How to Make Restaurant Style Chole Bhature:ಚೋಲೆ ಭಟುರೆ ಹಲವರ ನೆಚ್ಚಿನ ಫುಡ್. ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೆ ಹೋಗುವ ಅನೇಕರು ಪಂಜಾಬಿ ಶೈಲಿಯ ಈ ಚೋಲೆ ಭಟುರೆಯನ್ನು ಆರ್ಡರ್ ಮಾಡಿ ಸವಿಯುತ್ತಾರೆ. ಕಸೂರಿ ಮೇಥಿಯೊಂದಿಗೆ ಮಾಡುವ ರೆಸಿಪಿಯ ರುಚಿ ಮಾತ್ರ ಸಖತ್ ಆಗಿರುತ್ತದೆ. ನೀವೂ ಸಹ ಇದನ್ನು ತಿನ್ನಲು ಬಯಸುವಿರಾ? ಹಾಗಾದ್ರೆ, ಮನೆಯಲ್ಲೇ ಪ್ರಯತ್ನಿಸಿ ನೋಡಿ. ಇದನ್ನು ಮಾಡುವ ವಿಧಾನ ತುಂಬಾ ಸರಳ.
ಚೋಲೆ ಭಟುರೆಗೆ ಬೇಕಾಗುವ ಪದಾರ್ಥಗಳು:
ಭಟುರೆಗಾಗಿ:
ಬಾಂಬೆ ರವಾ - 3/4 ಕಪ್
ಮೊಸರು - ಅರ್ಧ ಕಪ್
ಉಪ್ಪು - ಅರ್ಧ ಟೀಸ್ಪೂನ್
ಗೋಧಿ ಹಿಟ್ಟು - 2 ಕಪ್
ಚೋಲೆಗಾಗಿ:
ಕಾಬೂಲಿ ಕಡಲೆ - ಅರ್ಧ ಕೆಜಿ
ದಾಲ್ಚಿನ್ನಿ - ಇಂಚು
ಕಪ್ಪು ಏಲಕ್ಕಿ - 1
ಏಲಕ್ಕಿ - 3
ಉಪ್ಪು - ಅರ್ಧ ಟೀಸ್ಪೂನ್
ಕೊತ್ತಂಬರಿ ಸೊಪ್ಪು - 2 ಟೀಸ್ಪೂನ್
ಕಾಳು ಮೆಣಸು - 1 ಟೀಸ್ಪೂನ್
ಜೀರಿಗೆ - 1 ಟೀಸ್ಪೂನ್
ದಾಲ್ಚಿನ್ನಿ - ಇಂಚು
ಜಾಯಿಕಾಯಿ - 1
ಜಪಾತ್ರಿ - ಸ್ವಲ್ಪ
ಲವಂಗ - 6
ಒಣ ಮೆಣಸಿನಕಾಯಿ - 7
ಎಣ್ಣೆ - 3 ಟೀಸ್ಪೂನ್
ಜೀರಿಗೆ - ಅರ್ಧ ಟೀಸ್ಪೂನ್
ಬಿರಿಯಾನಿ ಎಲೆಗಳು - 2
ಈರುಳ್ಳಿ - 3
ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
ಟೊಮೆಟೊ - 2
ಅರಿಶಿನ - ಕಾಲು ಟೀಸ್ಪೂನ್
ಖಾರದ ಪುಡಿ - 1 ಟೀಸ್ಪೂನ್
ಆಮ್ಚೂರ್ ಪುಡಿ - ಅರ್ಧ ಟೀಸ್ಪೂನ್
ನೀರು - ಮೂರೂವರೆ ಕಪ್
ಉಪ್ಪು- ರುಚಿಗೆ ತಕ್ಕಷ್ಟು
ಚೋಲೆ ಭಟುರೆ ತಯಾರಿಸುವ ವಿಧಾನ:
ಮೊದಲು ಕಾಬೂಲಿ ಕಡಲೆಯನ್ನು ತೊಳೆದು ಎಂಟು ಗಂಟೆಗಳ ಕಾಲ ನೆನೆಸಿಡಿ. ನೀವು ಬೆಳಿಗ್ಗೆ ಈ ಅಡುಗೆಯನ್ನು ತಯಾರಿಸಲು ಬಯಸಿದರೆ, ರಾತ್ರಿಯಲ್ಲಿ ಕಾಬೂಲಿ ಕಡಲೆ ನೆನೆಸಿಡುವುದು ಒಳ್ಳೆಯದು.
