ನವದೆಹಲಿ: ನಾಗಾಲ್ಯಾಂಡ್ನ ಮೋನ್ ಜಿಲ್ಲೆಯ ಲಾಂಗ್ವಾ ಗ್ರಾಮದ ಆಂಗ್ (ಮುಖ್ಯಸ್ಥ) ಅವರ ಮನೆ ಇರುವ ಪ್ರದೇಶದ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಈ ಮನೆಯ ಅರ್ಧ ಭಾಗ ಭಾರತದಲ್ಲಿದೆ ಮತ್ತು ಉಳಿದ ಅರ್ಧ ಭಾಗ ಮ್ಯಾನ್ಮಾರ್ನಲ್ಲಿ ಇರುವುದೇ ಅದಕ್ಕೆ ಕಾರಣವಾಗಿದೆ. ಅಡುಗೆ ಮನೆ ಮ್ಯಾನ್ಮಾರ್ ನಲ್ಲಿದ್ದರೆ, ಮಲಗುವ ಕೋಣೆ ಭಾರತದಲ್ಲಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಕುಟುಂಬದ ಸದಸ್ಯರು ಮ್ಯಾನ್ಮಾರ್ನಲ್ಲಿ ಊಟ ಮಾಡಿ ಭಾರತದಲ್ಲಿ ಮಲಗುತ್ತಾರೆ.
ಹಾಗೆಯೇ ಲಾಂಗ್ವಾ ಚರ್ಚ್ನಲ್ಲಿ ಭಾನುವಾರ ನಡೆಯುವ ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಸಭೆಯಲ್ಲಿ ಭಾಗವಹಿಸುವ ಅರ್ಧದಷ್ಟು ಜನ ಭಾರತದಲ್ಲಿ ಮತ್ತು ಉಳಿದ ಅರ್ಧದಷ್ಟು ಜನ ಮ್ಯಾನ್ಮಾರ್ನಲ್ಲಿ ಕುಳಿತುಕೊಂಡಿರುತ್ತಾರೆ. ಭಾರತ ಮತ್ತು ಮ್ಯಾನ್ಮಾರ್ ನಡುವಿನ ಅಂತರರಾಷ್ಟ್ರೀಯ ಗಡಿಯು ಕೇವಲ ಕಾಲ್ಪನಿಕ ಎಂದು ಗ್ರಾಮದ ಜನ ಏಕೆ ನಂಬುತ್ತಾರೆ ಎಂಬುದಕ್ಕೆ ಆಂಗ್ ಅವರ ಮನೆ ಮತ್ತು ಲಾಂಗ್ವಾದಲ್ಲಿನ ಚರ್ಚ್ ಕೇವಲ ಉದಾಹರಣೆಗಳಾಗಿವೆ. ಇದು ಕೇವಲ ಲಾಂಗ್ವಾದಲ್ಲಿನ ಪರಿಸ್ಥಿತಿ ಮಾತ್ರವಲ್ಲ. ಮ್ಯಾನ್ಮಾರ್ ಗಡಿಯಲ್ಲಿರುವ ಇತರ ಈಶಾನ್ಯ ರಾಜ್ಯಗಳ ಜನರಲ್ಲಿಯೂ ಇದೇ ರೀತಿಯ ನಂಬಿಕೆ ಇದೆ. ಗಡಿಯ ಎರಡೂ ಬದಿಗಳಲ್ಲಿ ವಾಸಿಸುವ ಸಮುದಾಯಗಳು ಮತ್ತು ಕುಟುಂಬಗಳು ಸಾಕಷ್ಟಿವೆ.
