ಬೆಂಗಳೂರು: ಬೆಂಗಳೂರಿನಲ್ಲಿ ಅತ್ಯಾಧುನಿಕ ಹೆಚ್ಎಎಲ್-ಸಾಯಿ ಹೈ ಪರ್ಫಾರ್ಮೆನ್ಸ್ ಸೆಂಟರ್ ಸ್ಥಾಪಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರವು ಒಪ್ಪಂದಕ್ಕೆ ಸಹಿ ಹಾಕಿವೆ. ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಅಡಿಯಲ್ಲಿ ಹಲವು ಉಪಕ್ರಮಗಳನ್ನು ತರುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಭಾರತದ ಕ್ರೀಡಾಪಟುಗಳನ್ನು ಮತ್ತಷ್ಟು ಉನ್ನತೀಕರಿಸುವ ಗುರಿಯನ್ನು ಹೊಂದಲಾಗಿದೆ.
ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸುವ ಮತ್ತು ಭಾರತದ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೇದಿಕೆಯನ್ನು ನಿರ್ಮಿಸುವ ಗುರಿಯೊಂದಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಮತ್ತು ಸಿ.ಎಸ್.ಆರ್ ಉಪಕ್ರಮದ ಅಡಿ ಬೆಂಗಳೂರಿನಲ್ಲಿ ಹೆಚ್ಎಎಲ್ - ಸಾಯಿ ಹೈ ಪರ್ಫಾರ್ಮೆನ್ಸ್ ಸೆಂಟರ್ ತೆರೆಯುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಕೇಂದ್ರದಲ್ಲಿ ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಕೇಂದ್ರದಲ್ಲಿ ಆಂಥ್ರೊಪೊಮೆಟ್ರಿ, ಬಯೋಮೆಕಾನಿಕ್ಸ್, ಬಯೋಕೆಮಿಸ್ಟ್ರಿ, ಪೋಷಣೆ, ವ್ಯಾಯಾಮ, ಶರೀರಶಾಸ್ತ್ರ, ಮನೋವಿಜ್ಞಾನ, ಸಾಮರ್ಥ್ಯ ಮತ್ತು ಕಂಡೀಷನಿಂಗ್, ಸ್ಪೋರ್ಟ್ಸ್ ಮೆಡಿಸಿನ್, ಫಿಸಿಯೋಥೆರಪಿ ಸೇರಿದಂತೆ ಹಲವು ವಿಭಾಗಗಳು ಇರಲಿದ್ದು ಇವು ಕ್ರೀಡಾಪಟುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ಹೆಚ್ಎಎಲ್ ಸಿಎಂಡಿ ಡಾ.ಡಿ.ಕೆ.ಸುನಿಲ್ ಮಾಹಿತಿ ನೀಡಿದ್ದಾರೆ.
ಹೆಚ್ಎಎಲ್ - ಸಾಯಿ ಹೈ ಪರ್ಫಾರ್ಮೆನ್ಸ್ ಸೆಂಟರ್ ಭಾರತದ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವದ ಮೈಲಿಗಲ್ಲಾಗಿದೆ. ಅಲ್ಲಿ ಸಿಗುವ ಅತ್ಯಾಧುನಿಕ ಸೌಲಭ್ಯಗಳು ಕ್ರೀಡಾಪಟುಗಳನ್ನು ಒಲಿಂಪಿಕ್ಸ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿಸಲು ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಹೆಚ್ಚಿಸಲು ಉತ್ತಮ ಅವಕಾಶಗಳನ್ನು ಮಾಡಿಕೊಡಲಿದೆ ಎಂದು ಹೇಳಿದ್ದಾರೆ.