ದಶಕಗಳಿಂದ ಭಾರತ ಮತ್ತು ಕೆನಡಾ ಆಳವಾದ ದ್ವಿಪಕ್ಷೀಯ ಸಂಬಂಧ ಹೊಂದಿವೆ. ಎರಡು ಪ್ರಜಾಪ್ರಭುತ್ವ ದೇಶಗಳ ಮಧ್ಯದ ಅತ್ಯಂತ ಉತ್ತಮ ಸಂಬಂಧ ಎಂದು ಇದನ್ನು ಬಣ್ಣಿಸಲಾಗಿದೆ. ಎರಡೂ ದೇಶಗಳು 56 ರಾಷ್ಟ್ರಗಳ ಕಾಮನ್ವೆಲ್ತ್ ರಾಷ್ಟ್ರಗಳ ಗುಂಪಿನ ಹಿರಿಯ ಸದಸ್ಯರಾಗಿವೆ. ಬ್ರಿಟಿಷ್ ಕಾಲದಿಂದಲೂ ದೇಶಗಳ ಮಧ್ಯೆ ಉತ್ತಮ ಬಾಂಧವ್ಯವಿದೆ. ಕಾಮನ್ವೆಲ್ತ್ ರಾಷ್ಟ್ರಗಳು ತಮ್ಮ ಸಾರ್ವಭೌಮತ್ವ ಮತ್ತು ಸರ್ಕಾರಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿಯಂತಹ ವಿವಿಧ ವಿಷಯಗಳಲ್ಲಿ ಸಹಕರಿಸುತ್ತವೆ.
ಆದರೆ ಕೆನಡಾದಲ್ಲಿ ವಾಸಿಸುವ ಸಿಖ್ಖರನ್ನು ಬೆದರಿಸಲು ಮತ್ತು ಅವರ ಧ್ವನಿಗಳನ್ನು ಹತ್ತಿಕ್ಕಲು ಭಾರತವು ಗೂಢಚಾರರ ಜಾಲವನ್ನು ಬಳಸುತ್ತಿದೆ ಎಂದು ಅಕ್ಟೋಬರ್ 14ರಂದು ಕೆನಡಾ ಆರೋಪಿಸಿದ ನಂತರ ಕೆನಡಾ ಮತ್ತು ಭಾರತದ ನಡುವಿನ ಸಂಬಂಧವು ಹೊಸ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದೊಂದು ಗಂಭೀರ ಆರೋಪವಾಗಿದ್ದು, ಕೆನಡಾದಲ್ಲಿನ ಭಾರತದ ರಾಯಭಾರಿ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಸೇರಿದಂತೆ ಆರು ಭಾರತೀಯ ರಾಜತಾಂತ್ರಿಕರನ್ನು ಹೊರಹಾಕುವುದಾಗಿ ಕೆನಡಾ ಘೋಷಿಸಿತು.
ಇಂಥ ರಾಜತಾಂತ್ರಿಕ ಜಗಳಗಳಲ್ಲಿ ಸಾಮಾನ್ಯವಾಗಿ ನಡೆಯುವಂತೆ ಭಾರತ ಕೂಡ ತಕ್ಷಣವೇ ನವದೆಹಲಿಯ ಕೆನಡಾ ರಾಯಭಾರ ಕಚೇರಿಯಿಂದ ಆರು ಹಿರಿಯ ಕೆನಡಾದ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರಹಾಕುವ ಮೂಲಕ ಪ್ರತಿಕ್ರಿಯಿಸಿತು.
ಅಷ್ಟಕ್ಕೂ ಆಗಿದ್ದಾದರೂ ಏನು?: ಕೆನಡಾದ ಪೌರತ್ವ ಹೊಂದಿರುವ ಮತ್ತು ಸಿಖ್ಖರಿಗೆ ಸ್ವತಂತ್ರ ತಾಯ್ನಾಡಿನ ರಚನೆಯನ್ನು ಪ್ರತಿಪಾದಿಸುವ ಖಲಿಸ್ತಾನ್ ಪರ ಗುಂಪಿನ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ (45) ಅವರನ್ನು ಜೂನ್ 2023ರಲ್ಲಿ ಪಶ್ಚಿಮ ಕೆನಡಾದ ವ್ಯಾಂಕೋವರ್ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.
