ನವದೆಹಲಿ:ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಸರ್ಫರಾಜ್ ಖಾನ್ ಆಟ ಮತ್ತು ಮಗನಿಗೆ ಬೆನ್ನಲುಬಾಗಿ ನಿಂತ ತಂದೆ ನೌಶಾದ್ ಖಾನ್ ಪರಿಶ್ರಮಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ ಆಗಿದ್ದಾರೆ. ನೌಶಾದ್ ಖಾನ್ ಅವರಿಗೆ ಥಾರ್ ಕಾರನ್ನು ಉಡುಗೊರೆ ನೀಡುವುದಾಗಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಗುಜರಾತ್ನ ರಾಜ್‌ಕೋಟ್‌ನಲ್ಲಿ ಫೆ.15ರಿಂದ ಆರಂಭವಾಗಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂಲಕ ಸರ್ಫರಾಜ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಚೊಚ್ಚಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಭಾರತದ ಪರ ಅತಿವೇಗದ ಅರ್ಧಶತಕ ಗಳಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಗೆಗೂ ಅವರು ಪಾತ್ರರಾಗಿದ್ದಾರೆ.
ತಮ್ಮ ಮೊದಲ ಪಂದ್ಯದಲ್ಲೇ ಸರ್ಫರಾಜ್ ಖಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸರ್ಫರಾಜ್ ತಂದೆ ನೌಶಾದ್ ಖಾನ್ ಸ್ವತಃ ತಾವೇ ಯಶಸ್ವಿ ಕ್ರಿಕೆಟಿಗನಾಗಲು ಬಯಸಿದ್ದರು. ಆದರೆ, ಪರಿಸ್ಥಿತಿ ಕಾರಣ ಅದು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ತಮ್ಮ ಮೂವರು ಪುತ್ರರನ್ನು ಕ್ರಿಕೆಟಿಗರನ್ನಾಗಿ ಮಾಡಲು ನಿರ್ಧರಿಸಿದ್ದರು. ತಂದೆ ನೌಶಾದ್ ಖಾನ್ ಮಾಡಿದ ಪ್ರಯತ್ನದ ಫಲವೇ ಹಿರಿಯ ಮಗ ಸರ್ಫರಾಜ್ ಇಂದು ಒಬ್ಬ ಪ್ರತಿಭಾವಂತ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ. ಅಂತೆಯೇ, ನೌಶಾದ್ ಖಾನ್ ಪರಿಶ್ರಮಕ್ಕೂ ಆನಂದ್ ಮಹೀಂದ್ರಾ ಫಿದಾ ಆಗಿದ್ದಾರೆ.
ಇದನ್ನೂ ಓದಿ:ಬೆಳಗ್ಗೆ ಭಾರತ ತಂಡಕ್ಕೆ ಪಾದಾರ್ಪಣೆಯ ಆನಂದ ಭಾಷ್ಪ; ಸಂಜೆ ದಾಖಲೆಯ ಅರ್ಧಶತಕ ಸಿಡಿಸಿ ಸಂಭ್ರಮ
ಥಾರ್ ಕಾರು ಉಡುಗೊರೆ ಬಗ್ಗೆ ಘೋಷಣೆ: ಸರ್ಫರಾಜ್ ಖಾನ್ ಮತ್ತು ನೌಶಾದ್ ಖಾನ್ ಅವರನ್ನು ಹಾಡಿ ಹೊಗಳಿರುವ ಉದ್ಯಮಿ ಆನಂದ್ ಮಹೀಂದ್ರಾ ಥಾರ್ ಕಾರು ಉಡುಗೊರೆ ಬಗ್ಗೆ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಸರ್ಫರಾಜ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ದಿನದ ವಿಡಿಯೋವೊಂದನ್ನು ಶೇರ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
''ಧೈರ್ಯ ಕಳೆದುಕೊಳ್ಳಬೇಡ, ಅಷ್ಟೇ!. ಕಠಿಣ ಪರಿಶ್ರಮ, ಧೈರ್ಯ, ತಾಳ್ಮೆ. ಮಗುವಿನಲ್ಲಿ ಸ್ಫೂರ್ತಿ ತುಂಬಲು ತಂದೆಗಿಂತ ಉತ್ತಮವಾದ ಗುಣಗಳು ಯಾವುವು?. ಸ್ಪೂರ್ತಿದಾಯಕ ಪೋಷಕರಾಗಿದ್ದಕ್ಕಾಗಿ, ನೌಶಾದ್ ಖಾನ್ ಅವರು ಥಾರ್ ಉಡುಗೊರೆಯನ್ನು ಸ್ವೀಕರಿಸಿದರೆ, ಅದನ್ನು ನೀಡುವುದು ನನ್ನ ಗೌರವ'' ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
ಸರ್ಫರಾಜ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಬಹುದಿನಗಳಿಂದ ಕಾಯುತ್ತಿದ್ದರು. ಕೊನೆಗೂ ಎಂಬಂತೆ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ಗೆ ಭಾರತದ ಹನ್ನೊಂದರ ಬಳಗದ ಸದಸ್ಯರಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅಂದು ಭಾರತ ತಂಡದ ಕ್ಯಾಪ್ ಸ್ವೀಕರಿಸುತ್ತಿದ್ದಂತೆ ಸರ್ಫರಾಜ್ ಭಾವುಕರಾಗಿದ್ದರು. ಅಲ್ಲದೇ, ಮಗ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಸೇರುವುದನ್ನು ಕಣ್ತುಂಬಿಕೊಳ್ಳಲು ಸ್ವತಃ ತಂದೆ ನೌಶಾದ್ ಖಾನ್ ಮೈದಾನಕ್ಕೆ ಬಂದಿದ್ದರು. ಟೀಂ ಇಂಡಿಯಾದ ಕ್ಯಾಪ್ ಪಡೆದ ತಕ್ಷಣವೇ ಸರ್ಫರಾಜ್ ಮೈದಾನದಿಂದ ಹೊರಗೆ ನಿಂತಿದ್ದ ತಮ್ಮ ತಂದೆ ಬಳಿಗೆ ಓಡಿ ಹೋಗಿದ್ದರು. ಮಗನ ಚೊಚ್ಚಲ ಕ್ಯಾಪ್ಗೆ ಅಪ್ಪ ಮುತ್ತಿಟ್ಟು ಕಣ್ಣೀರಾಗಿದ್ದರು.
ಇದನ್ನೂ ಓದಿ:ತೋಳ್ಬಲವಿಲ್ಲದೆಯೇ ಬಿಲ್ಲುಗಾರಿಕೆಯಲ್ಲಿ 2 ಚಿನ್ನ, 1 ಬೆಳ್ಳಿ ಗೆದ್ದ ಕಾಶ್ಮೀರ ಕುವರಿ: ಶೀತಲ್ ದೇವಿಗೆ ಮಹೀಂದ್ರಾ ಫಿದಾ.. ಕಾರು ಗಿಫ್ಟ್