ನವದೆಹಲಿ: ಬ್ರಿಟನ್ ಸಂಸತ್ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ಪ್ರಮುಖ ಪ್ರತಿಪಕ್ಷವಾದ ಲೇಬರ್ ಪಕ್ಷ ಪ್ರಚಂಡ ಗೆಲುವು ಸಾಧಿಸಿದೆ. ಈ ಮೂಲಕ ಹೆಚ್ಚೂ ಕಡಿಮೆ ಒಂದೂವರೆ ದಶಕದ ನಂತರ ಕನ್ಸರ್ವೇಟಿವ್ ಪಕ್ಷದ ಆಡಳಿತ ಕೊನೆಗೊಂಡಿತು. ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ನೂತನ ಪ್ರಧಾನಿಯಾಗಲಿದ್ದಾರೆ.
ಯುಕೆ ಸಂಸತ್ತಿನ 650 ಸ್ಥಾನಗಳಿಗೆ ಜುಲೈ 4ರಂದು ಮತದಾನ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಾಧನೆ 121 ಸ್ಥಾನಗಳಿಗೆ ಸೀಮಿತವಾಗಿದೆ. 14 ವರ್ಷಗಳ ಆಡಳಿತದಲ್ಲಿ ಐವರು ಪ್ರಧಾನಿಗಳನ್ನು ಕನ್ಸರ್ವೇಟಿವ್ ನೀಡಿತ್ತು. 20 ತಿಂಗಳ ಹಿಂದಷ್ಟೇ ಭಾರತ ಮೂಲದ ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯನಾಗಿರುವ ಇವರು ಯುಕೆಯ ಮೊದಲ ಹಿಂದೂ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿದ್ದರು.
ಮತದಾನಕ್ಕೂ ಮುನ್ನ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಈ ಬಾರಿ ಹಿನ್ನಡೆ ಅನುಭವಿಸಲಿದೆ ಎಂದು ಚುನಾಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷದ ಬಗ್ಗೆ ಜನತೆ ಒಲವು ಹೊಂದಿದ್ದಾರೆ ಎಂದೂ ಸಮೀಕ್ಷೆಗಳು ಹೇಳಿದ್ದವು. ಅದರಂತೆಯೇ ಫಲಿತಾಂಶ ಬಂದಿದೆ. ಲೇಬರ್ ಪಕ್ಷ 412 ಸ್ಥಾನಗಳಲ್ಲಿ ಗೆದ್ದು ಭಾರೀ ಬಹುಮತ ಗಳಿಸಿದೆ.
ಭಾರತದ ಮೇಲೇನು ಪರಿಣಾಮ?: ನೂತನ ಪ್ರಧಾನಿಯಾಗಲಿರುವ ಕೀರ್ ಸ್ಟಾರ್ಮರ್ ಇದುವರೆಗೆ ಭಾರತದೊಂದಿಗೆ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ. ದ್ವಿಪಕ್ಷೀಯವಾಗಿ ವಿವಿಧ ನೀತಿಗಳಲ್ಲಿ ಕೆಲಸ ಮಾಡಿದ್ದಾರೆ. ಆದಾಗ್ಯೂ, ಲೇಬರ್ ಪಕ್ಷ ಅಧಿಕಾರಕ್ಕೆ ಮರಳುವುದರೊಂದಿಗೆ ಬ್ರಿಟನ್ ರಾಜಕೀಯದಲ್ಲಿನ ಬದಲಾವಣೆ ಭಾರತಕ್ಕೆ ಯಾವ ಸಂದೇಶ ನೀಡುತ್ತದೆ?, ಪರಿಣಾಮ ಬೀರುತ್ತದೆ ಎಂಬುದು ಮುಖ್ಯ.
