ಕರ್ನಾಟಕ

karnataka

ETV Bharat / opinion

ಮೋದಿ 3.0: ಬ್ರಾಂಡ್​​ ಮೋದಿ ಈಗ ಅಡೆ-ತಡೆ ಎದುರಿಸುತ್ತಿದೆಯಾ? - Modi 3 0 Govt and Challenges - MODI 3 0 GOVT AND CHALLENGES

ರಾಜಕೀಯದಲ್ಲಿ ಏನೂ ಆಗದ ವರ್ಷಗಳೂ ಇವೆ. ದಶಕಗಳ ಸಂಭ್ರಮದ ದಿನಗಳು ಕೂಡಾ ಇವೆ. ಈ ಮಾತುಗಳ ನಡುವೆ, ಜೂನ್ 4 ಮತ್ತು ನಂತರದ ದಿನಗಳಲ್ಲಿ ಆದ ಬೆಳವಣಿಗೆಗಳನ್ನು ಗಮನಿಸಿದರೆ, ಭಾರತದ ರಾಜಕೀಯದಲ್ಲಿ ಮುಂದಿನ 5 ವರ್ಷಗಳು ಬಹಳ ದೀರ್ಘವಾಗಿರುವ ಸಂಭವಗಳೇ ಜಾಸ್ತಿ ಅನಿಸುತ್ತಿದೆ. ಮೋದಿ 3.0 ಸರ್ಕಾರದ ಬಗ್ಗೆ ಪ್ರೊ. ಪ್ರವೀಣ್​ ಮಿಶ್ರಾ ಅವರ ಲೇಖನ ಇಲ್ಲಿದೆ.

LS Election results
ಮೋದಿ 3.0: ಬ್ರ್ಯಾಂಡ್ ಮೋದಿ ಈಗ ಅಡೆ-ತಡೆ ಎದುರಿಸುತ್ತಿದೆಯಾ? (IANS)

By ETV Bharat Karnataka Team

Published : Jun 14, 2024, 9:23 AM IST

ಭಾನುವಾರ ಸಂಜೆ ನರೇಂದ್ರ ಮೋದಿ ಅವರು ಸತತ 3 ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಪ್ರಥಮ ಪ್ರಧಾನಿ ಜವಾಹರ್​​​​ಲಾಲ್​ ನೆಹರು ಬಳಿಕ ಸತತ ಮೂರನೇ ಬಾರಿ ಪ್ರಧಾನಿಯಾದ ಹೆಗ್ಗಳಿಕೆ ಪ್ರಧಾನಿ ಮೋದಿ ಅವರಿಗಿದೆ. ಆದರೆ ಮೋದಿ 3.0 ಮತ್ತು ಮೋದಿ 2.0 ರ ಮೊದಲ ಇನ್ನಿಂಗ್ಸ್‌ಗೆ ಯಾವುದೇ ಹೋಲಿಕೆ ಇಲ್ಲ. ಮೋದಿ 1.0 ಮತ್ತು 2.0ರಂತೆ ಈ ಬಾರಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಕಠಿಣವಾಗಬಹುದು. ಸಂಪುಟದಲ್ಲಿ ಮಿತ್ರಪಕ್ಷಗಳಿಗೆ ಅವಕಾಶ ಕಲ್ಪಿಸುವುದು ಅನಿವಾರ್ಯವಾಗಿದೆ. ಆದಾಗ್ಯೂ ಅವರು ತಮ್ಮ ಪ್ರಮುಖ ತಂಡವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಸಮ್ಮಿಶ್ರ ಸರ್ಕಾರ ಅನ್ನುವುದು ಹಗ್ಗದ ಮೇಲಿನ ನಡಿಗೆ ಇದ್ದಂತೆ. ಇಂತಹ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರ ರಾಜಕೀಯ ವೃತ್ತಿಜೀವನವು ಹೆಚ್ಚಾಗಿ ಭಾರತೀಯ ಜನತಾ ಪಕ್ಷದ ಅವರ ನಾಯಕತ್ವದಿಂದ ನಿರೂಪಿಸಲ್ಪಟ್ಟಿದೆ. ಅವರ ಆಡಳಿತ ಶೈಲಿ ಮತ್ತು ಕಾರ್ಯತಂತ್ರಗಳು ಪ್ರಧಾನವಾಗಿ ಏಕ ಪಕ್ಷದ ಪ್ರಾಬಲ್ಯದ ಸುತ್ತವೇ ಸುತ್ತುತ್ತವೆ.

