ಹರಾರೆ: ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ದಾಖಲೆಯ ಶತಕ ಹಾಗೂ ರುತುರಾಜ್ ಗಾಯಕ್ವಾಡ್ ಅಜೇಯ ಅರ್ಧಶತಕದ ನೆರವಿನಿಂದ 234 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಪಾದಾರ್ಪಣೆ ಪಂದ್ಯದಲ್ಲಿ ಖಾತೆ ತೆರೆಯಲು ವಿಫಲರಾದ ಆಕ್ರಮಣಕಾರಿ ಎಡಗೈ ಆಟಗಾರ ಎರಡನೇ ಪಂದ್ಯದಲ್ಲೇ ಸೆಂಚುರಿ ಸಿಡಿಸಿದರು.
ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ, ಉತ್ತಮ ಆರಂಭ ನೀಡುವಲ್ಲಿ ವಿಫಲರಾದ ಗಿಲ್ ಕೇವಲ 2 ರನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಅಭಿಷೇಕ್ ಶರ್ಮಾ ಹಾಗೂ ರುತುರಾಜ್ ಗಾಯಕ್ವಾಡ್ ಆರಂಭದಲ್ಲಿ ನಿಧಾನಗತಿಯ ಆಟವಾಡಿದರೂ ಕೂಡ, ಬಳಿಕ ಅಬ್ಬರಿಸಿದರು.
2024ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಬೆನ್ನಲ್ಲೇ ಅಭಿಷೇಕ್ ಶರ್ಮಾ ಜಿಂಬಾಬ್ವೆ ವಿರುದ್ಧದ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾದರು. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಶನಿವಾರ ಪಾದಾರ್ಪಣೆ ಮಾಡಿದ್ದ ಶರ್ಮಾ 4 ಎಸೆತಗಳನ್ನಾಡಿದರೂ, ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಹೊಂದಿದ್ದರು. ಆದರೀಗ ಎರಡನೇ ಮ್ಯಾಚ್ನಲ್ಲೇ ಮೂರಂಕಿ ತಲುಪಿದ ಸಾಧನೆಗೆ ಪಾತ್ರರಾಗಿದ್ದಾರೆ.
46 ಬಾಲ್ಗಳಲ್ಲೇ ಶತಕ:ಜಿಂಬಾಬ್ವೆ ಬೌಲಿಂಗ್ನ್ನು ಚೆಂಡಾಡಿದ ಅಭಿಷೇಕ್ ಶರ್ಮಾ ಬರೋಬ್ಬರಿ 8 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದರು. 14ನೇ ಓವರ್ನಲ್ಲಿ ಸತತ ಮೂರು ಸಿಕ್ಸರ್ ಬಾರಿಸಿದ ಅಭಿಷೇಕ್ ದಾಖಲೆಯ ಶತಕ ಬಾರಿಸಿದರು. 100 ರನ್ ಗಳಿಸಿದ ಮರು ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಎರಡನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲೇ ಶತಕ ಬಾರಿಸಿದ ಭಾರತದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಈ ಹಿಂದೆ ದೀಪಕ್ ಹೂಡಾ ಮೂರನೇ ಮ್ಯಾಚ್ನಲ್ಲಿ ಈ ಸಾಧನೆ ಮಾಡಿದ್ದರು.
ಅಭಿಷೇಕ್ ವಿಕೆಟ್ ಪತನದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ರುತುರಾಜ್, ರಿಂಕು ಜೊತೆಗೂಡಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಯಶಸ್ವಿಯಾದರು. 47 ಎಸೆತಗಳಲ್ಲಿ ಅಜೇಯ 77 ರನ್ ಸಿಡಿಸಿ ಮಿಂಚಿದರು. ಗಾಯಕ್ವಾಡ್ ಜೊತೆಗೂಡಿ ಜಿಂಬಾಬ್ವೆ ಬೌಲರ್ಗಳ ಬೆಂಡೆತ್ತಿದ ರಿಂಕು 5 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 48* ರನ್ ಬಾರಿಸಿದರು.
ಅಂತಿಮವಾಗಿ ಭಾರತ ತಂಡವು 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಪೇರಿಸಿದೆ. ಗುರಿ ಬೆನ್ನಟ್ಟಿರುವ ಜಿಂಬಾಬ್ವೆ ಮೊದಲ ಓವರ್ನಲ್ಲೇ ಇನ್ನೋಸೆಂಟ್ ಕೈಯಾ (4) ಅವರ ವಿಕೆಟ್ ಕಳೆದುಕೊಂಡಿದೆ. ಸದ್ಯ ಜಿಂಬಾಬ್ವೆಯ ಮೂರು ವಿಕೆಟ್ ಉರುಳಿವೆ.
ಇದನ್ನೂ ಓದಿ:'ಭಾರತ ರತ್ನ' ರಾಹುಲ್ ದ್ರಾವಿಡ್, ಇದು ಕೇಳಲು ಎಷ್ಟು ಸೊಗಸಾಗಿದೆ ಅಲ್ವೇ?: ಸುನಿಲ್ ಗವಾಸ್ಕರ್ - Sunil Gavaskar