2023 ರ ಏಪ್ರಿಲ್ನಲ್ಲಿ 61,112.44 ಮಟ್ಟದಲ್ಲಿದ್ದ ಬಿಎಸ್ಇ ಸೆನ್ಸೆಕ್ಸ್ 2024 ರ ಏಪ್ರಿಲ್ ಹೊತ್ತಿಗೆ 74,482.78 ಕ್ಕೆ ಅಂದರೆ ಸುಮಾರು 22 ಪ್ರತಿಶತದಷ್ಟು ಏರಿಕೆ ಕಂಡಿರುವುದು ಭಾರತೀಯ ಆರ್ಥಿಕತೆಯ ಬಗ್ಗೆ ದೃಢವಾದ ಆಶಾವಾದವನ್ನು ಪ್ರತಿಬಿಂಬಿಸುತ್ತದೆ. ವಿಶ್ವದ ಇತರ ಭಾಗಗಳಲ್ಲಿನ ನಿರಾಶಾದಾಯಕ ಮತ್ತು ನಿಧಾನಗತಿಯ ಬೆಳವಣಿಗೆಯ ದರಗಳ ನಡುವೆ 2024 ಮತ್ತು 2025ರ ವರ್ಷಗಳ ಸ್ಥಿತಿಸ್ಥಾಪಕ ಭಾರತವನ್ನು ಪ್ರಸ್ತುತಪಡಿಸುವ ಏಪ್ರಿಲ್ 2024 ರ ವಿಶ್ವ ಆರ್ಥಿಕ ದೃಷ್ಟಿಕೋನದ ಅಂದಾಜುಗಳು ಇದನ್ನು ದೃಢಪಡಿಸುತ್ತವೆ.
ಹೀಗಾಗಿ, ಭಾರತವು 2024 ರಲ್ಲಿ ವಾರ್ಷಿಕ ಶೇಕಡಾ 6.8 ರಷ್ಟು ನೈಜ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆಯ ದರವನ್ನು ಸಾಧಿಸುವ ನಿರೀಕ್ಷೆಯಿದೆ. ನಂತರ ಇದು 2025 ರ ವರ್ಷದಲ್ಲಿ ಶೇಕಡಾ 6.5 ಕ್ಕೆ ಸ್ವಲ್ಪ ಕುಸಿತವಾಗಲಿದೆ. ಇದು ಚೀನಾ ಸೇರಿದಂತೆ ಪ್ರಮುಖ ಆರ್ಥಿಕತೆಗಳನ್ನು ಮೀರಿಸಿದ ಆರ್ಥಿಕ ಬೆಳವಣಿಗೆಯಾಗಿರಲಿದೆ.
ಇಷ್ಟಾದರೂ ಒಂದು ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ. ಅದೇನೆಂದರೆ - ಪ್ರಸಕ್ತ ವರ್ಷದಲ್ಲಿ ಮತ್ತು ಮುಂದಿನ ವರ್ಷದಲ್ಲಿ ಭಾರತೀಯ ಆರ್ಥಿಕತೆಯು ಈ ಯೋಜಿತ ಬೆಳವಣಿಗೆಯ ದರಗಳನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ ಎಂದು ಎಷ್ಟರಮಟ್ಟಿಗೆ ನಾವು ನಂಬಬಹುದು ಎಂಬುದು.
ಗ್ರಾಹಕರ ವಿಶ್ವಾಸ ಮತ್ತು ಭಾರತೀಯ ಗ್ರಾಹಕರ ಭಾವನೆಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕತೆ ಹೆಚ್ಚಿಸುವಲ್ಲಿ ಗ್ರಾಹಕ ವಿಶ್ವಾಸ ಸೂಚ್ಯಂಕದ ಪಾತ್ರದ ಬಗ್ಗೆ ಸಾಕಷ್ಟು ಗಮನ ಹರಿಸಲಾಗುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ. ಗ್ರಾಹಕರ ಇಂಥ ವಿಶ್ವಾಸವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ದ್ವೈಮಾಸಿಕ ಆಧಾರದ ಮೇಲೆ ಟ್ರ್ಯಾಕ್ ಮಾಡುತ್ತದೆ.