''ಲೇಬರ್ ಪಕ್ಷದ ಪ್ರಧಾನಿ ಮತ್ತು ಆಡಳಿತವು ಪ್ರಪಂಚದಲ್ಲಿನ ಹೊಸ ಬದಲಾವಣೆಗಳು, ವಿಶ್ವ ಆರ್ಥಿಕ ಶಕ್ತಿಯಾಗಿ ಭಾರತದ ಬೆಳೆಯುತ್ತಿರುವ ಶಕ್ತಿ ಮತ್ತು ಇಂಡೋ- ಪೆಸಿಫಿಕ್ನಲ್ಲಿ ಭಾರತದ ಅದ್ಭುತ ಬೆಳವಣಿಗೆ ಅರ್ಥಮಾಡಿಕೊಳ್ಳುತ್ತದೆ. ಆದಾಗ್ಯೂ, ಯುಕೆಯಲ್ಲಿನ ಹೊಸ ಸರ್ಕಾರದಿಂದ ಭಾರತದ ನಿರೀಕ್ಷೆಯು ತುಂಬಾ ಹೆಚ್ಚಿರಲ್ಲ. ಆದರೆ, ಅದು ತಟಸ್ಥವಾಗಲಿದೆ'' ಎಂದು ಅಂತಾರಾಷ್ಟ್ರೀಯ ಸಂಪ್ರದಾಯವಾದಿ ರಾಜಕೀಯ ಆರ್ಥಿಕ ಮತ್ತು ವಿದೇಶಾಂಗ ನೀತಿ ತಜ್ಞ ಡಾ.ಸುವ್ರೋಕಮಲ್ ದತ್ತಾ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
''ಈ ಹಿಂದಿನ ಲೇಬರ್ ಪಕ್ಷದ ಸರ್ಕಾರಗಳು ಪಾಕಿಸ್ತಾನ ಮತ್ತು ಚೀನಾಕ್ಕೆ ಹತ್ತಿರವಾಗಿದ್ದವು. ಈಗ ಭೌಗೋಳಿಕ ಕಾರ್ಯತಂತ್ರದ ಸಂಬಂಧಗಳು ಮತ್ತು ಅಂತಾರಾಷ್ಟ್ರೀಯ ರಾಜಕೀಯವು ತೀವ್ರವಾಗಿ ಬದಲಾಗಿದ್ದರೂ ಆ ಚಿಂತನೆಯಲ್ಲಿ ಹೆಚ್ಚಿನ ಬದಲಾವಣೆ ಕಾಣಲು ಸಾಧ್ಯವಿಲ್ಲ. ಆದರೆ, ಪಾಕಿಸ್ತಾನವು ಮುಳುಗುತ್ತಿರುವ ವಿಫಲ ರಾಷ್ಟ್ರವಾಗಿದೆ. ಯುಕೆ ಜೊತೆಗಿನ ಚೀನಾದ ಸಂಬಂಧವು ಅಂದಿನಿಂದಲೂ ಒಂದು ಅಸ್ತ್ರವಾಗಿದೆ ಅಷ್ಟೇ'' ಎಂದು ಹೇಳಿದರು.
''ಆದರೂ, ಯುಕೆಯ ಹೊಸ ಆಡಳಿತ ಹೊಸ ಪ್ರಪಂಚದಲ್ಲಿನ ಬಾಹ್ಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ಆಶಯವಿದೆ. ಹೊಸ ಸರ್ಕಾರದ ಅಡಿಯಲ್ಲಿ ಭಾರತ ಮತ್ತು ಬ್ರಿಟನ್ ದೇಶಗಳ ನಡುವಿನ ಸಂಬಂಧ ದೃಢ, ದೂರದೃಷ್ಟಿಯ ಮತ್ತು ಒಗ್ಗೂಡಿಸುವಂಥದ್ದಾಗಲಿದೆ. ಹಿಂದಿನ ತಪ್ಪುಗಳು ಪುನರಾವರ್ತನೆಯಾಗುವುದಿಲ್ಲ ಎಂದು ನಾನು ಬಲವಾಗಿ ಭಾವಿಸುತ್ತೇವೆ'' ಎಂದು ದತ್ತಾ ವಿಶ್ಲೇಷಿಸಿದರು.
ಯುಕೆ-ಭಾರತ ಸಂಬಂಧ ಬಲಪಡಿಸುವ ಬದ್ಧತೆ:ಮತ್ತೊಂದೆಡೆ, ಕೀರ್ ಸ್ಟಾರ್ಮರ್ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೇ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆ ಸ್ಥಾಪಿಸುವ ಮತ್ತು ಯುಕೆ-ಭಾರತ ಸಂಬಂಧಗಳನ್ನು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಕಾಶ್ಮೀರ ಸಮಸ್ಯೆಯ ಬಗ್ಗೆ ತನ್ನ ಪಕ್ಷದ ನಿಲುವು ತಿಳಿಸುವ ಮತ್ತು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೆಲಸ ಮಾಡುವ ಗುರಿ ಹೊಂದಲಾಗಿದೆ. ಜೊತೆಗೆ ಶಿಕ್ಷಣ, ಹವಾಮಾನ ಬದಲಾವಣೆ, ಭದ್ರತೆ ಮತ್ತು ತಂತ್ರಜ್ಞಾನದಲ್ಲಿ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಯೋಜನೆಗಳನ್ನು ರೂಪಿಸಲಾಗುತ್ತದೆ. ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂಬುವುದನ್ನೂ ತಮ್ಮ ಪ್ರಣಾಳಿಕೆಯುಲ್ಲಿ ಉಲ್ಲೇಖಿಸಿರುವುದು ಗಮನಾರ್ಹ.
