ಕೊಲಂಬೊ:ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಿದೆ. ಮೊದಲ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಬೌಲಿಂಗ್ ಮಾಡುತ್ತಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ಸ್ವೀಪ್ ಮಾಡಿರುವ ಭಾರತ, ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದೆ. 2024ರ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಇದು ಮೊದಲ ಪಂದ್ಯವಾಗಿದೆ.
ಇಂದಿನ ಪಂದ್ಯದಲ್ಲಿ ರಿಷಭ್ ಪಂತ್ ಹೊರಗುಳಿದಿದ್ದು ವಿಕೆಟ್ ಕೀಪರ್ ಆಗಿ ಕೆ.ಎಲ್.ರಾಹುಲ್ ಅವಕಾಶ ಪಡೆದಿದ್ದಾರೆ. ಬಿಸಿಸಿಐ ಗುತ್ತಿಗೆಯಿಂದ ಹೊರಬಿದ್ದ ಬಳಿಕ ಶ್ರೇಯಸ್ ಅಯ್ಯರ್ ಮೊದಲ ಬಾರಿಗೆ ಆಡುವ ಅವಕಾಶ ಪಡೆದಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಆಡುತ್ತಿದ್ದಾರೆ.