ಟೇಸ್ಟಿ ಟೇಸ್ಟಿ ನುಗ್ಗೆ ಸೊಪ್ಪಿನ ಚಪಾತಿ: ಸಿದ್ಧಪಡಿಸೋದು ಅಷ್ಟೇ ಸರಳ, ತೂಕ ಇಳಿಸುವವರಿಗೆ ಸೂಪರ್ ಆಯ್ಕೆ - MORINGA LEAVES CHAPATI RECIPE
Moringa Leaves Chapati Recipe: ನುಗ್ಗೆ ಸೊಪ್ಪಿನ ಚಪಾತಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ಸೇವಿಸಬೇಕೆನಿಸುತ್ತದೆ. ಇದೀಗ ನುಗ್ಗೆ ಸೊಪ್ಪಿನ ಚಪಾತಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
Moringa Leaves Chapati Recipe:ಬಹುತೇಕರಿಗೆ ಊಟದ ಸಮಯದಲ್ಲಿ ಚಪಾತಿ ಇದ್ದರೆ ತುಂಬಾ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ವಿಶೇಷವಾಗಿ ತೂಕ ಇಳಿಸುವವರಿಗೆ, ಬಿಪಿ ಹಾಗೂ ಶುಗರ್ ನಿಯಂತ್ರಿಸಲು ಬಯಸುವವರು ದಿನಕ್ಕೆ ಒಂದು ಬಾರಿಯಾದರೂ ಚಪಾತಿಗಳನ್ನು ಸೇವಿಸುತ್ತಾರೆ. ಒಂದೇ ಬಗೆಯ ಚಪಾತಿಗಳನ್ನು ಸೇವಿಸುವುದು ಯಾರಿಗಾದರೂ ತುಂಬಾ ಬೇಸರ ಉಂಟು ಮಾಡುತ್ತದೆ.
ನುಗ್ಗೆ ಸೊಪ್ಪಿನ ಚಪಾತಿ ಒಂದು ಬಾರಿ ಪ್ರಯತ್ನಿಸಿ ನೋಡಿ. ಇವು ಸಾಮಾನ್ಯ ಚಪಾತಿಗಳಿಗಿಂತ ಹೆಚ್ಚು ರುಚಿಕರ. ನುಗ್ಗೆ ಸೊಪ್ಪಿನಲ್ಲಿ ದೇಹಕ್ಕೆ ಅಗತ್ಯವಿರುವ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸತುವುಗಳಂತಹ ಅನೇಕ ಪೋಷಕಾಂಶಗಳು ಹೇರಳವಾಗಿವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ನುಗ್ಗೆ ಸೊಪ್ಪಿನ ಚಪಾತಿ ಅತ್ಯುತ್ತಮ ಆಯ್ಕೆಯಾಗಿದೆ. ಈ ರುಚಿಕರ & ಆರೋಗ್ಯಕರವಾದ ನುಗ್ಗೆ ಸೊಪ್ಪಿನ ಚಪಾತಿಗೆ ಬೇಕಾಗುವ ಪದಾರ್ಥಗಳೇನು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ನುಗ್ಗೆ ಸೊಪ್ಪಿನ ಚಪಾತಿಗೆ ಪದಾರ್ಥಗಳೇನು ?
ಗೋಧಿ ಹಿಟ್ಟು - 1 ಕಪ್
ನುಗ್ಗೆಕಾಯಿ - 5
ನುಗ್ಗೆ ಸೊಪ್ಪು- ಅರ್ಧ ಕಪ್
ಕೊತ್ತಂಬರಿ ಸೊಪ್ಪು - 2 ಚಮಚ
ಎಣ್ಣೆ - ಟೀಸ್ಪೂನ್
ಖಾರದ ಪುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಅರಿಶಿನ - ಒಂದು ಚಿಟಿಕೆ
ಜೀರಿಗೆ ಪುಡಿ - 1 ಟೀಸ್ಪೂನ್
ಧನಿಯಾ ಪುಡಿ - 1 ಟೀಸ್ಪೂನ್
ಹುರಿದ ಎಳ್ಳು - ಸ್ವಲ್ಪ
ನುಗ್ಗೆ ಸೊಪ್ಪಿನ ಚಪಾತಿ ಸಿದ್ಧಪಡಿಸುವ ವಿಧಾನ :
ಮೊದಲು ನುಗ್ಗೆಕಾಯಿಯನ್ನು ಪೀಸ್ಗಳಾಗಿ ಕಟ್ ಮಾಡಿ ಇಟ್ಟುಕೊಳ್ಳಿ. ಅವುಗಳನ್ನು ಸರಿಯಾಗಿ ಬೇಯಿಸಿ. ಬಳಿಕ ಅವುಗಳನ್ನು ವಳ್ಳಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ. ಆಗ ಸಿಪ್ಪೆಗಳನ್ನು ಬೇರ್ಪಡಿಸಿ ಇಟ್ಟುಕೊಳ್ಳಿ.