ಭಾರತದ 2024ರ ಜನಾದೇಶವು ಮೋದಿ ಅವರ ಏಕ ಚಕ್ರಾಧಿಪತ್ಯದ ಸನ್ನಿವೇಶವನ್ನು ಬದಲಾಯಿಸಿದೆ. ಭಾರತೀಯ ರಾಜಕೀಯ ಇತಿಹಾಸದ ಹಾದಿಯಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ. ಜಾಗರೂಕತೆಯಿಂದ ರಚಿಸಲಾದ ಕ್ಯಾಮೆರಾ ಆಂಗಲ್‌ಗಳು ಮತ್ತು ಪ್ರಮಾಣ ವಚನ ಸಮಾರಂಭದಲ್ಲಿ ಮೋದಿ ಅವರ ಬಾಡಿ ಲಾಂಗ್ವೇಜ್​​​​​​ನ ಕೆಲ ಸಂದರ್ಭಗಳನ್ನು ಮರೆಮಾಡಲು ವಿಫಲವಾಗಿದೆ.

ಹಾಗಾದರೆ ಈಗ ಏನಾಗುತ್ತದೆ?: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ತಮ್ಮದೇ ಆದ ಬೇಡಿಕೆಗಳನ್ನು ಹಾಗೂ ಅವುಗಳ ಪಾಲನೆಯನ್ನು ಸಹಜವಾಗಿಯೇ ಬಯಸುತ್ತಾರೆ. ಅವರ ಬೃಹತ್ ಚೌಕಾಶಿ ಶಕ್ತಿಯು ಬ್ರ್ಯಾಂಡ್ ಮೋದಿಯ ವಿಶಿಷ್ಟವಾದ ಅಬ್ಬರದ ಲಕ್ಷಣವನ್ನು ಮೊಟಕುಗೊಳಿಸುವುದಂತೂ ಸುಳ್ಳೇನು ಅಲ್ಲ . ನರೇಂದ್ರ ಮೋದಿ ಅವರಿಗೆ ತಮ್ಮ ಮೊದಲಿನ ಇಮೇಜ್ ಅನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. 14 ವರ್ಷಗಳ ಕಾಲ ಅವರು ಸಂಪೂರ್ಣ ಬಹುಮತದೊಂದಿಗೆ ಗುಜರಾತ್ ರಾಜ್ಯದಲ್ಲಿ ಆಡಳಿತ ನಡೆಸಿದರು. 10 ವರ್ಷಗಳಿಂದ ಮೋದಿಯವರು ಸಂಪೂರ್ಣ ಬಹುಮತದೊಂದಿಗೆ ಭಾರತ ಸರ್ಕಾರದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿಗೆ ಸರಳ ಬಹುಮತದ ಕೊರತೆ ಎದುರಾಗಿದ್ದು, ಮೋದಿಗೆ ಸಂಪೂರ್ಣ ಭಿನ್ನವಾದ ಹಾಗೂ ಅನಿರೀಕ್ಷಿತ ಫಲಿತಾಂಶವನ್ನು ಈ ಬಾರಿಯ ಚುನಾವಣೆ ನೀಡಿದೆ.

ಮೋದಿಯವರ ಆಡಳಿತ ಶೈಲಿಯು ಬಲವಾದ ಕೇಂದ್ರೀಕೃತ ಆಡಳಿತ ಮತ್ತು ದಿಟ್ಟ ನಿರ್ಧಾರಗಳಿಂದಲೇ ಹೆಚ್ಚು ಪ್ರಭಾವಿತವಾಗಿದೆ. ಆಗಾಗ್ಗೆ ಪ್ರಧಾನ ಮಂತ್ರಿ ಕಚೇರಿಯ PMO ಪಾತ್ರ ಹೆಚ್ಚು ಗಮನ ಸೆಳೆಯುತ್ತಿರುತ್ತದೆ. ಆಂತರಿಕ ಭಿನ್ನಾಭಿಪ್ರಾಯವನ್ನು ಹೆಚ್ಚು ಸುಲಭವಾಗಿ ನಿರ್ವಹಿಸಬಹುದಾದ ಏಕಪಕ್ಷೀಯ ಸರ್ಕಾರದಲ್ಲಿ ಈ ವಿಧಾನವು ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ. 2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಮೋದಿ ಬಹುಮತದ ಸರ್ಕಾರವನ್ನೇ ಮುನ್ನಡಸಿದ್ದಾರೆ. ಹಾಗಾಗಿ ಅವರು ಯಾವುದೇ ಅಡೆತಡೆಗಳಿಲ್ಲದೇ ನಿರ್ಧಾರಗಳನ್ನು ಕೈಗೊಂಡು ದಿಟ್ಟ ನಿರ್ಧಾರಗಳಿಂದಾಗಿಯೇ ಜನಪ್ರಿಯರಾಗಿದ್ದಾರೆ.