ಭಾರತ ಮತ್ತು ಮ್ಯಾನ್ಮಾರ್ ಈಶಾನ್ಯ ರಾಜ್ಯಗಳಾದ ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಉದ್ದಕ್ಕೂ 1,643 ಕಿ.ಮೀ ಉದ್ದದ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿವೆ. ಗಡಿಯ ಎರಡೂ ಬದಿಯ ಜನರ ನಡುವಿನ ಪರಸ್ಪರ ಅವಲಂಬನೆಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಮತ್ತು ಮ್ಯಾನ್ಮಾರ್ ಸರ್ಕಾರಗಳು ನಿರ್ದಿಷ್ಟ ಅವಧಿಗೆ ವೀಸಾ ಇಲ್ಲದೇ ಪರಸ್ಪರರ ದೇಶಗಳಿಗೆ ದಾಟಲು ಅವಕಾಶ ನೀಡಿತು. ಆದಾಗ್ಯೂ, 2018 ರಲ್ಲಿ ಭಾರತ ಮತ್ತು ಮ್ಯಾನ್ಮಾರ್ ಮುಕ್ತ ಚಲನೆ ವ್ಯವಸ್ಥೆ (ಎಫ್ಎಂಆರ್) (Free Movement Regime -FMR) ಒಪ್ಪಂದಕ್ಕೆ ಸಹಿ ಹಾಕಿದಾಗ ಈ ವ್ಯವಸ್ಥೆ ಔಪಚಾರಿಕಗೊಳಿಸಲಾಯಿತು.
ಆದಾಗ್ಯೂ ಮ್ಯಾನ್ಮಾರ್ನಲ್ಲಿ ಜನಾಂಗೀಯ ಸಶಸ್ತ್ರ ಸಂಘಟನೆಗಳು ಮತ್ತು ಮಿಲಿಟರಿ ಜುಂಟಾ ನಡುವೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಫ್ಎಂಆರ್ ಅನ್ನು ಅಮಾನತುಗೊಳಿಸುವ ಭಾರತ ಸರ್ಕಾರದ ನಿರ್ಧಾರವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಎಫ್ಎಂಆರ್ನ ಮೂಲ ಯಾವುದು?:ಎಫ್ಎಂಆರ್ ವ್ಯವಸ್ಥೆಯ ಮೂಲ 19 ನೇ ಶತಮಾನದ ಉತ್ತರಾರ್ಧದಲ್ಲಿ ಎರಡೂ ರಾಷ್ಟ್ರಗಳು ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿರುವ ಸಮಯದ್ದಾಗಿದೆ. ಈ ವ್ಯವಸ್ಥೆ ಅಡಿ ಬ್ರಿಟಿಷ್ ನಿಯಂತ್ರಣದಲ್ಲಿದ್ದ ಎರಡೂ ಪ್ರದೇಶಗಳ ಮಧ್ಯೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 1947 (ಭಾರತ) ಮತ್ತು 1948 (ಮ್ಯಾನ್ಮಾರ್) ನಲ್ಲಿ ಸ್ವಾತಂತ್ರ್ಯದ ನಂತರ, ಉಭಯ ದೇಶಗಳು 1967 ರಲ್ಲಿ ಪರಿಷ್ಕೃತ ದ್ವಿಪಕ್ಷೀಯ ಒಪ್ಪಂದದ ಅಡಿ ಈ ವ್ಯವಸ್ಥೆ ಮುಂದುವರಿಸಿದವು.
ವೀಸಾ ಇಲ್ಲದೇ 16 ಕಿ.ಮೀ.ವರೆಗೆ ಗಡಿಯಾಚೆಗೆ ಜನರ ಪ್ರಯಾಣಕ್ಕೆ ಅವಕಾಶ ನೀಡುವುದಕ್ಕಾಗಿ ನವದೆಹಲಿಯ ಆ್ಯಕ್ಟ್ ಈಸ್ಟ್ ಪಾಲಿಸಿಯ ಭಾಗವಾಗಿ ಭಾರತ ಮತ್ತು ಮ್ಯಾನ್ಮಾರ್ 2018 ರಲ್ಲಿ ಎಫ್ಎಂಆರ್ ಒಪ್ಪಂದವನ್ನು ಜಾರಿಗೊಳಿಸಿದವು. 16 ಕಿ.ಮೀ ವಲಯವನ್ನು ಮೀರಿ ಪ್ರಯಾಣಿಸುವವರಿಗೆ ಅಧಿಕೃತ ಪಾಸ್ ಪೋರ್ಟ್ ಮತ್ತು ಇತರ ವಲಸೆ ದಾಖಲೆಗಳು ಬೇಕಾಗುತ್ತವೆ. ಎಫ್ಎಂಆರ್ ಎರಡೂ ರಾಷ್ಟ್ರಗಳ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುಲಭ ಚಲನೆ ಮತ್ತು ಸಂವಹನವನ್ನು ಸುಗಮಗೊಳಿಸುತ್ತದೆ. ಇದು ಸಂಬಂಧಿಕರನ್ನು ಭೇಟಿ ಮಾಡಲು ಮತ್ತು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.
