ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ಪ್ರಮುಖವಾದ ನಿರ್ಣಯವೊಂದನ್ನು ತೆಗೆದುಕೊಂಡಿತ್ತು. 370ನೇ ವಿಧಿ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ನಿರ್ಣಯ ಕೈಗೊಂಡು 5 ವರ್ಷಗಳ ವಿರಾಮದ ನಂತರ ಕಾಶ್ಮೀರವು ಐತಿಹಾಸಿಕ ಹಾಗೂ ಹೊಸ ನಿರೂಪಣೆಯ ಚುನಾವಣೆಗೆ ಸಾಕ್ಷಿಯಾಗುತ್ತಿದೆ. ಇನ್ಮುಂದೆ ಕಣಿವೆ ರಾಜ್ಯದಲ್ಲಿ ಚುನಾವಣೆಯಲ್ಲಿ ಭಾಗವಹಿಸುವುದು, ಮತದಾನ ಮಾಡುವುದು ಅಥವಾ ಸ್ಪರ್ಧೆ ಮಾಡುವುದು ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಲ್ಪಡುವುದಿಲ್ಲ. ಏಕೆಂದರೆ, ಇವೆರಡನ್ನೂ ಈ ಹಿಂದೆ ಕಣಿವೆಯಲ್ಲಿ ನಿಷೇಧಿಸಲಾಗಿತ್ತು. ಚುನಾವಣೆಯಲ್ಲಿ ಮತದಾನ ಮಾಡುವುದು ಮತ್ತು ಸ್ಪರ್ಧಿಸುವುದು ದ್ರೋಹದ ಕೃತ್ಯ ಎಂದು ಪರಿಗಣಿಸಲಾಗಿತ್ತು.
2024 ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಸುಧಾರಣೆ ಕಂಡಿದೆ. ಆದರೆ, ಇದಕ್ಕೂ ಮುನ್ನ ನಡೆದ ಹಾಗೂ ಕಳೆದ ಮೂರು ದಶಕಗಳಿಂದ ಇಲ್ಲಿನ ಮತದಾನ ಪ್ರಮಾಣವು ತೀರಾ ಕಡಿಮೆ ಇತ್ತು. ಸಂಸತ್ತಿನ ಚುನಾವಣೆಯ ಯಶಸ್ಸು, ವಿಧಾನಸಭಾ ಚುನಾವಣೆಗೆ ದೊಡ್ಡ ಮಟ್ಟದ ಆತ್ಮವಿಶ್ವಾಸ ಮೂಡಿಸಿದೆ. ಇದೇ ಹುಮ್ಮಸ್ಸು, ರಾಜಕೀಯ ಪ್ರಚಾರಕ್ಕೆ ಮುನ್ನುಡಿಯಾಗಿದ್ದು, ಮನೆ ಮನೆ ಪ್ರಚಾರ, ರೋಡ್ ಶೋ ಮತ್ತು ರ‍್ಯಾಲಿಗಳು ಕಣಿವೆ ರಾಜ್ಯದ ಪ್ರಜಾಪ್ರಭುತ್ವಕ್ಕೆ ಮೆರಗು ತಂದಿದೆ.
ಚುನಾವಣಾ ಪ್ರಕ್ರಿಯೆ ಮತ್ತು ಸಿಬ್ಬಂದಿ:ಕಾಶ್ಮೀರದಲ್ಲಿ ಆಗೊಂದು ಕಾಲವಿತ್ತು. ಚುನಾವಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹಿಂದೆ ಮುಂದೆ ಮಾಡುತ್ತಿದ್ದರು. ರಾಜಕೀಯ ಮತ್ತು ಅಧಿಕಾರಶಾಹಿ ಸಂಪರ್ಕಗಳನ್ನು ಬಳಸಿಕೊಂಡು ಚುನಾವಣಾ ಕರ್ತವ್ಯದ ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೆಗೆಸಲು ಪೈಪೋಟಿ ನಡೆಸುತ್ತಿದ್ದರು. ಕರ್ತವ್ಯದಲ್ಲಿದಾಗ ಹಲವಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದು, ಅವರ ಈ ಭಯಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ ಚುನಾವಣೆ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದವರು ಚುನಾವಣೆಗೆ ನಿಂತವರಲ್ಲ ಅಥವಾ ಹೋರಾಟಗಾರರಲ್ಲ. ಬದಲಾಗಿ ಚುನಾವಣೆಯ ಕರ್ತವ್ಯದಲ್ಲಿದ್ದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ.