ಗರಿಷ್ಠ ಅಧಿಕಾರ ಚಲಾವಣೆ:ಗರಿಷ್ಠ ಅಧಿಕಾರವನ್ನು ಚಲಾಯಿಸುವುದು ಅವರ ಜನಪ್ರಿಯ ಶೈಲಿಯಾಗಿದೆ. ಮಾಧ್ಯಮ ನಿರೂಪಣೆಗಳ ಮೇಲೆ ಸಂಪೂರ್ಣ ನಿಯಂತ್ರಣ, ವಿರೋಧವನ್ನು ಅವರು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದಾರೆ. ಸರ್ಕಾರಿ ಸಂಸ್ಥೆಗಳ ಮೇಲೆ ಸಂಪೂರ್ಣ ನಿಯಂತ್ರಣ, ಚಿಂತನೆಯ ನಾಯಕರು ಮತ್ತು ಸ್ವತಂತ್ರ ಧ್ವನಿಗಳು, ಪ್ರತಿಭಟನಾಕಾರರ ಬಗ್ಗೆ ಅವರು ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ದಿಟ್ಟ ನಿರ್ಧಾರಗಳು, ಬುಲ್ಡೋಜರ್ ಗಳ ಬಳಕೆ ಹಿಂದಿ ರಾಜ್ಯಗಳಲ್ಲಿ ಪ್ರಸಿದ್ಧ ಸಂಕೇತವಾಗಿ ಹೊರಹೊಮ್ಮಿದ್ದು ಎಲ್ಲರಿಗೂ ಗೊತ್ತೇ ಇದೆ.

ಈ ಬಾರಿ ಮಿತ್ರರನ್ನು ಸಂಭಾಳಿಸುವ ಹೊಣೆಗಾರಿಕೆ:ಆದರೆ ಈ ಬಾರಿ ಅವರು ಸಮ್ಮಿಶ್ರ ಸರ್ಕಾರವನ್ನು ನಿರ್ವಹಿಸಬೇಕಿದೆ. ಹಾಗಾಗಿ ಅವರು ತಮ್ಮ ಹಿಂದಿನ ನೀತಿಯನ್ನು ತುಸು ಎಚ್ಚರಿಕೆಯಿಂದಲೇ ನಿರ್ವಹಿಸಬೇಕಿದೆ. ಹಾಗಾಗಿ ಅವರು ಇದೀಗ ಎಚ್ಚರಿಕೆಯ ಹೆಜ್ಜೆಯನ್ನಿಡಲು ಮುಂದಾಗಿದ್ದಾರೆ. ಆದರೆ ಮೋದಿ ಅವರ ಲಕ್ಷಾಂತರ ಬೆಂಬಲಿಗರು ತಮ್ಮ ನಾಯಕನ ಅದೇ ಗುಣಲಕ್ಷಣಗಳನ್ನು ನೋಡಲು ಇಷ್ಟ ಪಡುತ್ತಾರೆ. ಅದೇ ಗಳಿಗೆಯಲ್ಲಿ ಮೋದಿ 3.0 ಸರ್ಕಾರದಲ್ಲಿ ಯಾವ ನಡೆ ಇಡಲಿದ್ದಾರೆ ಎಂಬುದನ್ನು ನೋಡಲು ಕಾತರರಾಗಿದ್ದಾರೆ. ಇನ್ನು ಸಮ್ಮಿಶ್ರ ಸರ್ಕಾರವು, ಬಹು ಪಕ್ಷಗಳ ಹಿತಾಸಕ್ತಿಗಳನ್ನು ಸರಿಹೊಂದಿಸಲು ವ್ಯಾಪಕವಾದ ಮಾತುಕತೆಯ ಅಗತ್ಯತೆಯನ್ನು ಬೇಡುತ್ತದೆ ಎಂಬುದು ಮಾತ್ರ ವಾಸ್ತವ.

