Ind vs Aus: ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ನಾಲ್ಕನೇ (ಬಾಕ್ಸಿಂಗ್ ಡೇ) ಟೆಸ್ಟ್ ಪ್ರಾರಂಭವಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ಒಂದೇ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯಕವಾಗಿರಲಿದೆ ಎಂಬ ದೃಷ್ಟಿಯಿಂದಾಗಿ ಭಾರತ ತಂಡ ಇಬ್ಬರು ಸ್ಪಿನ್ನರ್ಗಳನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.
ಈ ಸರಣಿಯಲ್ಲಿ ಸತತ ವಿಫಲವಾದ ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ಕೂಡ ಅಂತಿಮ ತಂಡದಲ್ಲಿ ಎರಡು ಬದಲಾವಣೆ ಮಾಡಿದೆ. 19ರ ಹರೆಯದ ಆರಂಭಿಕ ಬ್ಯಾಟ್ಸ್‌ಮನ್ ಸ್ಯಾಮ್ ಕೊನ್‌ಸ್ಟಾಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರ ಬಿದ್ದಿರುವ ಜೋಶ್ ಹೇಜಲ್‌ವುಡ್ ಬದಲಿಗೆ ಸ್ಕಾಟ್ ಬೋಲ್ಯಾಂಡ್ ಅವರನ್ನು ಆಯ್ಕೆ ಮಾಡಲಾಗಿದೆ.
ಏತನ್ಮಧ್ಯೆ ಮೊದಲ ದಿನದಾಟದಲ್ಲಿ ವಿರಾಟ್ ಕೊಹ್ಲಿ ಯುವ ಆಟಗಾರನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಮೈದಾನದಲ್ಲಿ ಸದಾ ಆಕ್ರಮಣಕಾರಿಯಾಗಿ, ಎದುರಾಳಿಗಳ ವಿರುದ್ದ ಘರ್ಜಿಸುವ ಕೊಹ್ಲಿ ಈ ಬಾರಿ ಬೇಕಂತಲೇ ಯುವ ಆಟಗಾರನನ್ನು ಕೆಣಕಿ ವಾಗ್ವಾದಕ್ಕಿಳಿದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.