ನಮಗೆ ತಿಳಿದಿರುವಂತೆ, ಅಭಿವೃದ್ಧಿಶೀಲ ವಿಶ್ವದ ಇತರ ಭಾಗಗಳಂತೆ ಭಾರತದಲ್ಲಿಯೂ ಕೃಷಿ ಬೆಳವಣಿಗೆಯು 1960ರ ದಶಕದಲ್ಲಿ ಹಸಿರು ಕ್ರಾಂತಿಯ ನಂತರ ಎಷ್ಟೋ ಪಟ್ಟು ಜಿಗಿತ ಕಂಡಿದೆ. 1970 ಮತ್ತು 2015ರ ನಡುವೆ ಈ ಪ್ರದೇಶಗಳಲ್ಲಿನ ಹಸಿವಿನ ಪ್ರಮಾಣ ಶೇಕಡಾ 33ರಿಂದ ಶೇಕಡಾ 12ಕ್ಕೆ ಇಳಿದಿದೆ. ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಇದು ಸಾಧ್ಯವಾಗಿದೆ ಎಂದು ಹೇಳಬಹುದು. ಆದರೆ ರಸಗೊಬ್ಬರಗಳ ಅತಿಯಾದ ಬಳಕೆ ಮತ್ತು ಅಂತರ್ಜಲ ಮತ್ತು ಮೇಲ್ಮೈ ನೀರಿನ ಅತಿಯಾದ ಬಳಕೆಯಿಂದಾಗಿ ಕೃಷಿ ಕ್ರಾಂತಿಯು ಪರಿಸರದ ಮೇಲೆ ಗಮನಾರ್ಹ ಪ್ರಮಾಣದ ದುಷ್ಪರಿಣಾಮ ಬೀರಿದೆ.
20ನೇ ಶತಮಾನದಲ್ಲಿ ಹೆಚ್ಚಿದ ಕೃಷಿ ಉತ್ಪಾದನೆಗೆ ಕಾರಣವಾದ ಪ್ರಮುಖ ಕ್ರಾಂತಿಕಾರಿ ಬೆಳವಣಿಗೆ ಎಂದರೆ ಅದು ವಾತಾವರಣದ ಸಾರಜನಕದಿಂದ ಸಂಶ್ಲೇಷಿತ ಗೊಬ್ಬರವನ್ನು ತಯಾರಿಸಲು ಬಳಸಲಾದ 'ಹೇಬರ್-ಬಾಷ್' ಪ್ರಕ್ರಿಯೆ. ಆದಾಗ್ಯೂ, ಅಂತಿಮವಾಗಿ, ಕೃಷಿ ಉತ್ಪಾದನೆ ಹೆಚ್ಚಾದರೂ ಅದರಿಂದ ಹೊರಬಂದ ಸಾರಜನಕದ ಹರಿವಿನಿಂದ ಜಲಮೂಲಗಳು ಕಲುಷಿತಗೊಂಡವು ಮತ್ತು ಅದರ ಪರಿಣಾಮವಾಗಿಯೇ ಮಣ್ಣಿನ ನೈಸರ್ಗಿಕ ಫಲವತ್ತತೆಯೂ ಕಡಿಮೆಯಾಯಿತು.
ಕೃಷಿ ಉತ್ಪಾದನೆಯ ವೆಚ್ಚದ ಏರಿಕೆ ಮತ್ತು ಮೇಲ್ಮೈ ಹಾಗೂ ಅಂತರ್ಜಲ ಲಭ್ಯತೆಯ ಸವಕಳಿ ಸೇರಿದಂತೆ ಪರಿಸರ ಸಂಬಂಧಿತ ಸಮಸ್ಯೆಗಳ ದ್ವಿಮುಖ ಪರಿಣಾಮವನ್ನು ರೈತರು ಎದುರಿಸುತ್ತಿದ್ದಾರೆ.
