ಹೈದರಾಬಾದ್:ಅಮೆರಿಕ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವ ಸಾಧ್ಯತೆ ಬಲವಾಗಿದೆ. ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆಯೂ ನಡೆಯುತ್ತಿದೆ. ಈಗಾಗಲೇ ಡೆಮಾಕ್ರೆಟಿಕ್ ಪಕ್ಷದಿಂದ ಹಾಲಿ ಅಧ್ಯಕ್ಷ ಜೋ ಬೈಡನ್ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಹಾಗಾಗಿ, ಕಮಲಾ ಹ್ಯಾರಿಸ್ ಪೈಪೋಟಿ ನಡೆಸಲಿದ್ದಾರೆ ಎಂಬುದು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಕಮಲಾ ಹ್ಯಾರಿಸ್ ಕುರಿತು: 60 ವರ್ಷದ ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ. ಅಷ್ಟೇ ಅಲ್ಲ, ಭಾರತೀಯ ಅಮೆರಿಕನ್ ಮೂಲದ ಮೊದಲ ಉಪಾಧ್ಯಕ್ಷೆ ಮತ್ತು ದಕ್ಷಿಣ ಏಷ್ಯಾದ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಹಿರಿಮೆಯೂ ಇವರಿಗಿದೆ. ಜೊತೆಗೆ, ಈ ಪಟ್ಟಕ್ಕೇರಿದ ಮೊದಲ ಕಪ್ಪು ಮಹಿಳೆಯೂ ಹೌದು.
ತಂದೆ, ತಾಯಿಯ ಪರಿಚಯ: ಕಮಲಾ ಹ್ಯಾರಿಸ್ 1964ರಲ್ಲಿ ಜನಿಸಿದರು. ಇವರ ತಂದೆ ಡೊನಾಲ್ಡ್ ಹ್ಯಾರಿಸ್ ಜಮೈಕಾ ಮೂಲದವರು. ತಾಯಿ ಶ್ಯಾಮಲಾ ಗೋಪಾಲನ್ ಭಾರತದವರು. ಇವರ ತಾತ ಪಿ.ವಿ.ಗೋಪಾಲನ್ ಭಾರತದ ಸ್ವಾತಂತ್ರ್ಯ ಹೋರಾಟಗಾರರು. ವೃತ್ತಿಯಲ್ಲಿ ವಕೀಲರಾಗಿರುವ ಡೋಗ್ಲಾಸ್ ಎಮ್ಹೋಫ್ ಇವರ ಪತಿ.