ಭಟುರೆಗಾಗಿ ಹಿಟ್ಟನ್ನು ತಯಾರಿಸಬೇಕಾಗುತ್ತದೆ. ಅದಕ್ಕಾಗಿ ಒಂದು ಪಾತ್ರೆಯಲ್ಲಿ ಬಾಂಬೆ ರವೆ, ಮೊಸರು ಮತ್ತು ಉಪ್ಪನ್ನು ಹಾಕಿ ಒಂದೆರಡು ನಿಮಿಷ ಇಡಿ. ನಂತರ ಗೋಧಿ ಹಿಟ್ಟನ್ನು ಸೇರಿಸಿ ಹಾಗೂ ಸ್ವಲ್ಪ ನೀರು ಸುರಿಯಿರಿ ಹಾಗೂ ನಿಧಾನವಾಗಿ ಮಿಶ್ರಣ ಮಾಡಿ, ಮುಚ್ಚಿ ಮತ್ತು ಒಂದು ಗಂಟೆ ಇರಿಸಿ.
ಈಗ ನೆನೆಸಿದ ಕಡಲೆಯನ್ನು ಕುಕ್ಕರ್‌ನಲ್ಲಿ ಹಾಕಿ ದಾಲ್ಚಿನ್ನಿ, ಕಪ್ಪು ಏಲಕ್ಕಿ, ಉಪ್ಪು ಹಾಕಿ ಒಂದು ಲೀಟರ್ ನೀರು ಹಾಕಿ ಮುಚ್ಚಳವನ್ನು ಹಾಕಿ ಮಧ್ಯಮ ಉರಿಯಲ್ಲಿ 7 ಸೀಟಿ ಬರುವವರೆಗೆ ಬೇಯಿಸಿ. ಅವು ಬೇಯಿಸಿದ ನಂತರ, ಅವುಗಳನ್ನು ಒಂದು ಜರಡಿಯಲ್ಲಿ ಸುರಿಯಿರಿ ಮತ್ತು ಪಕ್ಕಕ್ಕೆ ಇರಿಸಿ.
ಈಗ ಸ್ಟೌ ಆನ್ ಮಾಡಿ ಬಾಣಲೆ ಇಟ್ಟು ಕೊತ್ತಂಬರಿ ಸೊಪ್ಪು, ಕಾಳುಮೆಣಸು, ಜೀರಿಗೆ ಹಾಕಿ ಗಟ್ಟಿಯಾಗುವವರೆಗೆ ಹುರಿದು ತಟ್ಟೆಗೆ ತೆಗೆದುಕೊಳ್ಳಿ. ಈಗ ಅದೇ ಬಾಣಲೆಯಲ್ಲಿ ದಾಲ್ಚಿನ್ನಿ, ಕಪ್ಪು ಏಲಕ್ಕಿ, ಜಾಯಿಕಾಯಿ, ಜಪಾತ್ರಿ, ಲವಂಗ ಮತ್ತು ಕರಿಮೆಣಸು ಹಾಕಿ ಹುರಿಯಿರಿ.
ಮಿಕ್ಸಿ ಜಾರ್‌ಗೆ ಹುರಿದ ಕೊತ್ತಂಬರಿ ಸೊಪ್ಪಿನ ಮಿಶ್ರಣ ಮತ್ತು ಹುರಿದ ಒಣ ಮೆಣಸಿನಕಾಯಿ ಮಿಶ್ರಣವನ್ನು ಸೇರಿಸಿ ನುಣ್ಣಗೆ ಪುಡಿಮಾಡಿ.
