ಮೈಸೂರು:ನವರಾತ್ರಿ ಸಂದರ್ಭದಲ್ಲಿ ಶಕ್ತಿ ದೇವತೆಯ ಆರಾಧನೆಯ ಹಿನ್ನೆಲೆ ಏನು? ನವರಾತ್ರಿಯಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ವಿವಿಧ ಅಲಂಕಾರಗಳು ಹೇಗಿರುತ್ತವೆ? ಈ ಆಚರಣೆ ಹಿನ್ನೆಲೆ ಏನು? ಚಾಮುಂಡಿ ಬೆಟ್ಟದ ಪೂಜಾ ಪದ್ಧತಿ ಹಾಗೂ ಅರಮನೆಯ ಪೂಜಾ ಪದ್ಧತಿಯ ಸಾಮ್ಯತೆ ಏಕೆ? ಹೀಗೆ ನಾಡಹಬ್ಬ ದಸರಾ ಆಚರಣೆ ಬಗೆಗಿನ ವಿವಿಧ ವಿಷಯಗಳ ಕುರಿತು ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿ ಶೇಖರ್ ದೀಕ್ಷಿತ್ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.
ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ, ಉತ್ಸವ:''ಸಮಸ್ತ ವೀಕ್ಷಕರಿಗೆ ನಾಡ ಹಬ್ಬ ಮತ್ತು ನವರಾತ್ರಿಯ ಶುಭಾಶಯಗಳು.. ನವರಾತ್ರಿ ಎನ್ನುವುದು ಬಹಳ ವಿಶೇಷವಾದದ್ದು. ಪುರಾತನವಾದ ದೇವಸ್ಥಾನಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಪ್ರಮುಖವಾಗಿ ನಾಲ್ಕು ನವರಾತ್ರಿಗಳನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲಿ ಚೈತ್ರ ಮಾಸದ ವಸಂತ ನವರಾತ್ರಿ, ಆಷಾಢ ಮಾಸದ ಗ್ರೀಷ್ಮ ನವರಾತ್ರಿ, ಶರತ್ ಕಾಲದ ಶರನ್ನವರಾತ್ರಿ, ನಾಗ ಮಾಸದ ನಾಗ ನವರಾತ್ರಿ, ಇದರಲ್ಲಿ ಶರನ್ನವರಾತ್ರಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಈ ಸಮಯದಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಶೇಷವಾಗಿ ಪೂಜೆ, ಉತ್ಸವಗಳನ್ನು ನಡೆಸಲಾಗುತ್ತದೆ'' ಎಂದು ತಿಳಿಸಿದರು.
''ನವರಾತ್ರಿ ಎಂದಿನಂತೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕದ ಜೊತೆಗೆ ಬ್ರಾಹ್ಮಿ ಅಲಂಕಾರವನ್ನು ಚಾಮುಂಡೇಶ್ವರಿ ದೇವಿಗೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಒಂಬತ್ತು ದುರ್ಗಯರನ್ನು ಆಹ್ವಾನ ಮಾಡಿ ಪೂಜೆ ಮಾಡಲಾಗುತ್ತದೆ. ಇದು ಒಂದೊಂದು ದೇವಾಲಯದಲ್ಲಿ ಒಂದೊಂದು ಪ್ರಾಂತ್ಯದಲ್ಲಿ ವಿಭಿನ್ನವಾಗಿ ವಿಶೇಷ ಪೂಜೆ ಮಾಡಲಾಗುತ್ತದೆ'' ಎಂದು ವಿವರಿಸಿದರು.
ನಾಳೆ ಸಿಎಂಯಿಂದ ನವರಾತ್ರಿ ಚಾಲನೆ:''ನಾಳೆ (ಅ.3 ರಂದು) ಅರಮನೆ ಮತ್ತು ಚಾಮುಂಡಿ ಬೆಟ್ಟದಲ್ಲಿ ನಡೆಯುವ ಪೂಜೆಗೆ ಅವಿನಭಾವ ಸಂಬಂಧವಿದ್ದು, ಒಂದೇ ಸಮಯದಲ್ಲಿ ನಡೆಯುತ್ತದೆ. ಅಲ್ಲಿ ಮಹಾರಾಜರು ಖಾಸಗಿ ದರ್ಬಾರ್ ನಡೆಸುತ್ತಾರೆ. ಇಲ್ಲಿ ಚಾಮುಂಡಿ ತಾಯಿ ಕರೆದುಕೊಂಡು ಹೋಗಿ ದರ್ಬಾರ್ ನಡೆಸುತ್ತೇವೆ. ನಾಳೆ ಬೆಳಗ್ಗೆ 9.15 ರಿಂದ 9.45ರ ಸಮಯದಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಸಿಎಂ ಅವರಿಂದ ಪುಷ್ಪಾರ್ಚನೆ ನೆರವೇರಿಸುವ ಮೂಲಕ ನವರಾತ್ರಿ ಚಾಲನೆ ನೀಡಲಾಗುತ್ತದೆ'' ಎಂದರು.