ಮಂಗಳೂರು: ಉಮ್ರಾ ಯಾತ್ರೆಗೆ ವ್ಯವಸ್ಥೆ ಮಾಡಿ 164 ಮಂದಿಯನ್ನು ವಿದೇಶದಲ್ಲೇ ಅತಂತ್ರಗೊಳಿಸಿದ ಮಂಗಳೂರಿನ ಟ್ರಾವೆಲ್ ಏಜೆನ್ಸಿಯೊಂದರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಘಟನೆಯ ಬಳಿಕ ಟ್ರಾವೆಲ್ ಏಜೆನ್ಸಿಯ ಕಬಕದ ಮುಹಮ್ಮದೀಯಾ ಉಮ್ರಾ ಗ್ರೂಪ್ನ ಮಾಲಕ ಅಮೀರ್ ಅಶ್ರಫ್ ಸಖಾಫಿ ಪರ್ಪುಂಜ ಕ್ಷಮೆ ಯಾಚಿಸಿದ್ದಾರೆ.
ಡಿಸೆಂಬರ್ 14ಕ್ಕೆ ಕಬಕದ ಮುಹಮ್ಮದೀಯಾ ಉಮ್ರಾ ಗ್ರೂಪ್ ಹೆಸರಲ್ಲಿ ಕ್ಯಾಲಿಕಟ್ ಏರ್‌ಪೋರ್ಟ್‌ನಿಂದ 164 ಮಂದಿಯನ್ನು ಕರೆದುಕೊಂಡು ಜೆಡ್ಡಾ ಏರ್ಪೋರ್ಟ್ಗೆ ತೆರಳಿ ಅಲ್ಲಿಂದ ಮಕ್ಕಾಕ್ಕೆ ಉಮ್ರಾ ಮಾಡಲು ತೆರಳಿದ್ದರು. ಆದರೆ ಬಳಿಕ ಯಾತ್ರಿಕರನ್ನು ಟ್ರಾವೆಲ್ ಏಜೆನ್ಸಿಯವರು ಮದೀನಾದಲ್ಲಿ ಬಿಟ್ಟು ಹೋಗಿದ್ದು, ಅಲ್ಲಿ ಅವರು ಅತಂತ್ರಗೊಂಡಿದ್ದರು. ಇದರಲ್ಲಿ 58 ಮಂದಿ ಹೊರತುಪಡಿಸಿ ಉಳಿದವರು ತಮ್ಮ ಸಂಬಂಧಿಕರ ನೆರವು ಪಡೆದು ಊರು ತಲುಪಿದ್ದರು.
ಈ ಮಾಹಿತಿ ಪಡೆದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ತಮ್ಮ ಸ್ನೇಹಿತರ ನೆರವಿನಿಂದ ಸುರಕ್ಷಿತವಾಗಿ 58 ಮಂದಿಯನ್ನು ತಾಯ್ನಾಡಿಗೆ ತಲುಪಿಸಿದ್ದಾರೆ.
ಈ ಕುರಿತು ಮಾತನಾಡಿದ ಮೊಯ್ದಿನ್ ಬಾವ, "ಯಾತ್ರಿಕರನ್ನು ಮೆಕ್ಕಾಕ್ಕೆ ಕರೆದುಕೊಂಡು ಹೋಗಿ ಬಳಿಕ ಮದೀನಾಕ್ಕೆ ತೆರಳಿದ್ದರು. ಅಲ್ಲಿ ಅಷ್ಟೂ ಮಂದಿ ಯಾತ್ರಾರ್ಥಿಗಳನ್ನು ಬಿಟ್ಟು ಏಜೆನ್ಸಿಯವರು ಭಾರತಕ್ಕೆ ಪಲಾಯನ ಮಾಡಿದ್ದು, ಯಾತ್ರಾರ್ಥಿಗಳು ಅತಂತ್ರಗೊಂಡಿದ್ದರು. ಮಹಿಳೆಯರು, ವೃದ್ಧರು ಸೇರಿದಂತೆ 58 ಮಂದಿ ನೆರವು