ಬಸ್ತಾರ್: ಛತ್ತೀಸಗಢದ ಬಸ್ತಾರ್ನಲ್ಲಿ ಕಳೆದ ನಾಲ್ಕು ದಶಕಗಳಿಂದಲೂ ನಕ್ಸಲಿಸಂ ಸಮಸ್ಯೆ ಬೇರೂರಿದೆ. ಬಸ್ತಾರ್ನಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದಷ್ಟೂ ಅದರ ಪ್ರಮಾಣ ಹೆಚ್ಚಾಗುತ್ತಿದೆ. ಆದಾಗ್ಯೂ ಕೆಲ ಪ್ರದೇಶಗಳಲ್ಲಿನ ನಕ್ಸಲರು ತಮ್ಮ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಅಥವಾ ಅನೇಕ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಅವರನ್ನು ಬೇರು ಸಹಿತ ಕಿತ್ತುಹಾಕಿವೆ. ಛತ್ತೀಸಗಢದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರವು ಮುಂದಿನ ಕೆಲ ವರ್ಷಗಳಲ್ಲಿ ಬಸ್ತಾರ್ನಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಣ ತೊಟ್ಟಿದೆ. ಇದಕ್ಕಾಗಿ ಒಂದೆಡೆ ಭದ್ರತಾ ಪಡೆಗಳಿಗೆ ಮುಕ್ತ ಅವಕಾಶ ನೀಡಿದೆ ಹಾಗೂ ಮತ್ತೊಂದೆಡೆ ಸರ್ಕಾರವು ನಕ್ಸಲರೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿದೆ ಮತ್ತು ಅವರ ಅಭಿಪ್ರಾಯಗಳನ್ನು ಕೂಡ ಪರಿಗಣಿಸುತ್ತಿದೆ.
ನಾಲ್ಕು ದಶಕಗಳಿಂದ ಬಸ್ತಾರ್ನಲ್ಲಿ ನಕ್ಸಲಿಸಂ ಬಲವಾಗಿ ಬೇರೂರಿರುವುದು ಏಕೆ?: ಭಾರತದಲ್ಲಿನ ನಕ್ಸಲಿಸಂ ಸಮಸ್ಯೆ ಬಗ್ಗೆ ಮಾತನಾಡುವುದಾದರೆ ಛತ್ತೀಸಗಢದ ಬಸ್ತಾರ್ ಹೆಸರೇ ಮೊದಲಿಗೆ ಪ್ರಸ್ತಾಪವಾಗುತ್ತದೆ. ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ಬಸ್ತಾರ್ ನಕ್ಸಲೀಯರಿಗೆ ಅನುಕೂಲಕರ ಸ್ಥಳವಾಗಿದೆ. ಇಲ್ಲಿನ ಸಾಮಾಜಿಕ ಮತ್ತು ಭೌಗೋಳಿಕ ಪರಿಸ್ಥಿತಿಗಳಿಂದಾಗಿ, ಬಸ್ತಾರ್ ನಕ್ಸಲರ ಭದ್ರ ಕೋಟೆಯಾಗಿ ಮಾರ್ಪಟ್ಟಿದೆ.
ಬಡತನ, ಅನಕ್ಷರತೆ ಮತ್ತು ಅಭಿವೃದ್ಧಿಯ ಕೊರತೆಗಳ ಕಾರಣದಿಂದ ಬಸ್ತಾರ್ನಲ್ಲಿ ನಕ್ಸಲಿಸಂ ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ. ಈ ಎಲ್ಲ ಸಮಸ್ಯೆಗಳಿಂದಾಗಿ ಬೇಸತ್ತ ಇಲ್ಲಿನ ಜನರು ನಕ್ಸಲೀಯರ ಪ್ರಚೋದನೆಗೆ ಒಳಗಾಗಿ ಅವರೊಂದಿಗೆ ಸೇರಿಕೊಂಡಿದ್ದಾರೆ. ಯಾವುದೇ ಮೂಲ ಸೌಲಭ್ಯಗಳಿಲ್ಲದ ಪ್ರದೇಶಗಳಿಗೆ ನಕ್ಸಲರು ತಲುಪುತ್ತಾರೆ ಮತ್ತು ಆ ಪ್ರದೇಶದಲ್ಲಿ ತಮ್ಮ ನೆಲೆ ಸ್ಥಾಪಿಸುತ್ತಾರೆ ಎನ್ನುತ್ತಾರೆ ವಿಶೇಷ ನಕ್ಸಲ್ ತಜ್ಞ ಮತ್ತು ಹಿರಿಯ ಪತ್ರಕರ್ತ ಮನೀಶ್ ಗುಪ್ತಾ.
"ನಕ್ಸಲೀಯರು ಸ್ಥಳೀಯರ ಭಾಷೆಯಲ್ಲಿಯೇ ಮಾತನಾಡಿ ಅವರ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅವರೊಂದಿಗೆ ಬಾಂಧವ್ಯ ಸಾಧಿಸುತ್ತಾರೆ. ನಕ್ಸಲ್ ಸಂಘಟನೆಗಳಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಾಮಾನ್ಯವಾಗಿ ನ್ಯಾಯಾಲಯ, ಪೊಲೀಸ್ ಮತ್ತು ಅರಣ್ಯ ಸಮಸ್ಯೆಗಳ ವಿಷಯದಲ್ಲಿ ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತದೆ. ಇಂಥ ಸಂದರ್ಭದಲ್ಲಿ ಅವರು ತಮ್ಮದೇ ಆದ ಜನ ಅದಾಲತ್ ನಡೆಸುತ್ತಾರೆ ಮತ್ತು ಜನರಿಗೆ ನ್ಯಾಯ ಒದಗಿಸುತ್ತಾರೆ. ಯಾರಿಗಾದರೂ ಅನ್ಯಾಯವಾದಾಗ ನಕ್ಸಲರು ಅವರೊಂದಿಗೆ ನಿಂತು ತಮ್ಮ ಸಂತಾಪ ವ್ಯಕ್ತಪಡಿಸುತ್ತಾರೆ. ಇದೇ ಕಾರಣದಿಂದ ನಕ್ಸಲೀಯರು ಮತ್ತು ಗ್ರಾಮಸ್ಥರ ನಡುವೆ ಬಲವಾದ ಸಂಬಂಧವಿದೆ. ಈ ಸಂಬಂಧವನ್ನು ಮುರಿಯಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ." ಎನ್ನುತ್ತಾರೆ ಮನೀಶ್ ಗುಪ್ತಾ.
