ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ನ ಯಶಸ್ವಿ ರನ್ ಚೇಸ್ಗೆ ಭದ್ರ ಬುನಾದಿ ಹಾಕಿಕೊಟ್ಟ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಯಶಸ್ಸಿನ ಹಿಂದಿನ ಶಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಕ್ರಿಕೆಟರ್ಗಳಾದ ಯುವರಾಜ್ ಸಿಂಗ್ ಹಾಗೂ ಬ್ರಿಯಾನ್ ಲಾರಾ ಅವರ ನೆರವಿನೊಂದಿಗೆ ಐಪಿಎಲ್ ಆರಂಭಕ್ಕೂ ಮುನ್ನ ಹಾಕಿದ ಕಠಿಣ ಪರಿಶ್ರಮವೇ ಈ ಸಾಧನೆಗೆ ಕಾರಣ ಎಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ 23ರ ಹರೆಯದ ಅಭಿಷೇಕ್ 308.33 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 12 ಎಸೆತಗಳಲ್ಲೇ 37 ರನ್ ಸಿಡಿಸಿದ್ದರು. ಮುಕೇಶ್ ಚೌಧರಿ ಎಸೆದ ಪಂದ್ಯದ ಎರಡನೇ ಓವರ್ನಲ್ಲಿ ಶರ್ಮಾ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 27ರನ್ ಚಚ್ಚಿದ್ದರು. ಇದೇ ಆರಂಭವನ್ನು ಮುಂದುವರೆಸಿದ ಸನ್‌ರೈಸರ್ಸ್ ಮಾರ್ಕ್ರಮ್ (50) ಅರ್ಧಶತಕದ ಬಲದೊಂದಿಗೆ ಚೆನ್ನೈ ವಿರುದ್ಧ ಸುಲಭದ ಜಯ ದಾಖಲಿಸಿತು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಅಭಿಷೇಕ್ ಶರ್ಮಾ, ''ನಾನು ಈ ಹಿಂದೆ ಮಾಡಿದ ಎಲ್ಲ ಪರಿಶ್ರಮದ ಫಲ ಇದಾಗಿದೆ. ನನ್ನ ತಂದೆ, ಯುವಿ ಪಾಜಿ ಹಾಗೂ ಬ್ರಿಯಾನ್ ಲಾರಾ ಅವರಿಗೆ ವಿಶೇಷ ಧನ್ಯವಾದಗಳು" ಎಂದು ಹೇಳಿದರು.
"ನಾವು ಬೌಲಿಂಗ್ ಮಾಡುವಾಗ, ನಿಧಾನಗತಿಯ ಪಿಚ್ ಎಂಬುದು ತಿಳಿದುಬಂತು. ಹೀಗಾಗಿ, ನಾವು ಪವರ್‌ಪ್ಲೇಯಲ್ಲೇ ಬಿರುಸಿನ ಆಟಕ್ಕೆ ಮೊರೆ ಹೋಗಲು ಬಯಸಿದ್ದೆವು. ನಾವು ಬೌಲರ್ಗಳ ಮೇಲೆ ಸವಾರಿ ಮಾಡುವ ಅಗತ್ಯತೆಯ ಅರಿವಿತ್ತು. ಇದರಿಂದ ಬೌಲರ್‌ಗಳಿಗೂ ಕಷ್ಟವಾಗುತ್ತದೆ. ನಮಗೆ ಐಪಿಎಲ್‌ಗೂ ಮುನ್ನ ತಯಾರಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಿತ್ತು" ಎಂದರು.