ಸಿಗದೆ ಕಂಗಾಲಾಗಿದ್ದರು. ಔಷಧಿ, ಊಟ, ವಸತಿ ಇಲ್ಲದೆ ಪರದಾಟ ನಡೆಸಿದ್ದರು. ವಿಷಯ ತಿಳಿದ ನಾನು, ತಕ್ಷಣ ಸೌದಿಯಲ್ಲಿದ್ದ ತನ್ನ ಸ್ನೇಹಿತರು, ವಿವಿಧ ಸಂಘಟನೆಗಳನ್ನು ಸಂಪರ್ಕಿಸಿ ಅಷ್ಟೂ ಮಂದಿಯ ಪ್ರಯಾಣದ ಹಣ ಹೊಂದಿಸಿದ್ದೇನೆ. ಮಂಗಳೂರು, ಕಣ್ಣೂರು, ಕ್ಯಾಲಿಕಟ್, ಬೆಂಗಳೂರು ಏರ್‌ಪೋರ್ಟ್ ಮೂಲಕ ಎಲ್ಲ ಸಂತ್ರಸ್ತರು ಊರಿಗೆ ಮರಳಿದ್ದಾರೆ. ಮದೀನಾದಲ್ಲಿ ಯಾತ್ರಾರ್ಥಿಗಳು ಸಿಲುಕಿರುವ ಸುದ್ದಿ ತಿಳಿದ ತಕ್ಷಣ ಸ್ನೇಹಿತರ ಮೂಲಕ ಅವರ ಸುರಕ್ಷತೆಗೆ ಆದ್ಯತೆ ನೀಡಲಾಯಿತು. ಬಳಿಕ 58 ಮಂದಿಯ ಪ್ರಯಾಣ ವೆಚ್ಚವನ್ನು ನಾವೆಲ್ಲರೂ ಸೇರಿ ಹೊಂದಿಸಿಕೊಂಡು ಊರಿಗೆ ಕರೆತಂದಿದ್ದೇವೆ. ರಿಟರ್ನ್ ಟಿಕೆಟ್ ಪಡೆಯದೆ ಕೇವಲ ಡಮ್ಮಿ ಟಿಕೆಟ್ ಪಡೆದುಕೊಂಡು ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿ ವಿರುದ್ಧ ಹಾಗೂ ಇದಕ್ಕೆ ಅನುವು ಮಾಡಿಕೊಡುವ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಸಾರ್ವಜನಿಕರನ್ನು ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿಗಳ ಲೈಸನ್ಸ್ ಕೂಡ ರದ್ದುಗೊಳಿಸಬೇಕು" ಎಂದು ಒತ್ತಾಯಿಸಿದರು.
ಟ್ರಾವೆಲ್ ಸಂಸ್ಥೆಯಿಂದ ಕ್ಷಮೆಯಾಚನೆ: ಕಬಕದ ಮುಹಮ್ಮದೀಯಾ ಉಮ್ರಾ ಗ್ರೂಪ್ನ ಮಾಲಕ ಅಮೀರ್ ಅಶ್ರಫ್ ಸಖಾಫಿ ಪರ್ಪುಂಜ ಪ್ರತಿಕ್ರಿಯಿಸಿ, "ನನ್ನ ವೈಯಕ್ತಿಕ ಬೇಜಾವಾಬ್ದಾರಿಯಿಂದ 164 ಮಂದಿ ಉಮ್ರಾ ಯಾತ್ರಿಗಳಿಗೆ ತೊಂದರೆಯಾಗಿದ್ದು ನಿಜ. ನನ್ನಿಂದ ತಪ್ಪಾಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.