ಹಲವಾರು ಕಾರಣಗಳಿಂದಾಗಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿರುವುದು ಉತ್ಪಾದಕತೆಯ ಬಿಕ್ಕಟ್ಟನ್ನು ಹೆಚ್ಚಿಸಿದೆ. ಇದು ಹಸಿವು ಮತ್ತು ಹಸಿವಿನ ಪ್ರಮಾಣವನ್ನು ಎದುರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ. ಜನಸಂಖ್ಯೆಯ ಹೆಚ್ಚಳದೊಂದಿಗೆ ಆಹಾರದ ಬೇಡಿಕೆ ಹೆಚ್ಚಾಗುತ್ತದೆ. ವಿಶ್ವದ ಜನಸಂಖ್ಯೆಯು ಒಂಬತ್ತು ಬಿಲಿಯನ್ಗಿಂತ ಹೆಚ್ಚಾಗುವ ಸಾಧ್ಯತೆಯಿರುವುದು ಇಲ್ಲಿ ಗಮನಾರ್ಹ. ಇಷ್ಟು ದೊಡ್ಡ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು, 2050ರ ವೇಳೆಗೆ ಕೃಷಿ ಉತ್ಪಾದನೆ ಸುಮಾರು ಶೇಕಡಾ 70ರಷ್ಟು ಹೆಚ್ಚಾಗಬೇಕಾಗುತ್ತದೆ.
ಪರಿಸರಕ್ಕೆ ದೊಡ್ಡ ಮಟ್ಟದ ಹಾನಿ ಮಾಡದೆ ನಾವು ಈ ಗುರಿಯನ್ನು ಹೇಗೆ ತಲುಪುತ್ತೇವೆ ಎಂಬುದು ವಿಚಾರವಂತರ ಜಗತ್ತಿನಲ್ಲಿ ಚರ್ಚಿಸಲಾಗುತ್ತಿರುವ ಪ್ರಶ್ನೆಯಾಗಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಹವಾಮಾನ ಬದಲಾವಣೆಯು ಮಾನವ ಸಮಾಜವನ್ನು ಹಸಿವಿನ ಅಂಚಿಗೆ ತಳ್ಳುತ್ತಿದೆ ಹಾಗೂ ಸುಮಾರು 800 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಹವಾಮಾನ ಬದಲಾವಣೆಯು ಆಹಾರ ಭದ್ರತೆಗೆ ಪ್ರಮುಖ ಅಪಾಯವಾಗಿದೆ. ಹೆಚ್ಚುತ್ತಿರುವ ತಾಪಮಾನ, ಅನಿಯಮಿತ ಮಳೆ ಮತ್ತು ಹೆಚ್ಚು ತೀವ್ರವಾದ ಹವಾಮಾನ ಘಟನೆಗಳು ರೈತರಿಗೆ ಮೊದಲಿನಷ್ಟು ಆಹಾರವನ್ನು ಬೆಳೆಯಲು ಕಷ್ಟಕರವಾಗಿಸುತ್ತಿವೆ.
ಬರ ಮತ್ತು ರೋಗ-ನಿರೋಧಕ ಬೆಳೆಗಳನ್ನು ಅಭಿವೃದ್ಧಿಪಡಿಸಲು ಜೀನ್ ಎಡಿಟಿಂಗ್ ಅನ್ವಯಿಸಿಕೊಳ್ಳುವುದು ಸೇರಿದಂತೆ ಅನೇಕ ತಂತ್ರಗಳನ್ನು ತಜ್ಞರು ಪ್ರಸ್ತಾಪಿಸಿದ್ದಾರೆ. ಹೊಸ ಸಂತಾನೋತ್ಪತ್ತಿ ತಂತ್ರಜ್ಞಾನವು ಸಸ್ಯಗಳನ್ನು ಆನುವಂಶಿಕ ರೂಪಾಂತರಗಳು ಅಥವಾ ಸಾಂಪ್ರದಾಯಿಕ ಸಂತಾನೋತ್ಪತ್ತಿ ಮೂಲಕ ಬದಲಾಯಿಸುತ್ತದೆ. ಅದು ಅವುಗಳನ್ನು ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳಿಂದ ಪ್ರತ್ಯೇಕಿಸುತ್ತದೆ. ಆದರೆ ಮತ್ತೊಂದು ಜಾತಿ ಅಥವಾ ತಳಿಗಳಿಂದ ಜೀನ್ಗಳ ವರ್ಗಾವಣೆ ಅಥವಾ ಸೇರ್ಪಡೆಯನ್ನು ಒಳಗೊಂಡಿರುವುದರಿಂದ ಈ ತಂತ್ರಜ್ಞಾನವು ವಿವಾದಾತ್ಮಕವಾಗಿ ಉಳಿದಿದೆ.
