ವಾಷಿಂಗ್ಟನ್: ರಷ್ಯಾದ ವೈಮಾನಿಕ ದಾಳಿಯನ್ನು ತಡೆಗಟ್ಟಲು ಸಾಧ್ಯವಾಗುವ ನಿಟ್ಟಿನಲ್ಲಿ ಉಕ್ರೇನ್‌ಗೆ ಮತ್ತೊಂದು ಪೇಟ್ರಿಯಾಟ್ ವಾಯು ರಕ್ಷಣಾ ಸಾಧನ ಪೂರೈಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಚಿಂತನೆ ನಡೆಸಿದ್ದಾರೆ ಎಂದು ಯುಎಸ್ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವಾರ ನಡೆದ ಹಲವಾರು ಉನ್ನತ ಮಟ್ಟದ ಸಭೆಗಳ ನಂತರ ಬೈಡನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ. ಆದರೆ ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂವಹನ ನಿರ್ದೇಶಕ ಜಾನ್ ಕಿರ್ಬಿ ಈ ವರದಿಯನ್ನು ದೃಢಪಡಿಸಲು ನಿರಾಕರಿಸಿದರು.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಉಕ್ರೇನ್‌ಗೆ ನೀಡಲು ಉದ್ದೇಶಿಸಲಾದ ಈ ಪೇಟ್ರಿಯಾಟ್ ವಾಯು ರಕ್ಷಣಾ ಸಾಧನವು ಸದ್ಯ ಪೋಲೆಂಡ್ನಲ್ಲಿದೆ ಮತ್ತು ಕೆಲವೇ ದಿನಗಳಲ್ಲಿ ಉಕ್ರೇನ್ನ ಯುದ್ಧಭೂಮಿಯಲ್ಲಿ ನಿಯೋಜನೆಯಾಗಬಹುದು. ಒಂದೊಮ್ಮೆ ಇದು ದೃಢಪಟ್ಟರೆ, ಇದು ವಾಷಿಂಗ್ಟನ್ ಕೀವ್‌ಗೆ ಒದಗಿಸಿದ ಎರಡನೇ ಯುಎಸ್ ನಿರ್ಮಿತ ಪೇಟ್ರಿಯಾಟ್ ಸಾಧನವಾಗಲಿದೆ.
ಸುಮಾರು 18 ತಿಂಗಳ ಹಿಂದೆ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿತ್ತು. ಆಗ ಯುಎಸ್ಗೆ ಆಗಮಿಸಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಯುಎಸ್ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ಯುಎಸ್ ಉಕ್ರೇನ್‌ಗೆ ಮೊದಲ ಪೇಟ್ರಿಯಾಟ್ ವಾಯು ರಕ್ಷಣಾ ಸಾಧನವನ್ನು ನೀಡಿತ್ತು. ಯುಎಸ್ ಉಕ್ರೇನ್ ಗೆ ಪೇಟ್ರಿಯಾಟ್ ಕ್ಷಿಪಣಿಗಳನ್ನು ಕೂಡ ಪೂರೈಸುತ್ತಿದೆ.