"ಡಿಸೆಂಬರ್ 14ಕ್ಕೆ ನನ್ನ ಸಂಸ್ಥೆಯ ಹೆಸರಲ್ಲಿ ಕ್ಯಾಲಿಕಟ್ ಏರ್‌ಪೋರ್ಟ್‌ನಿಂದ 164 ಮಂದಿಯನ್ನು ಕರೆದುಕೊಂಡು ಜೆಡ್ಡಾ ಏರ್ಪೋರ್ಟ್ಗೆ ತೆರಳಿ ಅಲ್ಲಿಂದ ಮಕ್ಕಾಕ್ಕೆ ಉಮ್ರಾ ಮಾಡಲು ತೆರಳಲಾಗಿತ್ತು. ಮಕ್ಕಾದಲ್ಲಿ 10 ದಿನಗಳ ಕಾಲ ತಂಗಿ ಅಲ್ಲಿನ ಆರಾಧನಾ ಕರ್ಮಗಳನ್ನು ಮುಗಿಸಿ ಮದೀನಾಕ್ಕೆ ಹೋಗಿದ್ದು ಅಲ್ಲಿ ಆರು ದಿನಗಳ ಕಾಲ ತಂಡ ಉಳಿದಿತ್ತು. ಅಲ್ಲಿಂದ ಮರಳುವ ಸಂದರ್ಭದಲ್ಲಿ ಯಾತ್ರಾರ್ಥಿಗಳ ವಾಸ್ತವ್ಯ, ಆಹಾರ ಹಾಗೂ ಹಿಂದಿರುಗಿ ಬರುವ ಟಿಕೆಟ್ನ ಕಾರ್ಯದಲ್ಲಿ ತಾಂತ್ರಿಕ ಕಾರಣಗಳಿಂದ ಸ್ವಲ್ಪ ವ್ಯತ್ಯಯ ಉಂಟಾಯ್ತು. ಇದರಿಂದ ಯಾತ್ರಾರ್ಥಿಗಳಿಗೆ ಮತ್ತು ಅವರ ಕುಟುಂಬಕ್ಕೆ ತೀವ್ರ ತೊಂದರೆ ಉಂಟಾಗಿದ್ದಾಗಿ ನನಗೆ ಗಮನಕ್ಕೆ ಬಂದಿದೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ" ಎಂದರು.
"ಈ ಘಟನೆಗಳು ಸಂಭವಿಸಿದ್ದು ಕೇವಲ ನನ್ನ ವೈಯಕ್ತಿಕ ಬೇಜಾವಾಬ್ದಾರಿಯ ಕಾರಣದಿಂದಲೇ ಹೊರತು ಇದಕ್ಕೆ ಬೇರೆ ಯಾರೂ ಜವಾಬ್ದಾರರಲ್ಲ. ಈ ಬಗ್ಗೆ 'ಕರ್ನಾಟಕ ಸಖಾಫಿ ಕೌನ್ಸಿಲ್' ನನ್ನನ್ನು ನೇರವಾಗಿ ಕಚೇರಿಗೆ ಕರೆದು ವಿಚಾರಿಸಿದ್ದು ನನ್ನಿಂದ ಉಂಟಾದ ಪ್ರಮಾದಗಳನ್ನು ಅವರ ಮುಂದೆ ಒಪ್ಪಿಕೊಂಡಿದ್ದೇನೆ. ಮುಂದೆ ಇಂತಹ ಅವ್ಯವಸ್ಥೆಗಳು ನಡೆಯದಂತೆ ಗರಿಷ್ಠ ಎಚ್ಚರ ವಹಿಸುವುದಾಗಿ ಅವರ ಮುಂದೆ ಮಾತು ಕೊಟ್ಟಿದ್ದೇನೆ" ಎಂದು ತಿಳಿಸಿದ್ದಾರೆ.
"ನಡೆದು ಹೋಗಿರುವ ಈ ದುರ್ಘಟನೆಗೆ ನಾನು ತೀವ್ರ ನೊಂದಿದ್ದು ಸಂಕಷ್ಟಕ್ಕೊಳಗಾದ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ. ಹಲವು ವ್ಯಕ್ತಿಗಳು ಮರಳಿ ಬರುವ ಟಿಕೆಟ್ಗಳಿಗೆ ಇತರ ದಾನಿಗಳು ಹಾಗೂ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿದ್ದು ಅಂಥರಿಗೆ ಹಣ ಪಾವತಿಸಲು ನಾನು ಬದ್ಧ. ಈ ವಿಷಯ ಸಂಪೂರ್ಣವಾಗಿ ನನ್ನ ವೈಯಕ್ತಿಕ ಕಾರ್ಯವಾಗಿದ್ದು ಇದಕ್ಕೆ ಯಾರೂ ಉಲಮಾ ವರ್ಗವನ್ನಾಗಲೀ, ಸಖಾಫಿ ಸಮೂಹ ವನ್ನಾಗಲೀ, ನಮ್ಮೆಲ್ಲರ ಗುರುವರ್ಯರಾದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರನ್ನಾಗಲೀ ಅವರನ್ನು ಎಳೆದು ತರಬಾರದೆಂದು ವಿನಂತಿಸಿಕೊಳ್ಳುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ: ಶಿಕ್ಷಕಿಯ ವರ್ಗಾವಣೆಗೆ ಲಂಚ: ಡಿಡಿಪಿಐ, ಕಚೇರಿ ಅಧೀಕ್ಷಕ ಲೋಕಾಯುಕ್ತ ಬಲೆಗೆ