ಗೋಧಿ ಹಿಟ್ಟು ಹಾಗೂ ತೆಳುವಾಗಿ ಕತ್ತರಿಸಿದ ನುಗ್ಗೆ ಸೊಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಎಲ್ಲವನ್ನೂ ಸೇರಿಸಬೇಕಾಗುತ್ತದೆ.
ಬಳಿಕ ಈ ಮಿಶ್ರಣಕ್ಕೆ ಖಾರದ ಪುಡಿ, ಉಪ್ಪು, ಅರಿಶಿನ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಮತ್ತು ಹುರಿದ ಎಳ್ಳನ್ನು ಸೇರಿಸಿ ಮತ್ತೆ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ.
ಹಿಟ್ಟನ್ನು ಬೆರೆಸುವಾಗ ನುಗ್ಗೆಕಾಯಿ ತಿರುಳಿನಲ್ಲಿರುವ ತೇವಾಂಶ ಸಾಕಾಗದಿದ್ದರೆ ಸ್ವಲ್ಪ ನೀರು ಬೆರೆಸಿ ಹಿಟ್ಟನ್ನು ಚೆನ್ನಾಗಿ ಕಲಸಿ. ನಂತರ ಅರ್ಧ ಗಂಟೆ ಪಕ್ಕಕ್ಕೆ ಮುಚ್ಚಿಡಿ.
ಬಳಿಕ, 30 ನಿಮಿಷಗಳವರೆಗೆ ನೆನೆಸಿಟ್ಟ ಹಿಟ್ಟನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
ಪ್ರತಿಯೊಂದು ಹಿಟ್ಟಿನ ಉಂಡೆಗಳನ್ನು ಚಪಾತಿ ಮಣೆಯ ಮೇಲೆ ರೌಂಡ್ ಸೇಪ್ನಲ್ಲಿ ಚಪಾತಿಯಂತೆ ರೆಡಿ ಮಾಡಿಕೊಳ್ಳಿ. ನೀವು ಎಲ್ಲವನ್ನೂ ಇದೇ ರೀತಿಯಾಗಿ ಸಿದ್ಧಪಡಿಸಬೇಕಾಗುತ್ತದೆ.
ಈಗ ಪ್ಯಾನ್ ಅನ್ನು ಒಲೆಯ ಮೇಲೆ ಇಟ್ಟು ಬಿಸಿ ಮಾಡಿಕೊಳ್ಳಿ. ಪ್ಯಾನ್ ಬಿಸಿಯಾದ ಬಳಿಕ, ಸ್ವಲ್ಪ ಎಣ್ಣೆ ಇಲ್ಲವೇ ತುಪ್ಪವನ್ನು ಸವರಿ ಇಟ್ಟುಕೊಳ್ಳಬೇಕಾಗುತ್ತದೆ. ಈ ಹಿಂದೆ ಮಾಡಿದ ಚಪಾತಿಗಳನ್ನು ಒಂದೊಂದಾಗಿ, ಎರಡೂ ಬದಿಗಳಲ್ಲಿ ಚೆನ್ನಾಗಿ ಹುರಿಯಬೇಕಾಗುತ್ತದೆ. ಆಗ ಬಾಯಲ್ಲಿ ನೀರೂರಿಸುವ ನುಗ್ಗೆ ಸೊಪ್ಪಿನ ಚಪಾತಿ ಸವಿಯಲು ಸಿದ್ಧ.
ನಿಮಗೆ ಇಷ್ಟವಾದಲ್ಲಿ ಈ ಚಪಾತಿಗಳನ್ನು ಪ್ರಯತ್ನಿಸಿ ನೋಡಿ. ಇವುಗಳನ್ನು ಮನೆ ಮಂದಿ ಎಲ್ಲರೂ ಇಷ್ಟಪಟ್ಟು ಸಂತೋಷದಿಂದ ಸೇವಿಸುತ್ತಾರೆ.