ಈ ಬಾರಿಯ ಎನ್​​ಡಿಎ ಸರ್ಕಾರದಲ್ಲಿ ಎರಡು ಪ್ರಮುಖ ಪಾಲುದಾರ ಪಕ್ಷಗಳ ಇಬ್ಬರು ಪ್ರಬಲ ನಾಯಕರಿದ್ದಾರೆ. ಜೆಡಿಯುನ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಅವರು ಈ ಹಿಂದೆ ಮೋದಿ ಸರ್ಕಾರ ಹಾಗೂ ಮೋದಿ ವಿರುದ್ಧ ಬಲವಾದ ಪದಗಳನ್ನು ಬಳಸಿ ಆರೋಪಿಸಿದ್ದಾರೆ. ಸಿಟ್ಟನ್ನು ಹೊರ ಹಾಕಿದ್ದಾರೆ. ಇವೆಲ್ಲ ವಿಷಯಗಳು ಪ್ರಧಾನಿ ಮೋದಿ ಅವರಿಗೆ ಚನ್ನಾಗಿಯೇ ಗೊತ್ತಿದೆ. ಇನ್ನು ಇಂಡಿಯಾ ಒಕ್ಕೂಟ ಈ ಇಬ್ಬರು ನಾಯಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡಿಯೇ ಮಾಡುತ್ತದೆ. ಅದೇ ವೇಳೆ ಬಲವಾದ ಆಮಿಷಗಳಿಗೆ ಈ ನಾಯಕರು ಒಳಗಾಗದೇ ಇರಲಾರರು ಎಂಬ ವಿಶ್ಲೇಷಣೆಗಳು ಇವೆ.

2002 ರ ಗುಜರಾತ್ ಕೋಮು ಹಿಂಸಾಚಾರ ಘಟನೆಯಲ್ಲಿ ಮೋದಿ ಬ್ರಾಂಡ್​ ಉದಯವಾಯಿತು. ಗುಜರಾತ್ ಸಿಎಂ ಕೇಶುಭಾಯ್ ಪಟೇಲ್ ಅವರ ಸ್ಥಾನಕ್ಕೆ ಬಂದ ನರೇಂದ್ರ ಮೋದಿ ಅವರ ಹೆಸರನ್ನು ಆಗ ಕೇಳಿದವರು ಬಹಳ ಅಂದರೆ ಬಹಳ ಕಡಿಮೆಯೇ ಎನ್ನಬಹುದು. ಆಗ ದೇಶದ ಉಪಪ್ರಧಾನಿ ಆಗಿದ್ದ ಎಲ್ ಕೆ ಅಡ್ವಾಣಿಯವರ ನಿಕಟವರ್ತಿ ಆಗಿದ್ದ ಮೋದಿ, ಯಾವುದೇ ಚುನಾವಣೆ ಎದುರಿಸದೇ ಏಕಾಏಕಿ ಗುಜರಾತ್​ ಸಿಎಂ ಪಟ್ಟಕ್ಕೆ ಏರಿದ್ದರು. 1990 ರಲ್ಲಿ ಅಡ್ವಾಣಿಯವರ ಪ್ರಸಿದ್ಧ ರಥಯಾತ್ರೆಯನ್ನು ಆಯೋಜಿಸುವಲ್ಲಿ ಮೋದಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು, ಅದು ಅಂತಿಮವಾಗಿ 1992 ರಲ್ಲಿ ಬಾಬರಿ ಮಸೀದಿ ನಾಶಕ್ಕೆ ಕಾರಣವಾಯಿತು. ಇದೇ ರಥಯಾತ್ರೆ ಬಿಜೆಪಿಯನ್ನು ಕೇಂದ್ರದ ಗದ್ದುಗೆ ಏರುವಲ್ಲಿ ಸಹಾಯ ಮಾಡಿತು.

