ಹೈದರಾಬಾದ್: ಏಪ್ರಿಲ್ 19 'ಪ್ಲೇ ಟ್ರೂ ಡೇ'ದಿನವಾಗಿದ್ದು ವಾರ್ಷಿಕವಾಗಿ ಆಚರಿಸಲಾಗುತ್ತದೆ. ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿ (ವಾಡಾ) ಮತ್ತು ಜಾಗತಿಕ ಡೋಪಿಂಗ್ ವಿರೋಧಿ ಸಮುದಾಯ ಈ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಪ್ರತಿ ವರ್ಷ ಆಚರಿಸುತ್ತದೆ.
ಪ್ಲೇ ಟ್ರೂ ಡೇ ದಿನವು ಕ್ರೀಡೆಗಳಲ್ಲಿ ನ್ಯಾಯಯುತ ಆಟದ ಪ್ರಾಮುಖ್ಯತೆ ಎತ್ತಿ ತೋರಿಸುತ್ತದೆ. ಜತೆಗೆ ವಿಶ್ವಾದ್ಯಂತ ಡೋಪಿಂಗ್ ವಿರುದ್ಧದ ಹೋರಾಟ ಉತ್ತೇಜಿಸುತ್ತದೆ. 2013 ರಲ್ಲಿ ನಡೆದ ಶಿಕ್ಷಣ ಸಮ್ಮೇಳನದಿಂದ ಈ ದಿನವನ್ನು ಆರಂಭಿಸಲಾಗಿದೆ. ಆ ಸಮ್ಮೇಳನದಲ್ಲಿ 17 ದಕ್ಷಿಣ ಅಮೆರಿಕದ ದೇಶಗಳು ಭಾಗವಹಿಸಿದ್ದವು. ವರ್ಷ ಕಳೆದಂತೆ ಕ್ರೀಡಾಪಟುಗಳು, ಕ್ರೀಡಾ ಒಕ್ಕೂಟಗಳು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಡೋಪಿಂಗ್ ವಿರೋಧಿ ಸಂಸ್ಥೆಗಳು ಮತ್ತು ಪ್ರಮುಖ ಈವೆಂಟ್ ಸಂಘಟಕರು ಈ ದಿನವನ್ನು ಗುರುತಿಸಲು ಮತ್ತು ನೈಜ್ಯವಾದ ಕ್ರೀಡೆಗಳ ಮೌಲ್ಯಗಳನ್ನು ಎತ್ತಿಹಿಡಿಯಲು ಒಟ್ಟಾಗಿ ಸೇರಿದ್ದಾರೆ.
ಡೋಪಿಂಗ್ ಎಂದರೇನು?: ಆಟಗಾರ ತನ್ನ ಶಕ್ತಿ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ನಿಷೇಧಿತ ಪದಾರ್ಥಗಳನ್ನು ಸೇವಿಸುವ ಅಥವಾ ದೇಹಕ್ಕೆ ಇನ್ಜೆಕ್ಟ್ ಮಾಡುವ ಮೂಲಕ ಬಳಸುವುದಾಗಿದೆ. ಇದನ್ನೇ ಡೋಪಿಂಗ್ ಎಂದು ಕರೆಯಲಾಗುತ್ತದೆ.
ಡೋಪಿಂಗ್ ಅಪಾಯಗಳು: ಡೋಪಿಂಗ್ ಸೇವನೆಯಿಂದ ಕ್ರೀಡಾಪಟುಗಳ ಆರೋಗ್ಯಕ್ಕೆ ಹೆಚ್ಚಿನ ಅಪಾಯಗಳಿವೆ. ಅವುಗಳೆಂದರೆ
- ಹೃದಯರಕ್ತನಾಳದ ಸಮಸ್ಯೆಗಳು: ಡೋಪಿಂಗ್ ಸೇವಿಸಿದ ವ್ಯಕ್ತಿಗೆ ಅಧಿಕ ಶಕ್ತಿ ನೀಡುವಲ್ಲಿ ಪಾತ್ರವಹಿಸುತ್ತದೆ. ಇದರಿಂದ ಹೆಚ್ಚಿದ ರಕ್ತದೊತ್ತಡ ಉಂಟಾಗಿ ಹೃದಯಾಘಾತ ಮತ್ತು ಹಠಾತ್ ಸಾವು ಸಂಭವಿಸುತ್ತದೆ.
- ಕೇಂದ್ರ ನರಮಂಡಲದ ಸಮಸ್ಯೆಗಳು: ಡೋಪಿಂಗ್ ಕೇವಲ ಹೃದಯಕ್ಕೆ ಅಲ್ಲದೇ ಮೆದುಳಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಚಡಪಡಿಕೆ, ಆತಂಕ, ಆಕ್ರಮಣಶೀಲತೆ, ಆತ್ಮಹತ್ಯಾದಂತಹ ಋಣಾತ್ಮಕ ಆಲೋಚನೆಗಳು, ಸೈಕೋಸಿಸ್ ಮತ್ತು ಪಾರ್ಶ್ವವಾಯು ಕೂಡ ಉಂಟಾಗುತ್ತದೆ.
- ಉಸಿರಾಟದ ತೊಂದರೆ: ಮೂಗಿನಲ್ಲಿ ರಕ್ತಸ್ರಾವ ಮತ್ತು ಸೈನುಟಿಸ್.
- ಹಾರ್ಮೋನ್ ಅಸಮತೋಲನ:ಅಕ್ರೋಮೆಗಾಲಿ, ಕಡಿಮೆಯಾದ ಲೈಂಗಿಕ ಬಯಕೆ, ಬಂಜೆತನ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುತ್ತವೆ.
ಇನ್ನು ಸ್ಪರ್ಧಿಸುವ ಕ್ರೀಡಾಪಟುಗಳ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಡೋಪಿಂಗ್ ವಿರೋಧಿ ಕಾರ್ಯಕ್ರಮಗಳು ಹೊಂದಿವೆ. WADA(World Anti-Doping Agency) ಜಾಗತಿಕ ಡೋಪಿಂಗ್ ವಿರೋಧಿ ಕಾರ್ಯಕ್ರಮವನ್ನು ನೋಡಿಕೊಳ್ಳುತ್ತದೆ. WADA ಅಂತಾರಾಷ್ಟ್ರೀಯ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಗಳು, ಒಲಿಂಪಿಕ್ ಕ್ರೀಡಾ ಅಂತಾರಾಷ್ಟ್ರೀಯ ಒಕ್ಕೂಟಗಳು ಮತ್ತು ರಾಷ್ಟ್ರೀಯ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಗಳು ಸೇರಿದಂತೆ ವಿಶ್ವದಾದ್ಯಂತ ವಿವಿಧ ಕ್ರೀಡಾ ಸಂಸ್ಥೆಗಳಾದ್ಯಂತ ಡೋಪಿಂಗ್ ವಿರೋಧಿ ನೀತಿಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರುತ್ತದೆ.