ಈಗ ಸ್ಟವ್ ಆನ್ ಮಾಡಿ ಪಾತ್ರೆ ಇಟ್ಟು ಸ್ವಲ್ವ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ, ಬಿರಿಯಾನಿ ಎಲೆ ಮತ್ತು ಏಲಕ್ಕಿ ಹಾಕಿ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಮಾಯವಾಗುವವರೆಗೆ ಹುರಿಯಿರಿ. ನಂತರ ತೆಳುವಾಗಿ ಕತ್ತರಿಸಿದ ಟೊಮೆಟೊ ಸೇರಿಸಿ ಮತ್ತು ನಿಧಾನವಾಗಿ ಬೇಯಿಸಿ. ಅದರ ನಂತರ ಅರಿಶಿನ ಮತ್ತು ಮೆಣಸಿನಕಾಯಿಯನ್ನು ಸೇರಿಸಿ ಹಾಗೂ ಚೆನ್ನಾಗಿ ಮಿಶ್ರಣ ಮಾಡಿ, 5 ನಿಮಿಷ ಬೇಯಿಸಿಕೊಳ್ಳಬೇಕಾಗುತ್ತದೆ.
ನಂತರ ರುಬ್ಬಿದ ಮಸಾಲಾ ಪುಡಿಯನ್ನು ಹಾಕಿ ಬೇಯಿಸಿದ ಕಡಲೆಯೊಂದಿಗೆ ಕಲಸಿ, ಉಪ್ಪು ಸೇರಿಸಿ ಮತ್ತು ಆಮ್ಚೂರ್ ಪುಡಿಯೊಂದಿಗೆ ಬೆರೆಸಿ, ಮೂರೂವರೆ ಕಪ್ ನೀರು ಸೇರಿಸಿ ಮುಚ್ಚಿ 5 ನಿಮಿಷ ಬೇಯಿಸಿ ಪಕ್ಕಕ್ಕಿರಿಸಿ.
ಈಗ ಒಗ್ಗರಣೆ ಸಿದ್ಧಪಡಿಸಲು, ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಸ್ವಲ್ಪ ಬೆಳ್ಳುಳ್ಳಿ, ಶುಂಠಿ, ನಾಲ್ಕು ಹಸಿಮೆಣಸಿನಕಾಯಿ, ಕಸೂರಿ ಮೇತಿ ಹಾಕಿ ಹುರಿದುಕೊಳ್ಳಬೇಕಾಗುತ್ತದೆ.
ನಂತರ ಒಲೆ ಆನ್ ಮಾಡಿ ಹಾಗೂ ಕಡಾಯಿ ಹಾಕಿ, ಆಳವಾಗಿ ಹುರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗುವ ಮೊದಲು ಗೋಧಿ ಹಿಟ್ಟಿನ ಮಿಶ್ರಣವನ್ನು ಮತ್ತೊಮ್ಮೆ ಬೆರೆಸಿ ಸ್ವಲ್ಪ ದಪ್ಪ ಹಿಟ್ಟನ್ನು ತಯಾರಿಸಿ.
ಒಣ ಹಿಟ್ಟನ್ನು ಸಿಂಪಡಿಸಿ ಮತ್ತು ಅದನ್ನು ದಪ್ಪ ಪೂರಿಗಳಾಗಿ ರೆಡಿ ಮಾಡಿಕೊಳ್ಳಿ. ತಯಾರಾದ ಪೂರಿಗಳನ್ನು ಬಿಸಿ ಎಣ್ಣೆಯಲ್ಲಿ ಹಾಕಿ, ಎರಡೂ ಬದಿಗಳಲ್ಲಿ ಕೆಂಪು ಬಣ್ಣ ಬರುವವರೆಗೆ ಹುರಿಯಿರಿ. ಇಷ್ಟು ಮಾಡಿದರೆ ಸಾಕು ರುಚಿ ರುಚಿಯಾದ ಚೋಲೆ ಭಟುರೆ.
ಅವುಗಳನ್ನು ಬಿಸಿಯಾಗಿರುವಾಗಲೇ ಬಡಿಸಿ ಹಾಗೂ ರುಚಿಗೆ ಸ್ವಲ್ಪ ನಿಂಬೆ ರಸ ಹಿಂಡಿಕೊಳ್ಳಬಹುದು. ಈ ರೆಸಿಪಿ ನಿಮಗೆ ಇಷ್ಟವಾದರೆ ಒಮ್ಮೆ ಪ್ರಯತ್ನಿಸಿ.