ವಾಷಿಂಗ್ಟನ್: ನೈಜರ್ ದೇಶದಿಂದ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ನೈಜರ್ನಲ್ಲಿ ಸದ್ಯ ಮಿಲಿಟಿರಿ ಜುಂಟಾ ಆಡಳಿತ ನಡೆಸುತ್ತಿದ್ದು, ತನ್ನ ಪಡೆಗಳನ್ನು ಹಿಂಪಡೆಯಲು ಅಮೆರಿಕ ಮಿಲಿಟರಿ ಜುಂಟಾದೊಂದಿಗೆ ಮಾತುಕತೆ ನಡೆಸುತ್ತಿದೆ. ಕಳೆದ ವರ್ಷದ ಅಂಕಿ - ಅಂಶಗಳ ಪ್ರಕಾರ, 1,000 ಕ್ಕೂ ಹೆಚ್ಚು ಅಮೆರಿಕ ಸೈನಿಕರು ನೈಜರ್ನಲ್ಲಿ ಬೀಡುಬಿಟ್ಟಿದ್ದಾರೆ.
ಸೇನಾ ಪಡೆಗಳ ಸಂಭಾವ್ಯ ವಾಪಸಾತಿ ಕುರಿತು ಮಾತುಕತೆ ಈ ವಾರ ಮತ್ತು ಮುಂದಿನ ವಾರ ರಾಜಧಾನಿ ನಿಯಾಮಿಯಲ್ಲಿ ಪ್ರಾರಂಭವಾಗಲಿದೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಘೋಷಿಸಿದೆ. ಜುಲೈ 2023 ರಿಂದ ಮಿಲಿಟರಿ ಜುಂಟಾದೊಂದಿಗೆ ನಡೆಯುತ್ತಿರುವ ಚರ್ಚೆಗಳು ಎರಡೂ ಕಡೆಗಳ ಅಗತ್ಯತೆಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡುವಂಥ ನೀತಿಯನ್ನು ರೂಪಿಸಲು ವಿಫಲವಾಗಿವೆ ಎಂದು ವಿದೇಶಾಂಗ ಇಲಾಖೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ನೈಗರ್ ಇದು ಸಹೇಲ್ ಪ್ರದೇಶದಲ್ಲಿ ಯುಎಸ್ ಮಿಲಿಟರಿಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಕೇಂದ್ರವಾಗಿತ್ತು. ಆದರೆ, ಜುಲೈ 2023 ರಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಮಿಲಿಟರಿ ಜುಂಟಾ ಅಮೆರಿಕದ ಪಡೆಗಳು ಹೊರ ಹೋಗುವಂತೆ ಒತ್ತಾಯಿಸುತ್ತಿದೆ.
ಅಲ್ಲದೆ ಮಾರ್ಚ್ನಲ್ಲಿ ಅಮೆರಿಕದೊಂದಿಗಿನ ಮಿಲಿಟರಿ ಸಹಕಾರ ಒಪ್ಪಂದವನ್ನು ಕೂಡ ಜುಂಟಾ ರದ್ದುಗೊಳಿಸಿದೆ. ಅಮೆರಿಕ ಪಡೆಗಳ ಅನುಚಿತ ವರ್ತನೆ ಮತ್ತು ಪ್ರತೀಕಾರದ ಬೆದರಿಕೆಯ ಕಾರಣದಿಂದ ಮಿಲಿಟರಿ ಒಪ್ಪಂದ ರದ್ದುಗೊಳಿಸಲಾಯಿತು ಎಂದು ಮಿಲಿಟರಿ ಜುಂಟಾ ವಕ್ತಾರ ಅಮದೌ ಅಬದ್ರಮನೆ ಹೇಳಿದರು.