ಇದಾಗಿ ಮೂರು ತಿಂಗಳ ನಂತರ, ಸೆಪ್ಟೆಂಬರ್ 18ರಂದು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಯಾರೂ ಊಹಿಸಲಾಗದಂಥ ಮತ್ತು ಸಂಪೂರ್ಣ ಆಧಾರರಹಿತವಾಗಿ ಆರೋಪವೊಂದನ್ನು ಮಾಡಿದರು. ಒಟ್ಟಾವಾದಲ್ಲಿ ಕೆನಡಾದ ಸಂಸತ್ತನ್ನುದ್ದೇಶಿಸಿ ಸಾರ್ವಜನಿಕವಾಗಿ ಮಾತನಾಡಿದ ಅವರು, ಭಾರತೀಯ ಸರ್ಕಾರಿ ಏಜೆಂಟರು ನಿಜ್ಜರ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂಬ ವಿಶ್ವಾಸಾರ್ಹ ಆರೋಪಗಳ ಬಗ್ಗೆ ತಮ್ಮ ಸರ್ಕಾರ ಸಕ್ರಿಯವಾಗಿ ಪರಿಶೀಲಿಸುತ್ತಿದೆ ಎಂದು ಹೇಳಿದರು. ಆದರೆ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಈ ಆರೋಪವನ್ನು ಬಲವಾಗಿ ತಳ್ಳಿ ಹಾಕಿದೆ.
ಈ ವಾರ ನಡೆದದ್ದು ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳ ಮುಂದುವರಿಕೆಯಾಗಿದೆ. ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಭಾರತ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿದೆ ಎಂದು ಟ್ರುಡೊ ಒತ್ತಿ ಹೇಳಿದರು.
"ಕೆನಡಾದ ನೆಲದಲ್ಲಿ ಕೆನಡಾದ ನಾಗರಿಕರನ್ನು ಬೆದರಿಸುವ ಮತ್ತು ಕೊಲ್ಲುವ ವಿದೇಶಿ ಸರ್ಕಾರದ ಪ್ರಯತ್ನಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ. ಖಲಿಸ್ತಾನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಂತೆ ಸಿಖ್ಖರನ್ನು ಬೆದರಿಸಲು, ಕಿರುಕುಳ ನೀಡಲು ಮತ್ತು ದಾಳಿ ಮಾಡಲು ಭಾರತೀಯ ರಾಜತಾಂತ್ರಿಕರು ಸಂಘಟಿತ ಅಪರಾಧ ಜಾಲವನ್ನು ನಡೆಸುತ್ತಿದ್ದಾರೆ ಎಂದು ಯುಎಸ್ ಎಫ್ಬಿಐ ಬೆಂಬಲಿತ ಪುರಾವೆಗಳನ್ನು ನಮ್ಮ ಸರ್ಕಾರ ಸಂಗ್ರಹಿಸಿದೆ" ಎಂದು ಅವರು ಹೇಳಿದರು.
ಟ್ರುಡೊ ಭಾರತದ ಇತಿಹಾಸವನ್ನು ಒಪ್ಪುವುದಿಲ್ಲ ಎಂಬ ವಿಷಯವನ್ನು ಈ ಸಂದರ್ಭದಲ್ಲಿ ನೋಡಬೇಕಾಗುತ್ತದೆ. 15ನೇ ಶತಮಾನದಲ್ಲಿ ಪಂಜಾಬ್ನಲ್ಲಿ ಗುರುನಾನಕ್ ದೇವ್ ಜಿ ಅವರು ಸಿಖ್ ಧರ್ಮವನ್ನು ಸ್ಥಾಪಿಸಿದಾಗಿನಿಂದ ಸಿಖ್ ಜನರು ಭಾರತದ ಜನಸಂಖ್ಯೆಯ ಗೌರವಾನ್ವಿತ ಮತ್ತು ಪ್ರಮುಖ ಸಮುದಾಯವಾಗಿದ್ದಾರೆ. ಭಾರತದಲ್ಲಿ ಸಿಖ್ಖರಿಗೆ ಯಾವುದೇ ತಾರತಮ್ಯ ಮಾಡಲಾಗುವುದಿಲ್ಲ.