ಪ್ರತಿ ಪೋಷಕ ಜೀಣುಗಳ ಅರ್ಧದಷ್ಟು ಬದಲಿಗೆ ಪೋಷಕ ಸಸ್ಯಗಳು ತಮ್ಮ ಎಲ್ಲಾ ಡಿಎನ್ಎ (ಜೀನೋಮ್) ಅನ್ನು ತಮ್ಮ ಸಂತತಿಗೆ ರವಾನಿಸಲು ಅನುವು ಮಾಡಿಕೊಡಲು ಸಿಆರ್ಎಸ್ಪಿಆರ್ ಜೀನ್ ಎಡಿಟಿಂಗ್ ಅನ್ನು ಬಳಸುವ ಸಸ್ಯ ಸಂತಾನೋತ್ಪತ್ತಿ ತಂತ್ರಜ್ಞಾನದ ಬಗ್ಗೆ ತಜ್ಞರು ಪ್ರಸ್ತಾಪಿಸಿದ್ದಾರೆ. ಮಾನವ ಸಮಾಜಗಳಲ್ಲಿರುವಂತೆ ಆನುವಂಶಿಕ ವೈವಿಧ್ಯತೆಯು ಸಸ್ಯಗಳು ಆರೋಗ್ಯಕರ ಮತ್ತು ದೀರ್ಘಾಯುಷ್ಯದೊಂದಿಗೆ ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಭಾರತದಲ್ಲಿ, ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಸಮುದ್ರ ಮಟ್ಟ ಏರಿಕೆ ಮತ್ತು ಮಣ್ಣಿನ ಲವಣಾಂಶದ ಹೆಚ್ಚಳದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಸಹಾಯ ಮಾಡಲು ಉಪ್ಪು-ಸಹಿಷ್ಣು ಅಕ್ಕಿಯ ತಳಿಯನ್ನು ಅಭಿವೃದ್ಧಿಪಡಿಸುತ್ತಿದೆ.
ಭಾರತದ ಸ್ಥಿತಿ ಏನಿದೆ?: "ನಿತ್ಯಹರಿದ್ವರ್ಣ ಕ್ರಾಂತಿಯ ಕಡೆಗೆ" (Toward an Evergreen Revolution) ಎಂಬ ಶೀರ್ಷಿಕೆಯ ಲೇಖನದಲ್ಲಿ ಮೆಹಾ ಜೈನ್ ಮತ್ತು ಬಲ್ವಿಂದರ್ ಸಿಂಗ್ (ಬೆಟರ್ ಪ್ಲಾನೆಟ್‌ನಲ್ಲಿ; ಬಿಗ್ ಐಡಿಯಾಸ್ ಫಾರ್ ಎ ಸಸ್ಟೈನಬಲ್ ಫ್ಯೂಚರ್ (ಎಡಿ: ಡೇನಿಯಲ್ ಸಿ. ಎಸ್ಟಿ (ಯೇಲ್ ಯೂನಿವರ್ಸಿಟಿ ಪ್ರೆಸ್) ತಾಪಮಾನ ಏರಿಕೆ ಮತ್ತು ಪರಿಸರದ ಅವನತಿಯು ವಿಶ್ವದಾದ್ಯಂತ ಕೃಷಿ ಉತ್ಪಾದಕತೆಯನ್ನು ಕಡಿಮೆ ಮಾಡುವ ಅಪಾಯ ಉಂಟುಮಾಡಿದೆ ಎಂದು ಹೇಳುತ್ತಾರೆ. ಈ ಸಮಸ್ಯೆಗಳು ಜಾಗತಿಕ ಆಹಾರ ಸರಬರಾಜಿನ ಮೂರನೇ ಒಂದು ಭಾಗದಷ್ಟಿರುವ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ಬಡ ದೇಶಗಳ ಸಣ್ಣ ಹಿಡುವಳಿದಾರರ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.