ವಾಶಿಂಗ್ಟನ್: ಪಾಕಿಸ್ತಾನದ ಚುನಾವಣಾ ಫಲಿತಾಂಶಗಳ ಬಗ್ಗೆ ತನಿಖೆ ನಡೆಯುವವರೆಗೂ ಫಲಿತಾಂಶಗಳನ್ನು ಮಾನ್ಯ ಮಾಡದಂತೆ ಅಮೆರಿಕದ ಹಲವು ಸಂಸದರು ಬೈಡನ್ ಆಡಳಿತಕ್ಕೆ ಒತ್ತಾಯಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
"ಹಸ್ತಕ್ಷೇಪ ಅಥವಾ ಮೋಸದ ಆರೋಪಗಳನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ವಕ್ತಾರರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆದಿರುವ ಆರೋಪಗಳ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
"ಈ ಚುನಾವಣೆಗಳ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟನೆ ಮತ್ತು ಶಾಂತಿಯುತ ಸಭೆಗಳ ಮೇಲೆ ಅನಗತ್ಯ ನಿರ್ಬಂಧಗಳನ್ನು ವಿಧಿಸಲಾಗಿತ್ತು ಎಂಬ ಆರೋಪಗಳ ತನಿಖೆಯಲ್ಲಿ ವಿಶ್ವಾಸಾರ್ಹ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಚುನಾವಣಾ ವೀಕ್ಷಕರೊಂದಿಗೆ ನಾವು ಸಹ ಕೈಜೋಡಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನ ಚುನಾವಣೆಗಳ ಬಗ್ಗೆ ಮಾತನಾಡಿದ ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ಹಿರಿಯ ಸದಸ್ಯ, ಕಾಂಗ್ರೆಸ್ ಸದಸ್ಯ ಬ್ರಾಡ್ ಶೆರ್ಮನ್, "ಪಾಕಿಸ್ತಾನದ ಮಾಧ್ಯಮಗಳು ಮತ ಎಣಿಕೆ ವಿವರಗಳನ್ನು ವರದಿ ಮಾಡಲು ಮುಕ್ತವಾಗಿರಬೇಕು ಮತ್ತು ಫಲಿತಾಂಶಗಳನ್ನು ಘೋಷಿಸುವಲ್ಲಿ ಅನಗತ್ಯ ವಿಳಂಬವಾಗಬಾರದು" ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯೆ ರಶೀದಾ ತಲೈಬ್ ಮಾತನಾಡಿ, "ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವು ಗಂಭೀರ ಅಪಾಯದಲ್ಲಿರುವುದರಿಂದ ನಾವು ಆ ಜನರ ಬೆಂಬಲಕ್ಕೆ ನಿಲ್ಲಬೇಕಿದೆ. ಅಲ್ಲಿನ ಜನತೆ ಯಾವುದೇ ಮೋಸ, ಹಸ್ತಕ್ಷೇಪವಿಲ್ಲದೆ ತಮ್ಮ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಬೇಕು ಹಾಗೂ ಇದಕ್ಕೆ ಆಸ್ಪದ ನೀಡದ ಯಾರಿಗೂ ಅಮೆರಿಕದ ಹಣಕಾಸು ನೆರವು ಸಿಗದಂತೆ ನೋಡಿಕೊಳ್ಳಬೇಕು" ಎಂದು ನುಡಿದರು.
ಮತ್ತೋರ್ವ ಕಾಂಗ್ರೆಸ್ ಸದಸ್ಯೆ ದಿನಾ ಟೈಟಸ್ ಮಾತನಾಡಿ, "ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧವನ್ನು ಖಂಡಿಸುತ್ತೇನೆ" ಎಂದರು.
ಮತ ಎಣಿಕೆ ಆರಂಭವಾದ ಮೂರು ದಿನಗಳ ನಂತರವೂ ಪಾಕಿಸ್ತಾನದ ಚುನಾವಣಾ ಆಯೋಗ ಅಂತಿಮ ಫಲಿತಾಂಶ ನೀಡಲು ವಿಫಲವಾಗಿದೆ. ಏತನ್ಮಧ್ಯೆ ತಮ್ಮ ಪಕ್ಷಗಳು ಗೆಲುವು ಸಾಧಿಸಿರುವುದಾಗಿ ಮಾಜಿ ಪ್ರಧಾನಿಗಳಾದ ಇಮ್ರಾನ್ ಖಾನ್ ಮತ್ತು ನವಾಜ್ ಷರೀಫ್ ಇಬ್ಬರೂ ಪ್ರತಿಪಾದಿಸಿದ್ದಾರೆ. ಇಮ್ರಾನ್ ಖಾನ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 265 ಸ್ಥಾನಗಳ ಪೈಕಿ 97 ಸ್ಥಾನಗಳನ್ನು ಗೆಲ್ಲುವ ಮೂಲಕ ಆಶ್ಚರ್ಯಕರ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.
ಇದನ್ನೂ ಓದಿ: ಅಬುಧಾಬಿಯಲ್ಲಿ ಹಿಂದೂ ದೇಗುಲ ಉದ್ಘಾಟನೆಗೆ ಫೆ.13, 14ರಂದು ಪ್ರಧಾನಿ ಮೋದಿ ಯುಎಇ ಭೇಟಿ