ಕೀರ್ ಸ್ಟಾರ್ಮರ್ ಯಾರು?:ಬ್ರಿಟನ್ ಪ್ರಮುಖ ರಾಜಕಾರಣಿಯಲ್ಲಿ ಒಬ್ಬರಾದ ಕೀರ್ ಸ್ಟಾರ್ಮರ್ ಏಪ್ರಿಲ್ 2020ರಿಂದ ಲೇಬರ್ ಪಕ್ಷದ ನಾಯಕ ಮತ್ತು ವಿಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ವಕೀಲರಾಗಿದ್ದರು. 2008ರಿಂದ 2013ರವರೆಗೆ ಪಬ್ಲಿಕ್ ಪ್ರಾಸಿಕ್ಯೂಷನ್ಸ್ (ಡಿಪಿಪಿ) ಮತ್ತು ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಎಸ್) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಕೀರ್ ಸ್ಟಾರ್ಮರ್ 2015ರಿಂದ ಹೋಲ್ಬೋರ್ನ್ ಮತ್ತು ಸೇಂಟ್ ಪ್ಯಾನ್‌ಕ್ರಾಸ್‌ನ ಸಂಸತ್ತಿನ ಸದಸ್ಯರಾಗಿದ್ದಾರೆ. ಲೇಬರ್ ಪಕ್ಷದ ನಾಯಕರಾದ ಬಳಿಕ ಸ್ಟಾರ್ಮರ್, 2019ರ ಸಾರ್ವತ್ರಿಕ ಚುನಾವಣೆಯ ಸೋಲಿನ ನಂತರ ಪಕ್ಷವನ್ನು ಮರು ಸಂಘಟಿಸುವತ್ತ ಗಮನಹರಿಸಿದ್ದರು. ಕನ್ಸರ್ವೇಟಿವ್ ಸರ್ಕಾರಕ್ಕೆ ಲೇಬರ್ ಪಕ್ಷವು ನಂಬಲರ್ಹವಾದ ಪರ್ಯಾಯ ಪಕ್ಷ ಎಂದು ಹೇಳಿಕೊಂಡು ಜನರನ್ನು ಸೆಳೆದಿದ್ದಾರೆ.
ಭಾರತದ ಪರ ಇವರ ಒಲವು ಹೇಗಿದೆ?: ಯುಕೆಯಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಂದಿಗೆ ಸಂಬಂಧವನ್ನು ಸುಧಾರಿಸುವ ಪ್ರಾಮುಖ್ಯತೆಯನ್ನೂ ತಮ್ಮ ಪ್ರಣಾಳಿಕೆಯಲ್ಲಿ ಕೀರ್ ಸ್ಟಾರ್ಮರ್ ಎತ್ತಿ ಹೇಳಿದ್ದಾರೆ. ಅಲ್ಲದೇ, ತಮ್ಮ ಪ್ರಚಾರ ಕಾರ್ಯವೊಂದರಲ್ಲಿ 'ಹಿಂದೂಫೋಬಿಯಾ' ಕುರಿತು ಖಂಡಿಸಿದ್ದರು. ಹೋಳಿ ಮತ್ತು ದೀಪಾವಳಿಯಂತಹ ಭಾರತೀಯ ಹಬ್ಬಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಮಹತ್ವ ಅರಿತುಕೊಳ್ಳಬೇಕೆಂದು ಹೇಳಿದ್ದರು. ಇಷ್ಟೇ ಅಲ್ಲ, ಈ ಆಚರಣೆಗಳು ಬ್ರಿಟಿಷ್ ಮತ್ತು ಭಾರತೀಯ ಜನರ ನಡುವಿನ ಸಂಬಂಧ ಬಲಪಡಿಸುವಲ್ಲಿ ರಚನಾತ್ಮಕ ಪಾತ್ರ ವಹಿಸುತ್ತವೆ. ಪರಸ್ಪರ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಕೊಡುಗೆ ನೀಡುತ್ತವೆ ಎಂದು ಸ್ಟಾರ್ಮರ್ ಅಭಿಮತವಾಗಿದೆ.
ಇದನ್ನೂ ಓದಿ:ಯುಕೆ ಚುನಾವಣೆಯಲ್ಲಿ ರಿಷಿ ಸುನಕ್ಗೆ ಸೋಲು; ಲೇಬರ್ ಪಾರ್ಟಿಗೆ ಪ್ರಚಂಡ ಗೆಲುವು