ನವದೆಹಲಿ: ಪ್ಯಾರಿಸ್ ಒಲಿಂಪಿಕ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ದೇಹ ತೂಕ ಹೆಚ್ಚಳದಿಂದಾಗಿ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಘಟನೆ ಬಳಿಕ ಪ್ಯಾರಿಸ್ನಲ್ಲೇ ತಂಗಿದ್ದ ವಿನೇಶ್ ಇಂದು ಸ್ವದೇಶಕ್ಕೆ ಮರಳಿದ್ದಾರೆ. ಈ ವೇಳೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸಹ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಕೂಡ ಭಾಗಿಯಾಗಿದ್ದರು.
ಆದ್ರೆ ವಿನೇಶ್ ಅವರನ್ನು ಸ್ವಾಗತಿಸುವಾಗ ಬಜರಂಗ್ ಪುನಿಯಾ ರಾಷ್ಟ್ರೀಯ ಧ್ವಜವಿದ್ದ ಪೋಸ್ಟರ್ ಮೇಲೆ ಪಾದರಕ್ಷೆಗಳನ್ನು ಧರಿಸಿ ನಿಂತಿದ್ದು ಕಂಡು ಬಂದಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ವಿಡಿಯೋದಲ್ಲಿ, ಕಾರಿನ ಬಾನೆಟ್ ಮೇಲೆ ಭಾರತ ಧ್ವಜವಿರುವ ಪೋಸ್ಟರ್ ಹಾಕಲಾಗಿತ್ತು. ಈ ವೇಳೆ ಜನಸಂದಣಿ ಮತ್ತು ಮಾಧ್ಯಮವನ್ನು ನಿಭಾಯಿಸಲು ಮುಂದಾದ ಪುನಿಯಾ ಕಾರಿನ ಬಾನೆಟ್ ಮೇಲೆ ಹತ್ತಿ ಅಜಾಗರೂಕತೆಯಿಂದ ಪಾದರಕ್ಷೆ ಧರಿಸಿ ಪೋಸ್ಟರ್ ಮೇಲೆ ನಿಂತಿರುವುದು ಕಂಡುಬಂದಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸುತ್ತಿದ್ದಂತೆ ನೆಟಿಜನ್‌ಗಳು ಭಾರತೀಯ ಕುಸ್ತಿಪಟು ತ್ರಿವರ್ಣ ಧ್ವಜವಿರುವ ಪೋಸ್ಟರ್ ಮೇಲೆ ನಿಂತು ಭಾರತದ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, 'ಬಜರಂಗ್ ಪುನಿಯಾ ತ್ರಿವರ್ಣ ಧ್ವಜವಿರುವ ಪೋಸ್ಟರ್ ಮೇಲೆ ನಿಂತಿದ್ದಾರೆ. ಅಲ್ಲಿದ್ದ ದಿಪೇಂದರ್ ಸಿಂಗ್ ಹೂಡಾ ಕೂಡ ಅವರನ್ನು ತಡೆದಿಲ್ಲ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ದೇಶದ ತ್ರಿವರ್ಣ ಧ್ವಜದ ಮೇಲೆ ಬಜರಂಗ್ ಪುನಿಯಾ ತನ್ನ ಪಾದಗಳನ್ನು ಇಟ್ಟುಕೊಂಡಿದ್ದಾರೆ. ಈಗ ಈ ಕುಸ್ತಿಪಟುವಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, 'ಬಜರಂಗ್ ಪುನಿಯಾ ಅವರ ಅತ್ಯಂತ ನಾಚಿಕೆಗೇಡಿನ ಕೃತ್ಯ ಇದು! ಪುನಿಯಾಗೆ ನಾಚಿಕೆಯಾಗಬೇಕು, ಅವರು ನಮ್ಮ ರಾಷ್ಟ್ರೀಯ ತ್ರಿವರ್ಣ ಧ್ವಜದ ಮೇಲೆ ನಿಂತು ಪತ್ರಕರ್ತರ ಮೈಕ್ ಹಿಡಿದಿದ್ದಾರೆ. ಬಜರಂಗ್ ಪುನಿಯಾಗೆ ಹೇಗಾದರೂ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂದು ನಮಗೆ ತಿಳಿದಿದೆ. ಇಟಾಲಿಯನ್ ಕುಟುಂಬವನ್ನು ಮೆಚ್ಚಿಸಲು ಈ ರೀತಿ ಮಾಡುವುದು ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಮೈದಾನಗಳಿಗೆ ಬಾಡಿಗೆ ಫ್ಲಡ್ಲೈಟ್ ಅಳವಡಿಸಲು ಮುಂದಾದ ಪಾಕಿಸ್ತಾನ: ನೆಟ್ಟಿಗರಿಂದ ಟ್ರೋಲ್ - RENTAL FLOODLIGHTS