ಬೆಂಗಳೂರು: ಕೇಂದ್ರ ಬಜೆಟ್ನಲ್ಲಿ ನಿರೀಕ್ಷಿಸಿದ್ದ ಅನುದಾನ ಘೋಷಣೆಯಾಗದೇ ಇರುವುದರಿಂದ ಕರ್ನಾಟಕಕ್ಕೆ ನಿರಾಸೆಯಾಗಿದೆ. ಆದರೆ, 2025-26ರ ಸಾಲಿನಲ್ಲಿ ರಾಜ್ಯದ ಪಾಲಿನ ಕೇಂದ್ರದ ತೆರಿಗೆ ಹಂಚಿಕೆ ಮೊತ್ತವನ್ನು 51,876 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಬಜೆಟ್ನಲ್ಲಿ ರಾಜ್ಯಕ್ಕೆ ಗಮನಾರ್ಹ ಘೋಷಣೆಗಳೇನೂ ಇಲ್ಲ. ರಾಜ್ಯ ಸರ್ಕಾರ ಬೆಂಗಳೂರಿನ 90,000 ಕೋಟಿ ರೂ. ವೆಚ್ಚದ ವಿವಿಧ ಪ್ರಮುಖ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಆದರೆ ಬಜೆಟ್ನಲ್ಲಿ ಈ ಕುರಿತು ಯಾವುದೇ ಪ್ರಸ್ತಾಪಗಳಿಲ್ಲ.
ತೆರಿಗೆ ಹಂಚಿಕೆಯಲ್ಲಿ ಏರಿಕೆ: 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ 46,932.72 ಕೋಟಿ ರೂ. ತೆರಿಗೆ ಹಂಚಿತ್ತು. ಆದರೆ ಈ ಬಾರಿ 51,876 ಕೋಟಿ ರೂ.ಗೆ ಹೆಚ್ಚಿಸಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.10ರಷ್ಟು ಹೆಚ್ಚಳವಾಗಿದೆ. ಇದು ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಸ್ವಲ್ಪ ನಿಟ್ಟುಸಿರು ಬಿಡುವ ವಿಚಾರ. ಈ ಬಾರಿ ತಮಿಳುನಾಡಿಗೆ 58,021.50 ಕೋಟಿ ರೂ., ಆಂಧ್ರ ಪ್ರದೇಶಕ್ಕೆ 57,566.31 ಕೋಟಿ ರೂ. ತೆರಿಗೆ ಹಂಚಲಾಗಿದೆ.
Karnataka contributes ₹4 Lakh Crore in taxes every year. But what do we get in return? NOTHING!
— Siddaramaiah (@siddaramaiah) February 1, 2025
❌ No fair tax share
❌ No irrigation project funds
❌ No support for Bengaluru’s growth
❌ No GST compensation
❌ No disaster relief aid
Karnataka is being punished for rejecting… pic.twitter.com/RMc3OorcZX
ಬೆಂಗಳೂರು ಉಪನಗರ ರೈಲು ಯೋಜನೆಗೆ ₹350 ಕೋಟಿ: ಬೆಂಗಳೂರು ಉಪನಗರ ರೈಲು ಯೋಜನೆಗೆ ಬಜೆಟ್ನಲ್ಲಿ 350 ಕೋಟಿ ರೂ. ಅನುದಾನ ಘೋಷಣೆಯಾಗಿದೆ. ಸಬ್ ಅರ್ಬನ್ ರೈಲ್ವೆಗೆ ಕಳೆದ ಬಾರಿಯೂ 350 ಕೋಟಿ ನೀಡಲಾಗಿತ್ತು.