ಗಡಿಯಲ್ಲಿ ವಾಸಿಸುವ ವ್ಯಕ್ತಿಗಳು ನೆರೆಯ ದೇಶದಲ್ಲಿ ಉಳಿಯಲು ಒಂದು ವರ್ಷದ ಗಡಿ ಪಾಸ್ ಪಡೆಯಬೇಕಾಗುತ್ತದೆ. ಇದು ಸ್ಥಳೀಯ ಗಡಿ ವ್ಯಾಪಾರವನ್ನು ಸುಗಮಗೊಳಿಸುವುದು, ಗಡಿ ನಿವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಭಾರತೀಯ ನಾಗರಿಕರು ಮ್ಯಾನ್ಮಾರ್ನೊಳಗಿನ 16 ಕಿ.ಮೀ ವಲಯದಲ್ಲಿ ಯಾವುದೇ ಔಪಚಾರಿಕತೆಗಳಿಲ್ಲದೇ 72 ಗಂಟೆಗಳವರೆಗೆ ಉಳಿಯಬಹುದು. ಹಾಗೆಯೇ ಮ್ಯಾನ್ಮಾರ್ ನಾಗರಿಕರು ಭಾರತದ 16 ಕಿ.ಮೀ ವಲಯದೊಳಗೆ 14 ದಿನಗಳವರೆಗೆ ಉಳಿದುಕೊಳ್ಳಬಹುದು.
ವಿಶೇಷವಾಗಿ ಮಿಜೋರಾಂ ಮತ್ತು ನಾಗಾಲ್ಯಾಂಡ್ನ ಜನರಿಗೆ ಎಫ್ಎಂಆರ್ ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲವಾಗಿದೆ. ಮ್ಯಾನ್ಮಾರ್ನ ಚಿನ್ ಜನರು ಮತ್ತು ಭಾರತ ಮತ್ತು ಬಾಂಗ್ಲಾದೇಶದ ಕುಕಿ ಜನರು ಮಿಜೋಗಳ ಸಂಬಂಧಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಮ್ಯಾನ್ಮಾರ್ನಲ್ಲಿನ ಅನೇಕ ಮಿಜೋ ವಲಸಿಗರು ಚಿನ್ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದಾರೆ. ಅವರೆಲ್ಲರೂ ವಿಶಾಲವಾದ ಝೋ ಸಮುದಾಯದ ಅಡಿ ಬರುತ್ತಾರೆ. ನಾಗಾಲ್ಯಾಂಡ್ನಲ್ಲಿ, ಮುಖ್ಯವಾಗಿ ಖಿಯಾಮ್ನಿಯುಂಗನ್ ಮತ್ತು ಕೊನ್ಯಾಕ್ ಬುಡಕಟ್ಟು ಜನಾಂಗದ ಜನರು ಗಡಿಯ ಎರಡೂ ಬದಿಗಳಲ್ಲಿ ವಾಸಿಸುತ್ತಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಭಾರತ ಸರ್ಕಾರವು ಕಳೆದ ತಿಂಗಳು ಎಫ್ಎಂಆರ್ ಅಮಾನತುಗೊಳಿಸುವುದಾಗಿ ಮತ್ತು ಭಾರತ - ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕುವುದಾಗಿ ಘೋಷಿಸಿದಾಗ ಮಿಜೋರಾಂ, ನಾಗಾಲ್ಯಾಂಡ್ನ ಜನತೆ ಮತ್ತು ಅಲ್ಲಿನ ರಾಜ್ಯ ಸರ್ಕಾರಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಮತ್ತೊಂದೆಡೆ, ಮಣಿಪುರದ ಮೈಟಿ ಬಹುಸಂಖ್ಯಾತ ಜನ ಮತ್ತು ಮಣಿಪುರ ಹಾಗೂ ಅರುಣಾಚಲ ಪ್ರದೇಶ ರಾಜ್ಯ ಸರ್ಕಾರಗಳು ಈ ಕ್ರಮವನ್ನು ಸ್ವಾಗತಿಸಿವೆ.