ಈ ಹಿಂದಿನ ರಾಜಕೀಯ ಸಮೀಕರಣ: ಸ್ಪರ್ಧೆಯ ಕೊರತೆಯಿಂದಾಗಿ ಚುನಾವಣಾ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಇಲ್ಲಿ ಯಾವಾಗಲೂ ಲಾಭವಿದೆ. ಈ ಹಿಂದೆ ಇದ್ದ ಪ್ರತ್ಯೇಕತಾವಾದಿ ಘಟಕಗಳಿಂದ ಹಾಗೂ ಅವುಗಳ ಪ್ರತೀಕಾರದ ಭಯದಿಂದ ಮತದಾರರು, ಮತದಾನದಿಂದ ದೂರ ಇರುತ್ತಿದ್ರು. ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಅವರ ಮಿತ್ರಪಕ್ಷಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದವು. ಇದು ನ್ಯಾಷನಲ್ ಕಾನ್ಫರೆನ್ಸ್ -ಎನ್‌ಸಿ ಮತ್ತು ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ - ಪಿಡಿಪಿ ಯಂತಹ ಪಕ್ಷಗಳಿಗೆ ಹೆಚ್ಚಿನ ಅನುಕೂಲವನ್ನು ಸೃಷ್ಟಿಸುತ್ತಿದ್ದವು. ಆದರೆ ಈ ಬಾರಿ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ. ಅಷ್ಟೇ ಅಲ್ಲ ಈ ಬಾರಿ ಎನ್ಸಿಪಿ ಹಾಗೂ ಪಿಡಿಪಿ ವಿರುದ್ಧ ಜನಬೆಂಬಲ ಹೊಂದಿರುವವರು ಕಣದಲ್ಲಿರುವುದರಿಂದ ಸ್ಪರ್ಧೆ ರೋಚಕತೆ ಸೃಷ್ಟಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಈ ಸಲ ಜನ ಭಯದಿಂದ ಮುಕ್ತವಾಗಿ ಮನೆಗಳಿಂದ ಹೊರ ಬಂದು ಮತ ಚಲಾಯಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅವಿರೋಧವಾಗಿ ಆಯ್ಕೆ ಆಗುತ್ತಿದ್ದ ಅಬ್ದುಲ್ಲಾ, ಮುಫ್ತಿ ಅಂತವರಿಗೆ ಈ ಭಾರಿಯ ಸ್ಪರ್ಧೆ ಕಠಿಣವಾಗಿರುವ ಸಾಧ್ಯತೆ ಇದೆ.
'ಕಾಶ್ಮೀರದ ಕಲ್ಪನೆ':ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಕಾನ್ಫರೆನ್ಸ್ ಮತ್ತು PDP ಯಂತಹ ಸಾಂಪ್ರದಾಯಿಕ ಪಕ್ಷಗಳು ಪರಸ್ಪರ ಅಥವಾ ಈ ಹಿಂದೆ ಬಹಿಷ್ಕಾರದ ಶಿಬಿರಗಳನ್ನು ಪ್ರತಿನಿಧಿಸಿದ್ದ ಕೆಲವು ಸ್ವತಂತ್ರರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಈ ವರ್ಷದ ಆರಂಭದಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಓಮರ್ ಅಬ್ದುಲ್ಲಾ ಮತ್ತು ಸಜಾದ್ ಲೋನ್ ಅವರನ್ನು ಸ್ಥಳೀಯವಾಗಿ ಇಂಜಿನಿಯರ್ ರಶೀದ್ ಎಂದು ಜನಪ್ರಿಯವಾಗಿರುವ ಶೇಖ್ ರಶೀದ್ ಸೋಲಿಸಿದ್ದರು. ಇದು ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಇದೀಗ ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿರುವ ರಶೀದ್ ಅವರು ನಿಷೇಧಿತ ಜಮಾತ್-ಎ-ಇಸ್ಲಾಮಿ ಬೆಂಬಲಿತ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ರಶೀದ್ ಅವರ ಗೆಲುವು ನಿಸ್ಸಂದೇಹವಾಗಿ ಅಬ್ದುಲ್ಲಾ, ಲೋನ್ಸ್ ಮತ್ತು ಮುಫ್ತಿಗಳನ್ನು ಬೆಚ್ಚಿಬೀಳಿಸಿದೆ. ಪ್ರಾಯಶಃ, ಮತದಾರರ ನಿಷ್ಠೆಯು ಪಕ್ಷಗಳ ಜೊತೆಗಿದೆಯೇ ಹೊರತು ‘ಕಾಶ್ಮೀರದ ಕಲ್ಪನೆ’ಯೊಂದಿಗಲ್ಲ ಎಂದು ಈ ಹಿಂದೆ ಇವರೆಲ್ಲ ನಂಬಿದ್ದರು. ಹಾಗೂ ಮತದಾರರನ್ನು ಲಘುವಾಗಿ ಪರಿಗಣಿಸಿದ್ದರು. ಆದರೆ, ಇಂಜಿನಿಯರ್ ಅವರು ‘ಕಾಶ್ಮೀರದ ಕಲ್ಪನೆ’ ಸಿದ್ದಾಂತ ವನ್ನು ಪ್ರತಿಪಾದಿಸುತ್ತಿದ್ದಾರೆ. ಚುನಾವಣಾ ರಾಜಕೀಯದ ಮೂಲಕ ಅವರು ಬಯಸಿದ ಮೈಲಿಗಲ್ಲನ್ನು ಸಾಧಿಸುವಲ್ಲಿ ಇದುವರೆಗೆ ಯಶಸ್ವಿಯಾಗಿದ್ದಾರೆ. ಅವರ ಈ ನೀತಿ ಈ ಬಾರಿ ಗೇಮ್ ಚೇಂಜರ್ ಆಗುವ ಸಾಧ್ಯತೆ ಹುಟ್ಟು ಹಾಕಿದೆ.