ಸುಮಾರು 80 ವರ್ಷಗಳ ಹಿಂದೆ, ಭಾರತವು ಅಂತಿಮವಾಗಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದುಕೊಳ್ಳುವುದು ಖಚಿತವಾದಾಗ, ಬಹುಶಃ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಲಿದೆ ಎಂದು ತಿಳಿದ ನಂತರ ಕೆಲ ಅತೃಪ್ತ ಸಿಖ್ಖರು ಪ್ರತ್ಯೇಕತಾವಾದಿ ಅಭಿಯಾನವನ್ನು ಪ್ರಾರಂಭಿಸಿದರು. ಸಿಖ್ ಅಲ್ಪಸಂಖ್ಯಾತರು ಹಿಂದೂ ಅಥವಾ ಮುಸ್ಲಿಮ್ ಅಲ್ಲ. ಹೀಗಾಗಿ ಸಿಖ್ಖರಿಗೆ ಮಾತ್ರ ಪ್ರತ್ಯೇಕ ರಾಷ್ಟ್ರ ನೀಡಬೇಕು ಮತ್ತು ಅದನ್ನು ಖಲಿಸ್ತಾನ್ ಎಂದು ಹೆಸರಿಸಬೇಕೆಂದು ಬೇಡಿಕೆ ಇಡಲಾಯಿತು.
1947ರಲ್ಲಿ, ಬ್ರಿಟಿಷರು ಕುಖ್ಯಾತ ರಾಡ್ ಕ್ಲಿಫ್ ರೇಖೆಯನ್ನು (ಬ್ರಿಟಿಷ್ ವಕೀಲ ಸಿರಿಲ್ ರಾಡ್ ಕ್ಲಿಫ್ ಅವರ ಹೆಸರನ್ನು ಇಡಲಾಗಿದೆ) ಹಿಂದಿನ ಪಂಜಾಬ್ ಪ್ರದೇಶವನ್ನು ಪೂರ್ವ ಪಂಜಾಬ್ ಎಂದು ವಿಭಜಿಸಲು ನೋಡಿದಾಗ ಆತಂಕ ಉಲ್ಬಣಗೊಂಡಿತ್ತು. ಪೂರ್ವ ಪಂಜಾಬ್ನ ಜನಸಂಖ್ಯೆಯ ಬಹುಪಾಲು ಸಿಖ್ ಮತ್ತು ಹಿಂದೂಗಳಾಗಿದ್ದು, ಇದು ಭಾರತದ ಭಾಗವಾಯಿತು. ಮುಸ್ಲಿಂ ಬಾಹುಳ್ಯದ ಪಶ್ಚಿಮ ಪಂಜಾಬ್ ಪಾಕಿಸ್ತಾನದ ಭಾಗವಾಯಿತು.