ಭಾರತ ಸರ್ಕಾರ ಎಫ್ಎಂಆರ್ ಅಮಾನತುಗೊಳಿಸಲು ಕಾರಣವೇನು? : ದೇಶದ ಆಂತರಿಕ ಭದ್ರತೆ ಕಾಪಾಡಲು ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಭಾರತದ ಈಶಾನ್ಯ ರಾಜ್ಯಗಳ ಜನಸಂಖ್ಯಾ ರಚನೆಯನ್ನು ಕಾಪಾಡಿಕೊಳ್ಳಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ ಎಫ್ಎಂಆರ್ ಅನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವಾಲಯ (ಎಂಎಚ್ಎ) ಫೆಬ್ರವರಿ 8 ರಂದು ಘೋಷಿಸಿದೆ.
"ನಮ್ಮ ಗಡಿಗಳನ್ನು ಭದ್ರಪಡಿಸುವುದು ಪ್ರಧಾನಿ ನರೇಂದ್ರ ಮೋದಿ ಜಿ ಅವರ ಸಂಕಲ್ಪವಾಗಿದೆ. ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಭಾರತದ ಈಶಾನ್ಯ ರಾಜ್ಯಗಳ ಜನಸಂಖ್ಯಾ ರಚನೆಯನ್ನು ಕಾಪಾಡಿಕೊಳ್ಳಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ ಮುಕ್ತ ಚಲನೆ ವ್ಯವಸ್ಥೆಯನ್ನು (ಎಫ್ಎಂಆರ್) ರದ್ದುಗೊಳಿಸಲು ಗೃಹ ಸಚಿವಾಲಯ (ಎಂಎಚ್ಎ) ನಿರ್ಧರಿಸಿದೆ" ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ವಿಶೇಷವಾಗಿ ಮಣಿಪುರದ ಮೇಲೆ ಎಫ್ಎಂಆರ್ ನಕಾರಾತ್ಮಕ ಪರಿಣಾಮ ಬೀರಿದೆ. 2021 ರಲ್ಲಿ ಮ್ಯಾನ್ಮಾರ್ನಲ್ಲಿ ನಡೆದ ದಂಗೆ ಮತ್ತು ಜನಾಂಗೀಯ ಸಶಸ್ತ್ರ ಸಂಘಟನೆಗಳು ಮತ್ತು ಮಿಲಿಟರಿ ಜುಂಟಾ ನಡುವಿನ ಸಂಘರ್ಷದ ನಂತರ, ಅಕ್ರಮ ವಲಸಿಗರ, ವಿಶೇಷವಾಗಿ ಮ್ಯಾನ್ಮಾರ್ನಿಂದ ಚಿನ್ ಮತ್ತು ಕುಕಿ ಸಮುದಾಯಗಳ ಒಳಹರಿವು ಹೆಚ್ಚಾಗಿದೆ. ಇದರಿಂದ ದೇಶದ ಸಂಪನ್ಮೂಲಗಳ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಮತ್ತು ಸ್ಥಳೀಯ ಜನಸಂಖ್ಯಾ ಸಂರಚನೆಯು ಹಾಳಾಗುತ್ತದೆ.
ಮಣಿಪುರವು ಮ್ಯಾನ್ಮಾರ್ ನೊಂದಿಗೆ 398 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಇದು ಅಕ್ರಮ ಮಾದಕವಸ್ತು ವ್ಯಾಪಾರಕ್ಕೆ ಹೇಳಿ ಮಾಡಿಸಿದಂಥ ಬೇಲಿ ಇಲ್ಲದ ಗಡಿಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಮಣಿಪುರ ಸರ್ಕಾರ 'ಡ್ರಗ್ಸ್ ವಿರುದ್ಧ ಯುದ್ಧ' ಘೋಷಿಸಿತ್ತು. ಮ್ಯಾನ್ಮಾರ್, ಲಾವೋಸ್ ಮತ್ತು ಥಾಯ್ಲೆಂಡ್ನಿಂದ ಬರುವ ಮಾದಕವಸ್ತುಗಳ ವಿರುದ್ಧ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ.