ಮೆಟ್ರೋ ಮತ್ತು ಸಾಮೂಹಿಕ ತ್ವರಿತ ಸಂಚಾರಿ ವ್ಯವಸ್ಥೆ ಯೋಜನೆಗಳಿಗೆ 31,106.18 ಕೋಟಿ ರೂ. ಘೋಷಿಸಲಾಗಿದೆ. ಇದರ ಲಾಭ ನಮ್ಮ ಮೆಟ್ರೋಗೂ ಆಗಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ 2.O ನಗರಕ್ಕೆ ಕೇಂದ್ರ ಬಜೆಟ್ನಲ್ಲಿ ಒಟ್ಟು 3,500 ಕೋಟಿ ರೂ. ಘೋಷಿಸಲಾಗಿದೆ. ಇದು ಬೆಂಗಳೂರಲ್ಲೂ ವಸತಿ ಯೋಜನೆಯನ್ನು ಕಲ್ಪಿಸಲಿದೆ. ಇದರ ಜೊತೆಗೆ ದೇಶಾದ್ಯಂತ ಅಮೃತ ಯೋಜನೆಯಡಿ ಒಟ್ಟು 10,000 ಕೋಟಿ ರೂ. ಘೋಷಿಸಲಾಗಿದ್ದು, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೂ ಇದರಲ್ಲಿ ಗಣನೀಯ ಪಾಲು ಸಿಗುವ ನಿರೀಕ್ಷೆ ಇದೆ.
ಕರ್ನಾಟಕಕ್ಕೆ 7,564 ಕೋಟಿ ರೂ. ರೈಲ್ವೆ ಬಜೆಟ್: ಈ ಬಾರಿ ಕರ್ನಾಟಕಕ್ಕೆ ರೈಲ್ವೆ ಬಜೆಟ್ 7,564 ಕೋಟಿ ರೂ. ನೀಡಲಾಗಿದೆ. ಕಳೆದ ಬಾರಿ 7559 ಕೋಟಿ ರೂ. ನೀಡಲಾಗಿತ್ತು ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಗದಗ - ವಾಡಿ ರೈಲ್ವೆ ಮಾರ್ಗಕ್ಕೆ 549 ಕೋಟಿ ರೂ., ತುಮಕೂರು-ಚಿತ್ರದುರ್ಗ ಮತ್ತು ದಾವಣಗೆರೆ ರೈಲ್ವೆ ಮಾರ್ಗಕ್ಕೆ 549 ಕೋಟಿ ರೂ., ರಾಯದುರ್ಗ-ಕಲ್ಯಾಣದುರ್ಗ- ತುಮಕೂರು ರೈಲ್ವೆ ಮಾರ್ಗಕ್ಕೆ 434 ಕೋಟಿ ರೂ., ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗಕ್ಕೆ 428 ಕೋಟಿ ರೂ., ಬೆಂಗಳೂರು-ವೈಟ್‌ಫೀಲ್ಡ್- ಕೆಆರ್ ಪುರಂ ರೈಲ್ವೆ ಮಾರ್ಗಕ್ಕೆ 357 ಕೋಟಿ ರೂ., ದೌಂಡ್-ಕಲಬುರಗಿ ರೈಲ್ವೆ ಮಾರ್ಗದ ವಿದ್ಯುದ್ದೀಕರಣಕ್ಲೆ 84 ಕೋಟಿ ರೂ. ಹಾಗೂ ರಾಮನಗರ-ಮೈಸೂರು ರೈಲ್ವೆ ಮಾರ್ಗದ ವಿದ್ಯುದ್ದೀಕರಣಕ್ಕೆ 10 ಕೋಟಿ ರೂ. ನೀಡಲಾಗಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್- 2025 : ಯಾವ ವಸ್ತುಗಳು ಅಗ್ಗ, ಯಾವುದೆಲ್ಲಾ ದುಬಾರಿ?
ಇದನ್ನೂ ಓದಿ: ಕೇಂದ್ರ ಬಜೆಟ್ 2025 ಪ್ರಮುಖ ಘೋಷಣೆಗಳು ಹೀಗಿವೆ
ಇದನ್ನೂ ಓದಿ: 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ: ಕೇಂದ್ರ ಬಜೆಟ್ನಲ್ಲಿ ಘೋಷಣೆ