ನಕ್ಸಲಿಸಂಗೆ ಅಂತ್ಯ ಹಾಡುವುದು ಏಕೆ ಅಗತ್ಯ? : ಬಸ್ತಾರ್ ಅಮೂಲ್ಯವಾದ ಅರಣ್ಯ ಮತ್ತು ಖನಿಜ ಸಂಪತ್ತನ್ನು ಹೊಂದಿದೆ. ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲ ಹಾಗೂ ಅಭಿವೃದ್ಧಿಯೂ ಆಗಿಲ್ಲ. ಅಲ್ಲದೇ ಇಲ್ಲಿ ಕೈಗಾರಿಕೆಗಳು ಬರದಂತೆ ನಕ್ಸಲೀಯರು ಅಡ್ಡಿಯುಂಟು ಮಾಡಿದ್ದಾರೆ. ಬಸ್ತಾರ್ನಲ್ಲಿ ಒಂದೊಮ್ಮೆ ನಕ್ಸಲಿಸಂ ಕೊನೆಗೊಂಡರೆ ಅಲ್ಲಿನ ಖನಿಜ ಸಂಪತ್ತು ಮತ್ತು ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಇದರಿಂದ ಜನರಿಗೆ ಉದ್ಯೋಗ ಸಿಗುತ್ತವೆ. ಈ ಮೂಲಕ ಬಸ್ತಾರ್ ಜನ ಸ್ವಾವಲಂಬಿಗಳಾಗಬಹುದು. ಇಲ್ಲಿ ನಕ್ಸಲಿಸಂ ಕೊನೆಗೊಂಡರೆ ಈ ಪ್ರದೇಶವನ್ನು ದೊಡ್ಡ ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಬಹುದು.
"ಪ್ರಕೃತಿ ಬಸ್ತಾರ್ಗೆ ಸಾಕಷ್ಟು ಕೊಡುಗೆ ನೀಡಿದೆ. ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮವನ್ನು ಬೆಳೆಸಬಹುದು. ಸ್ಥಳೀಯ ಜನರು ಇದರಿಂದ ಉದ್ಯೋಗ ಪಡೆಯಬಹುದು. ನಕ್ಸಲೀಯರ ಕಾರಣದಿಂದಾಗಿ ಯಾವೆಲ್ಲ ಸೌಲಭ್ಯಗಳು ಬಸ್ತಾರ್ಗೆ ತಲುಪುತ್ತಿಲ್ಲವೋ ಆ ಎಲ್ಲ ಸೌಲಭ್ಯಗಳು ಜನರಿಗೆ ಸಿಗುತ್ತವೆ ಮತ್ತು ಬಸ್ತಾರ್ ಶಾಂತಿಯುತವಾಗಲಿದೆ. ನಾವು ಬಯಸಿದ ಶಾಂತಿಯುತ ಮತ್ತು ಸುಂದರ ಬಸ್ತಾರ್ನ ಕನಸು ಆಗ ಈಡೇರುತ್ತದೆ." ಎಂದು ಮನೀಶ್ ಗುಪ್ತಾ ಅಭಿಪ್ರಾಯ ಪಟ್ಟರು.
ನಕ್ಸಲೀಯರ ಬೇಡಿಕೆಗಳೇನು?: ಈ ಸುಂದರ ಪ್ರದೇಶದಿಂದ ನಕ್ಸಲಿಸಂ ಅನ್ನು ಅಳಿಸಿಹಾಕಿದಾಗ ಮಾತ್ರ ಶಾಂತಿಯುತ, ಸುಂದರವಾದ ಬಸ್ತಾರ್ ಅನ್ನು ಕಲ್ಪಿಸಿಕೊಳ್ಳಬಹುದು. "ನಕ್ಸಲರ ಸಿದ್ಧಾಂತವು ವಿಭಿನ್ನವಾಗಿದೆ. ನಾವು ಪ್ರಜಾಸತ್ತಾತ್ಮಕವಾಗಿ ಮತ ಚಲಾಯಿಸುವ ಮೂಲಕ ದೇಶದಲ್ಲಿ ಸರ್ಕಾರವನ್ನು ಆಯ್ಕೆ ಮಾಡುತ್ತೇವೆ. ಆದರೆ ನಕ್ಸಲರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬೇಕಾಗಿಲ್ಲ. ನಕ್ಸಲೀಯರು ಬಂಡವಾಳಶಾಹಿಯನ್ನು ವಿರೋಧಿಸುತ್ತಾರೆ. ನಕ್ಸಲೀಯರು ಸಮಾಜವಾದ ಮತ್ತು ಕಮ್ಯುನಿಸಂ ಮೂಲಕ ತಮ್ಮ ಆಡಳಿತ ಸ್ಥಾಪಿಸಲು ಪ್ರಯತ್ನಿಸುತ್ತಾರೆ." ಎಂದರು ಹಿರಿಯ ಪತ್ರಕರ್ತ ಮನೀಶ್ ಗುಪ್ತಾ.