ಆರ್ಬಿಐನ ಈ ಟ್ರ್ಯಾಕಿಂಗ್ ಗ್ರಾಹಕರ ಪ್ರಸ್ತುತ ಗ್ರಹಿಕೆಗಳ ಬಗ್ಗೆ (ಒಂದು ವರ್ಷದ ಹಿಂದೆ ಹೋಲಿಸಿದರೆ) ಮತ್ತು ಸಾಮಾನ್ಯ ಆರ್ಥಿಕ ಪರಿಸ್ಥಿತಿ, ಉದ್ಯೋಗ ಸನ್ನಿವೇಶ, ಒಟ್ಟಾರೆ ಬೆಲೆ ಪರಿಸ್ಥಿತಿ, ಸ್ವಂತ ಆದಾಯ ಮತ್ತು ವೆಚ್ಚದ ಬಗ್ಗೆ ಒಂದು ವರ್ಷದ ಮುಂಚಿತ ನಿರೀಕ್ಷೆಗಳ ಬಗ್ಗೆ ನಿರ್ದಿಷ್ಟ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಹೀಗಾಗಿ ಗ್ರಾಹಕ ವಿಶ್ವಾಸ ಸೂಚ್ಯಂಕವು ಪ್ರಮುಖ ಸೂಚಕವಾಗಿದ್ದು, ಕುಟುಂಬಗಳ ಬಳಕೆ ಮತ್ತು ಉಳಿತಾಯಕ್ಕೆ ಸಂಬಂಧಿಸಿದಂತೆ ಭವಿಷ್ಯದ ಬೆಳವಣಿಗೆಗಳ ಬಗ್ಗೆ ನೀತಿ ನಿರೂಪಕರಿಗೆ ಅಗತ್ಯವಾದ ಅಂಕಿ - ಅಂಶಗಳನ್ನು ನೀಡುತ್ತದೆ. ಈ ಸೂಚ್ಯಂಕದಲ್ಲಿ 100 ಕ್ಕಿಂತ ಹೆಚ್ಚಿನ ಅಂಕವು ಆಶಾವಾದ ಮತ್ತು ಉಳಿಸುವ ಬದಲು ಖರ್ಚು ಮಾಡುವ ಪ್ರವೃತ್ತಿಯನ್ನು ಸೂಚಿಸುತ್ತದೆ, ಆದರೆ, 100 ಕ್ಕಿಂತ ಕಡಿಮೆ ಅಂಕವು ನಿರಾಶಾವಾದ ಚಾಲ್ತಿಯಲ್ಲಿರುವುದನ್ನು ಸೂಚಿಸುತ್ತದೆ.
ಭಾರತದಲ್ಲಿ ಮಾರ್ಚ್ 2-11, 2024 ರ ಅವಧಿಯಲ್ಲಿ ನಡೆಸಲಾದ ಇತ್ತೀಚಿನ ಸಮೀಕ್ಷೆಯು 19 ನಗರಗಳಲ್ಲಿನ 6,083 ಜನರನ್ನು ಒಳಗೊಂಡಿದೆ. ಈ ಸಮೀಕ್ಷೆಯಲ್ಲಿ ಶೇಕಡಾ 58ರಷ್ಟು ಮಹಿಳೆಯರ ಅಭಿಪ್ರಾಯಗಳನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ. ಸಮೀಕ್ಷೆಯು ಆರ್ಥಿಕತೆಯ ಭವಿಷ್ಯದ ಸ್ಥಿತಿಯ ಬಗ್ಗೆ ಪ್ರಮುಖ ಒಳನೋಟಗಳನ್ನು ಹೊಂದಿದೆ. ಸಮೀಕ್ಷಾ ವರದಿಯನ್ನು ನೋಡಿದರೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗ್ರಾಹಕರ ವಿಶ್ವಾಸ ಹೆಚ್ಚಾಗಿದೆ ಮತ್ತು 2019 ರ ಮಧ್ಯದಿಂದ ಇದು ಅತ್ಯುನ್ನತ ಮಟ್ಟದಲ್ಲಿದೆ.
ಗ್ರಾಹಕ ವಿಶ್ವಾಸ ಸೂಚ್ಯಂಕವು ಮೇ 2021 ರಲ್ಲಿ 48.5 ಕ್ಕೆ ಇಳಿಕೆಯಾಗಿತ್ತು. ಇದು ಒಂದು ದಶಕದಲ್ಲಿಯೇ ಅತ್ಯಂತ ಕಡಿಮೆಯಾಗಿತ್ತು. ಪ್ರಸ್ತುತ ಇದು 98.5 ರಷ್ಟಿದೆ. ಇಷ್ಟಾದರೂ ಸೂಚ್ಯಂಕವು 100 ರ ಗರಿಷ್ಠ ಮಿತಿ, ಅಂಕಿ - ಅಂಶಕ್ಕಿಂತ ಕಡಿಮೆಯಾಗಿದೆ. ಅಂದರೆ ಇದು ಆರ್ಥಿಕತೆಯಲ್ಲಿ ನಿರಾಶಾದಾಯಕ ಪರಿಸ್ಥಿತಿ ಇರುವುದನ್ನು ಸೂಚಿಸುತ್ತದೆ. ಭವಿಷ್ಯದ ನಿರೀಕ್ಷೆಗಳ ಸೂಚ್ಯಂಕವು 125.2 ರಷ್ಟಿದ್ದು, ಗ್ರಾಹಕರು ಮುಂದಿನ ವರ್ಷದ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಎಂಬುದು ಕಂಡು ಬರುತ್ತದೆ. ಈ ಮಟ್ಟವು 2019 ರ ಮಧ್ಯ ಅವಧಿಯ ನಂತರ ಮತ್ತೆ ಗರಿಷ್ಠವಾಗಿದೆ. ಮೇ 2021 ರಲ್ಲಿ, ಈ ಅಂಕಿ ಅಂಶವು 96.4 ಮೌಲ್ಯದೊಂದಿಗೆ ನಿರಾಶಾದಾಯಕ ಮಟ್ಟಕ್ಕೆ ಜಾರಿತ್ತು.