2024, 7:16 PM IST

ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯ ನಡೆಯುವ ವೇಳೆ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡದಂತೆ ಆಟಗಾರರು, ವೀಕ್ಷಕ ವಿವರಣೆಗಾರರು (ಕಾಮೆಂಟೇಟರ್ಸ್) ಸೇರಿದಂತೆ ಫ್ರಾಂಚೈಸಿ ಮಾಲೀಕರಿಗೆ ​ಬಿಸಿಸಿಐ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದೆ.

ವರದಿಯ ಪ್ರಕಾರ, ಭಾರತದ ಮಾಜಿ ಬ್ಯಾಟರ್‌​ವೊಬ್ಬರು ಇತ್ತೀಚೆಗೆ ನಡೆದ ಐಪಿಎಲ್​ ಪಂದ್ಯವೊಂದರಲ್ಲಿ ವೀಕ್ಷಕ ವಿವರಣೆಗಾರರಾಗಿದ್ದರು. ಈ ಸಂದರ್ಭದಲ್ಲಿ ಪಂದ್ಯದ ವಿವರಣೆ ಮಾಡುವಾಗ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಐಪಿಎಲ್​ ಪ್ರಸಾರ ಹಕ್ಕುದಾರರು ಬಿಸಿಸಿಐ ಮುಂದೆ ತೀವ್ರ ಅಸಮಾಧಾನ ಹೊರಹಾಕಿದ್ದರು.

ಕೂಡಲೇ ಕ್ರಮ ಕೈಗೊಂಡ ಬಿಸಿಸಿಐ ಫೋಟೋವನ್ನು ತೆಗೆದುಹಾಕುವಂತೆ ಕಾಮೆಂಟೇಟರ್​ಗೆ ಆದೇಶಿಸಿದೆ. ಅಲ್ಲದೇ ಪಂದ್ಯದ ವೇಳೆ ಲೈವ್​ ವಿಡಿಯೋ ಅಥವಾ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೆ ದಂಡ ಪಾವತಿಸಬೇಕಾಗುತ್ತದೆ. ಕೇವಲ ಕಾಮೆಂಟೇಟರ್ಸ್​ಗೆ ಮಾತ್ರವಲ್ಲದೇ ಆಟಗಾರರು, ಫ್ರಾಂಚೈಸಿ ಮಾಲೀಕರಿಗೂ ಈ ನಿಯಮ ಅನ್ವಯ ಎಂದಿದೆ.

ಬಿಸಿಸಿಐ ಅಧಿಕಾರಿಗಳು ಮಾಧ್ಯಮಕ್ಕೆ ನೀಡಿದ ಮಾಹಿತಿ ಪ್ರಕಾರ, ಪಂದ್ಯದ ಪ್ರಸಾರದ ಹಕ್ಕುಗಳಿಗಾಗಿ ಐಪಿಎಲ್​ ಪ್ರಸಾರಕರು ಬಿಸಿಸಿಐಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ. ಹಾಗಾಗಿ ಪಂದ್ಯ ನಡೆಯುವ ವೇಳೆ ಲೈವ್​ ವಿಡಿಯೋ ಮಾಡುವುದಾಗಲಿ ಅಥವಾ ಫೋಟೋ ತೆಗೆಯುವುದಾಗಲಿ ನಿರ್ಬಂಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ ಅಂಥವರ ವಿರುದ್ದ ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳಲಿದೆ.

ಇತ್ತೀಚೆಗೆ ತಂಡವೊಂದು ಪಂದ್ಯದ ಲೈವ್​ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಆ ವಿಡಿಯೋ 10 ಲಕ್ಷಕ್ಕೂ ಮೀರಿ ವೀಕ್ಷಣೆ ಕಂಡಿತ್ತು. ಇದನ್ನು ಗಮನಿಸಿದ ಬಿಸಿಸಿಐ ಆ ತಂಡಕ್ಕೆ 9 ಲಕ್ಷ ದಂಡ ವಿಧಿಸಿದೆ ಎಂದು ಅಧಿಕಾರಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದರು.

ಫ್ರಾಂಚೈಸಿಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸೀಮಿತ ಸಂಖ್ಯೆಯ ಫೋಟೋಗಳನ್ನು ಮಾತ್ರ ಪೋಸ್ಟ್ ಮಾಡಬಹುದಾಗಿದೆ ಮತ್ತು ಪಂದ್ಯದ ಅಪ್‌ಡೇಟ್‌ ಬಗ್ಗೆ ತಿಳಿಸಬಹುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:ಹೈದರಾಬಾದ್​ ಸವಾಲು ಗೆಲ್ಲುತ್ತಾ ಆರ್​ಸಿಬಿ: ಸೋತರೆ ಪ್ಲೇ ಆಫ್​ ರೇಸ್​ನಿಂದ ಬಹುತೇಕ ಔಟ್ - rcb vs srh

ABOUT THE AUTHOR

...view details