ಖಲಿಸ್ತಾನ್ ಚಳುವಳಿಯು ಈ ವಿಭಜನೆಗಳನ್ನು ಬಳಸಿಕೊಂಡಿತು ಮತ್ತು 1980ರ ದಶಕದಲ್ಲಿ ಈ ವಿಷಯವು ಉಗ್ರಗಾಮಿ ತಿರುವು ಪಡೆಯಿತು. ಸಿಖ್ ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಸಿಖ್ಖರ ಪವಿತ್ರ ಧಾರ್ಮಿಕ ಸ್ಥಳವಾದ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಆಶ್ರಯ ಪಡೆದರು. ಜೂನ್ 1984ರಲ್ಲಿ, ಭಾರತದ ಪ್ರಧಾನಿ ಇಂದಿರಾ ಗಾಂಧಿ ಗೋಲ್ಡನ್ ಟೆಂಪಲ್‌ನಿಂದ ಉಗ್ರರನ್ನು ಹೊರಹಾಕಲು 'ಆಪರೇಷನ್ ಬ್ಲೂ ಸ್ಟಾರ್' ಎಂಬ ಮಿಲಿಟರಿ ಕ್ರಮಕ್ಕೆ ಆದೇಶಿಸಿದರು. ಈ ಕಾರ್ಯಾಚರಣೆಯಲ್ಲಿ ಸ್ವರ್ಣ ಮಂದಿರಕ್ಕೆ ಭಾರಿ ಹಾನಿಯಾಯಿತು. ಅಲ್ಲದೆ ಉಗ್ರಗಾಮಿಗಳು ಮತ್ತು ನಾಗರಿಕರು ಸೇರಿದಂತೆ ಹಲವಾರು ಜನ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ, ಇಂದಿರಾ ಗಾಂಧಿಯವರ ಸಿಖ್ ಅಂಗರಕ್ಷಕರು ಅಕ್ಟೋಬರ್ 31, 1984ರಂದು ಅವರನ್ನು ಹತ್ಯೆ ಮಾಡಿದರು. ಇದು ದೆಹಲಿಯಲ್ಲಿ ಸಿಖ್ ವಿರೋಧಿ ದಂಗೆಗೆ ಕಾರಣವಾಯಿತು. ಇವು ಭಾರತೀಯ ಇತಿಹಾಸದ ಕೆಲ ಗಂಭೀರ ಘಟ್ಟಗಳಾಗಿವೆ.
ಉಳಿದ ಉಗ್ರರ ವಿರುದ್ಧ ಆಕ್ರಮಣಕಾರಿ ಕ್ರಮ ಕೈಗೊಳ್ಳಲು ಭಾರತೀಯ ಭದ್ರತಾ ಪಡೆಗಳಿಗೆ ಹತ್ತು ವರ್ಷಗಳು ಬೇಕಾಯಿತು. ಆದರೆ ಈಗಲೂ ಖಲಿಸ್ತಾನ್ ಪರವಾಗಿದ್ದ ಕೆಲ ಸಣ್ಣ ಪ್ರಮಾಣದ ಸಿಖ್ಖರು ಭಾರತವನ್ನು ತೊರೆದು ವಿದೇಶಗಳಿಗೆ ತೆರಳಿದರು. ಕೆನಡಾವು ಭಾರತ ಮತ್ತು ಪಾಕಿಸ್ತಾನದ ಹೊರಗೆ ಅತಿದೊಡ್ಡ ಸಿಖ್ ಜನಸಂಖ್ಯೆಗೆ ನೆಲೆಯಾಗಿದೆ. ಕೆನಡಾ ಜನಸಂಖ್ಯೆಯಲ್ಲಿ ಶೇ 2ರಷ್ಟು (770,00 ಕುಟುಂಬಗಳು) ಸಿಖ್ಖರಿದ್ದಾರೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಈಗ ಟ್ರುಡೊ ಮಾಡಿದ್ದು ಅವಿವೇಕದ ಪರಮಾವಧಿಯಾಗಿದೆ ಎಂಬುದು ಗೊತ್ತಾಗುತ್ತದೆ. 1990ರ ದಶಕದಿಂದ ಕುದಿಯುತ್ತಿರುವ ಬೆಂಕಿಯ ಮೇಲೆ ತೈಲ ಸುರಿಯುವ ಮೂಲಕ ಅವರು ಸೂಕ್ಷ್ಮ ಭಾರತೀಯ ಆಂತರಿಕ ವಿಷಯದ ಜ್ವಾಲೆಯನ್ನು ಪ್ರಚೋದಿಸಿದಂತಾಗಿದೆ. ಟ್ರುಡೊ ಅವರು ತಮ್ಮ ದೇಶದಲ್ಲಿ ಭಾರತ ವಿರೋಧಿ ಪಿತೂರಿಗಳು ಮತ್ತು ಹೇಳಿಕೆಗಳನ್ನು ನಿರ್ಬಂಧಿಸುವುದನ್ನು ಬಿಟ್ಟು ಅದಕ್ಕೆ ವ್ಯತಿರಿಕ್ತವಾದುದನ್ನು ಮಾಡುತ್ತಿದ್ದಾರೆ.