ರಿಯಾಸಿ(ಜಮ್ಮು ಮತ್ತು ಕಾಶ್ಮೀರ): ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯ ಬಹುನಿರೀಕ್ಷಿತ ಚೆನಾಬ್ ಸೇತುವೆಯೂ ಸೇರಿದಂತೆ ಕತ್ರಾ-ಬನಿಹಾಲ್ ವಿಭಾಗದಲ್ಲಿ ಶನಿವಾರ ಭಾರತೀಯ ರೈಲ್ವೇ, ಪ್ರಾಯೋಗಿಕ ರೈಲು ಸಂಚಾರವನ್ನು ಯಶಸ್ವಿಯಾಗಿ ನಡೆಸಿತು. ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ತಪಾಸಣೆಗೆ ಮುನ್ನ ಈ ಪರೀಕ್ಷೆ ನಡೆದಿದೆ.
ಭಾರತೀಯ ರೈಲ್ವೇಯ ಮುಖ್ಯ ಆಡಳಿತಾಧಿಕಾರಿ ಸಂದೀಪ್ ಗುಪ್ತಾ ಮಾತನಾಡಿ, "ಜ.7 ಮತ್ತು 8ರಂದು ರೈಲ್ವೇ ಸುರಕ್ಷತಾ ಆಯುಕ್ತರು ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ. ಕತ್ರಾ-ರಿಯಾಸಿ ವಿಭಾಗದ ಈ ತಪಾಸಣೆಯಲ್ಲಿ, ಬನಿಹಾಲ್‌ನಿಂದ ಕತ್ರಾಗೆ ರೈಲು ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ಇವತ್ತು ಬನಿಹಾಲ್‌ನಿಂದ ಕತ್ರಾ ಮತ್ತು ಕತ್ರಾದಿಂದ ಬನಿಹಾಲ್‌ಗೆ WAP 7 ಎಂಬ ಎಲೆಕ್ಟ್ರಿಕ್ ಲೋಕೋ ಮೂಲಕ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ಪ್ರಾಯೋಗಿಕ ಸಂಚಾರಗಳು ನಡೆಯುತ್ತಿರುತ್ತವೆ. ರೈಲು ಸುರಕ್ಷತಾ ಆಯುಕ್ತರು ಜ.7 ಮತ್ತು 8ರಂದು ತಪಾಸಣೆ ನಡೆಸಿ ವರದಿ ನೀಡಲಿದ್ದಾರೆ. ಟ್ರ್ಯಾಕ್‌ಗಳನ್ನು ಜೋಡಿಸಲಾಗಿದೆ. ಎಲ್ಲ ಕೆಲಸಗಳೂ ಮುಗಿದಿವೆ" ಎಂದು ಹೇಳಿದರು.
ಪ್ರಾಯೋಗಿಕ ಸಂಚಾರದ ಉದ್ದೇಶವೇನು?: ಹಳಿಗಳ ಸ್ಥಿರತೆ, ಸಿಗ್ನಲಿಂಗ್ ವ್ಯವಸ್ಥೆಗಳು, ಸುರಕ್ಷತಾ ಮೂಲಸೌಕರ್ಯ ಹಾಗು ಒಟ್ಟಾರೆ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತದೆ. ಪ್ರಾಯೋಗಿಕ ಸಂಚಾರದ ರೈಲು ಅತ್ಯಂತ ಸವಾಲಿನಿಂದ ಕೂಡಿರುವ ಕತ್ರಾ-ಬನಿಹಾಲ್ ಪ್ರದೇಶ, ಸುರಂಗಗಳು ಮತ್ತು ಕಣಿವೆಯನ್ನು ದಾಟಿಹೋಗಲು ಇರುವ ಎತ್ತರದ ಸೇತುವೆಗಳಲ್ಲಿ ದಕ್ಷತೆಯಿಂದ ಕ್ರಮಿಸಿದೆ.
#WATCH | Reasi, J&K | A successful trial run over Chenab bridge was conducted on the Katra-Banihal section ahead of CRS (Commissioner Railways Safety) inspection
— ANI (@ANI) January 5, 2025
This trial run marks a major step towards the operationalization of this crucial rail corridor, aimed at enhancing… pic.twitter.com/bzKRpEfiGL
ಕತ್ರಾ-ಬನಿಹಾಲ್ ರೈಲ್ವೇ ವಿಭಾಗ ಯುಎಸ್‌ಬಿಆರ್‌ಎಲ್ ಯೋಜನೆಯಲ್ಲಿ (USBRL Project) ಪ್ರಮುಖ ಕೊಂಡಿ. ಜಮ್ಮು-ಕಾಶ್ಮೀರ ಕಣಿವೆಯ ನಡುವಿನ ಪ್ರಯಾಣದ ಅಂತರವನ್ನು ಇದು ಕಡಿಮೆ ಮಾಡುತ್ತದೆ.