ಸಂಸತ್ತಿನಲ್ಲಿ ನಾಯಕರು ತಮ್ಮ ಬಹುಮತವನ್ನು ಕಳೆದುಕೊಂಡಿರುವ ಅನೇಕ ಐತಿಹಾಸಿಕ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ದುರ್ಬಲ ನಾಯಕತ್ವದ ಪರಿಣಾಮವಾಗಿ, ಸಾಮಾನ್ಯವಾಗಿ ಗಮನಾರ್ಹ ರಾಜಕೀಯ ಅಸ್ಥಿರತೆ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಒಳಗೊಂಡಿರುತ್ತವೆ. ತಮ್ಮ ಅಧಿಕಾರಾವಧಿಯ ಅಂತ್ಯದ ವೇಳೆಗೆ ಜನಪ್ರಿಯತೆಯಲ್ಲಿ ಗಮನಾರ್ಹ ಕುಸಿತವನ್ನು ಅನುಭವಿಸಿದ ರಾಜಕೀಯ ನಾಯಕತ್ವಕ್ಕೆ ಪ್ರಮುಖ ಉದಾಹರಣೆ ಎಂದರೆ ಅದು ಇಂಗ್ಲೆಂಡ್​ನ ಮಾಜಿ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ (1979-1990). "ದಿ ಐರನ್ ಲೇಡಿ" ಎಂದು ಅಡ್ಡಹೆಸರು ಹೊಂದಿದ್ದ ಅವರು 1987 ರಲ್ಲಿ ಮೂರನೇ ಅವಧಿಗೆ ಮರು - ಚುನಾಯಿಸಲ್ಪಟ್ಟರು. ಆದರೆ ಯುರೋಪಿಯನ್ ಸಮುದಾಯದ ಬಗ್ಗೆ ಹಾಗೂ ಯುರೋಸೆಪ್ಟಿಕ್ ದೃಷ್ಟಿಕೋನಗಳ ಬಗೆಗಿನ ಅವರ ನಿರ್ಧಾರ ಅವರ ಕ್ಯಾಬಿನೆಟ್​​ನಲ್ಲೇ ಅನೇಕರಿಗೆ ಸರಿ ಬರಲಿಲ್ಲ. ಅಂತಿಮವಾಗಿ ಅವರು 1990 ರಲ್ಲಿ ಪ್ರಧಾನ ಮಂತ್ರಿ ಸ್ಥಾನ ಮತ್ತು ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕಾಯಿತು, ಅವರ ನಂತರ ಜಾನ್ ಮೇಜರ್ ಉತ್ತರಾಧಿಕಾರಿಯಾದರು.

ಇನ್ನೂ ವಿಶೇಷ ಎಂದರೆ 2017ರಲ್ಲಿ ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 182 ಸ್ಥಾನಗಳ ಪೈಕಿ 99 ಸ್ಥಾನಗಳು ಮಾತ್ರವೇ ಬಂದಿತ್ತು. ಇದು ಸರಳ ಬಹುಮತಕ್ಕಿಂತ ಕೆಲವೇ ಸ್ಥಾನಗಳು ಮಾತ್ರವೇ ಆಗಿತ್ತು. ಆ ಬಳಿಕ ಜಾರಿಗೆ ಬಂದಿದ್ದೇ ಈ ಗುಜರಾತ್​ ಮಾದರಿ. ಮುಂದಿನ ಐದು ವರ್ಷಗಳಲ್ಲಿ ಡಜನ್​ಗಟ್ಟಲೆ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರಿದರು. ಹಲವಾರು ಉಪಚುನಾವಣೆಗಳು ನಡೆದವು, ಅವುಗಳಲ್ಲಿ ಹೆಚ್ಚಿನವುಗಳನ್ನು ಬಿಜೆಪಿ ಗೆದ್ದುಕೊಂಡಿತು, ಆ ಮೂಲಕ ವಿಧಾನಸಭೆಯಲ್ಲಿ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಂಡಿತ್ತು.

ಲೇಖನ: ಪ್ರೋ ಪ್ರವೀಣ್​ ಮಿಶ್ರಾ - Prof Pravin Mishra

ಇದನ್ನು ಓದಿ:ಲೋಕಸಭೆ ಚುನಾವಣೆ ಫಲಿತಾಂಶ: ಗೆದ್ದವರಿಗೆ ಸೋತ ಮನೋಭಾವ, ಸೋತವರಿಗೆ ಗೆದ್ದಷ್ಟೇ ಖುಷಿ - Lok Sabha Election Results

ABOUT THE AUTHOR

...view details