ಮುಂಬೈ(ಮಹಾರಾಷ್ಟ್ರ):ಫೆಲೈನ್ ಕ್ಲಬ್ ಆಫ್ ಇಂಡಿಯಾ ವತಿಯಿಂದ ಕೊಲ್ಲಾಪುರದಲ್ಲಿ ಭಾನುವಾರ ಆಯೋಜಿಸಿದ್ದ ‘ಕ್ಯಾಟ್ ಶೋ’ನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಅಪರೂಪದ ಬೆಕ್ಕುಗಳನ್ನು ವೀಕ್ಷಿಸಲು ಸಾವಿರಾರು ಜನ ಸೇರಿದ್ದರು.
ಪ್ರದರ್ಶನದಲ್ಲಿ ವಿವಿಧ ತಳಿಯ 200ಕ್ಕೂ ಹೆಚ್ಚು ಬೆಕ್ಕುಗಳಿದ್ದವು. ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಪರ್ಷಿಯನ್ ಕ್ಯಾಟ್, ಕ್ಲಾಸಿಕ್ ಲಾಂಗ್ ಹೇರ್, ಬೆಂಗಾಲ್ ಕ್ಯಾಟ್, ಮೈನೆ ಕೂನ್, ಎಕ್ಸೋಟಿಕ್ ಶಾರ್ಟ್ ಕ್ಯಾಟ್, ಬ್ರಿಟಿಷ್ ಶಾರ್ಟ್ ಹೇರ್, ಸೈಬೀರಿಯನ್ ಕ್ಯಾಟ್, ಒರಿವೋ, ಸಿಯಾಮೀಸ್, ಇಂಡಿಯನ್ ಬ್ರೀಡ್ ಇಂಡಿ ಮೌ ಸೇರಿದಂತೆ ವಿವಿಧ ತಳಿಗಳ ಬೆಕ್ಕುಗಳನ್ನು ಜನರು ಕಣ್ತುಂಬಿಕೊಂಡರು.
ಗಮನಸೆಳೆದ ದೇಶಿ ಬೆಕ್ಕುಗಳು:ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ವಿವಿಧ ತಳಿಯ ಬೆಕ್ಕುಗಳು ಬಂದಿದ್ದವು. ಈ ಮಧ್ಯೆ ಬೆಂಗಾಲ್ ಹುಲಿಯಂತೆ ಕಾಣುತ್ತಿದ್ದ ಬೆಂಗಾಲ್ ಬೆಕ್ಕು ಪ್ರಮುಖ ಆಕರ್ಷಣೆಯಾಗಿತ್ತು. ಪ್ರದರ್ಶನದಲ್ಲಿ ಪಾಲ್ಗೊಂಡ ಬೆಕ್ಕುಗಳಿಗೆ 5 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೂ ಬೆಲೆ ಇತ್ತು.