ಮುಖ್ಯಾಂಶಗಳು:
- USBRL ಯೋಜನೆಯ ವ್ಯಾಪ್ತಿ- 272 ಕಿಲೋ ಮೀಟರ್
- ಒಟ್ಟು ವೆಚ್ಚ- ₹37,000 ಕೋಟಿ
- ಒಟ್ಟು ಸೇತುವೆಗಳ ನಿರ್ಮಾಣ- 943
- ಅಂಜಿ ಖಡ್, ಚೆನಾಬ್ ಅತಿ ಎತ್ತರದ ಸೇತುವೆಗಳು
- ಚೆನಾಬ್ ಸೇತುವೆ ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ
- ಚೆನಾಬ್ ಸೇತುವೆಯ ಒಟ್ಟು ಉದ್ದ- 1,315 ಮೀಟರ್
- ಚೆನಾಬ್ ಸೇತುವೆಯ ಕಮಾನಿನ ವಿಸ್ತೀರ್ಣ- 467 ಮೀಟರ್
- ಚೆನಾಬ್ ನದಿಯಿಂದ ಸೇತುವೆಯ ಎತ್ತರ 359 ಮೀಟರ್
- ಜಮ್ಮು ಕಾಶ್ಮೀರದಲ್ಲಿ ಭಾರತೀಯ ರೈಲ್ವೇ ಅದ್ಭುತ ಎಂಜಿನಿಯರಿಂಗ್ ಕೌಶಲ
ಯೋಜನೆಯ ವಿಶೇಷತೆ: ಈ ಯೋಜನೆಯು ಸಂಕೀರ್ಣ ಸ್ಥಳಾಕೃತಿ ಮತ್ತು ಇಂಜಿನಿಯರಿಂಗ್ ಕೌಶಲಗಳ ಅದ್ಭುತಗಳಿಗೆ ಹೆಸರುವಾಸಿ. ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆಯಾದ(1,315 ಮೀಟರ್) ಚೆನಾಬ್ ಸೇತುವೆಯನ್ನು ಇದು ಒಳಗೊಂಡಿದೆ. ಅಷ್ಟೇ ಅಲ್ಲ, ಹಲವು ಅತ್ಯಾಧುನಿಕ ಸುರಂಗಗಳು ಮತ್ತು ಅಷ್ಟೇ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಇಲ್ಲಿ ಅಳವಡಿಸಿರುವುದು ವಿಶೇಷ.
ಕಾಶ್ಮೀರ ಕಣಿವೆಗೆ ತಡೆರಹಿತ ರೈಲು ಸಂಪರ್ಕ: ನಿನ್ನೆ ನಡೆದ ಪ್ರಾಯೋಗಿಕ ಸಂಚಾರದ ಮೂಲಕ ಭಾರತೀಯ ರೈಲ್ವೇ, ಕಾಶ್ಮೀರ ಕಣಿವೆಗೆ ತಡೆರಹಿತ ರೈಲು ಸಂಪರ್ಕ ಒದಗಿಸುವತ್ತ ಐತಿಹಾಸಿಕ ಹೆಜ್ಜೆ ಇಟ್ಟಿತು. ಇದರ ಫಲವಾಗಿ ಪ್ರಯಾಣಿಕರು, ಸರಕುಗಳಿಗೆ ಸುಲಭ ಹಾಗು ಸರಾಗ ಸಂಚಾರ ವ್ಯವಸ್ಥೆ ಖಾತ್ರಿಯಾಗಿದೆ. ರೈಲು ಸಂಪರ್ಕದೊಂದಿಗೆ ಈ ಪ್ರದೇಶ ಬೆಳವಣಿಗೆ ಹೊಂದುವುದರೊಂದಿಗೆ ದೇಶದ ಮುಖ್ಯವಾಹಿನಿಯೊಂದಿಗೆ ಸೇರಲೂ ಕೂಡಾ ದಾರಿ ಮಾಡಿಕೊಡುತ್ತದೆ. ರೈಲ್ವೇ ಸುರಕ್ಷತಾ ಆಯುಕ್ತರ ಅಂತಿಮ ಪ್ರಾಯೋಗಿಕ ಪರೀಕ್ಷೆಯ ನಂತರ ನಿರಂತರವಾಗಿ ಇಲ್ಲಿ ರೈಲು ಸಂಚಾರ ಶುರುವಾಗಲಿದೆ.
ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯೊಂದಿಗೆ ಭಿಕ್ಷುಕ ಮುಕ್ತ ನಗರವಾಗಿ ಹೊರಹೊಮ್ಮಿದ ಸಿಟಿ: ಭಿಕ್ಷುಕರನ್ನು ಹುಡುಕಿಕೊಟ್ಟವರಿಗೆ 1 ಸಾವಿರ ಬಹುಮಾನ!