ಕಳೆದ ಐದು ವರ್ಷಗಳಲ್ಲಿ, ಮಣಿಪುರದಲ್ಲಿ ಗಸಗಸೆ ಕೃಷಿಯು ಬೆಟ್ಟಗಳಲ್ಲಿ 15,400 ಎಕರೆ ಭೂಮಿಗೆ ಹರಡಿದೆ. ಮೇ 2023 ರಲ್ಲಿ ಮಣಿಪುರ ಗೃಹ ಆಯುಕ್ತರಿಗೆ ಬರೆದ ಪತ್ರದಲ್ಲಿ, ಪೊಲೀಸ್ ವರಿಷ್ಠಾಧಿಕಾರಿ (ಎನ್ಎಬಿ) ಕೆ ಮೇಘಚಂದ್ರ ಸಿಂಗ್ ಅವರು ಈ ಅವಧಿಯಲ್ಲಿ ನಾರ್ಕೋಟಿಕ್ ಡ್ರಗ್ ಮತ್ತು ಸೈಕೋಟ್ರೋಪಿಕ್ ಸಬ್ ಸ್ಟೆನ್ಸಸ್ (ಎನ್ಡಿಪಿಎಸ್) ಕಾಯ್ದೆಯಡಿ 2,518 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು.
ಈಶಾನ್ಯ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ದಂಗೆಕೋರ ಗುಂಪುಗಳು ಎಫ್ಎಂಆರ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಎಫ್ಎಂಆರ್ ಕಾರಣದಿಂದ ಈ ದಂಗೆಕೋರರು ಬಂಧನದಿಂದ ತಪ್ಪಿಸಿಕೊಳ್ಳಲು ಗಡಿ ದಾಟುವುದು ಸುಲಭವಾಗಿದೆ. ಭಾರತದ ಈಶಾನ್ಯ ಪ್ರದೇಶದ ಹಲವಾರು ದಂಗೆಕೋರ ಗುಂಪುಗಳು ಮ್ಯಾನ್ಮಾರ್ನಲ್ಲಿ ಶಿಬಿರಗಳನ್ನು ಸ್ಥಾಪಿಸಿವೆ ಮತ್ತು ಮ್ಯಾನ್ಮಾರ್ನ ಸಾಗಿಂಗ್ ವಿಭಾಗ, ಕಚಿನ್ ರಾಜ್ಯ ಮತ್ತು ಚಿನ್ ರಾಜ್ಯದ ದೂರದ ಗಡಿ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ. ಈ ಗುಂಪುಗಳಲ್ಲಿ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್ಎಲ್ಎಫ್), ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ), ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸೋಂ (ಉಲ್ಫಾ), ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಎನ್ಎಸ್ಸಿಎನ್) ಮತ್ತು ಕುಕಿ ಮತ್ತು ಜೋಮಿಯಂಥ ಸಣ್ಣ ಸಂಘಟನೆಗಳು ಸೇರಿವೆ.
ಭಾರತ-ಮ್ಯಾನ್ಮಾರ್ ಮಧ್ಯದ ಬೇಲಿ ಇಲ್ಲದ ಗಡಿಯ ಸ್ವರೂಪ ಮತ್ತು 16 ಕಿ.ಮೀ ವರೆಗೆ ಅನಿರ್ಬಂಧಿತ ಗಡಿಯಾಚೆಗಿನ ಚಲನೆಗೆ ಅವಕಾಶ ನೀಡುವ ಎಫ್ಎಂಆರ್ ಈ ಗುಂಪುಗಳ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಗುಂಪುಗಳ ಸದಸ್ಯರು ಗಡಿಯಾಚೆಗಿನ ಪ್ರದೇಶಗಳನ್ನು ಸುರಕ್ಷಿತ ತಾಣಗಳಾಗಿ ಬಳಸಿಕೊಂಡು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆದಿದ್ದಾರೆ ಮತ್ತು ಕಾರ್ಯಕರ್ತರಿಗೆ ತರಬೇತಿ ನೀಡಿದ್ದಾರೆ. ಅಲ್ಲದೇ ತಮ್ಮ ಕಾರ್ಯಾಚರಣೆಗಳಿಗೆ ಧನಸಹಾಯ ಪಡೆಯಲು ಮಾದಕವಸ್ತು ಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.