ಬೈರುತ್, ಲೆಬನಾನ್: ಇಸ್ರೇಲ್ ಮತ್ತು ಲೆಬನಾನ್ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ನಡುವಿನ ಕದನ ವಿರಾಮವನ್ನು ಒಂದು ತಿಂಗಳ ಕಾಲ ಜಾರಿಯಲ್ಲಿತ್ತು. ಆದರೆ ಒಪ್ಪಂದದ ಗಡುವಿನೊಳಗೆ ಕದನ ವಿರಾಮ ಷರತ್ತುಗಳ ಪಾಲನೆ ಅಸಂಭವವಾಗಿದೆ.
ನವೆಂಬರ್ 27 ರಂದು ನಡೆದ ಕದನ ವಿರಾಮ ಒಪ್ಪಂದದ ಪ್ರಕಾರ, ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಮತ್ತು ಇಸ್ರೇಲಿ ಪಡೆಗಳು ಲೆಬನಾನ್ನಿಂದ ಹಿಂದೆ ಸರಿಯಬೇಕು. ಇದರ ಜೊತೆಗೆ ಲೆಬನಾನ್ ಸೈನ್ಯ ಮತ್ತು ಯುಎನ್ ಶಾಂತಿಪಾಲಕರಿಗೆ ಇಸ್ರೇಲಿ ತನ್ನ ನಿಯಂತ್ರಣವನ್ನು ಹಸ್ತಾಂತರಿಸಲು 60 ದಿನಗಳ ಗಡುವು ನೀಡಲಾಗಿತ್ತು.
ಆದರೆ ಇಸ್ರೇಲ್, ಇಲ್ಲಿಯವರೆಗೆ ದಕ್ಷಿಣ ಲೆಬನಾನ್‌ನಲ್ಲಿ ತನ್ನ ಹಿಡಿತದಲ್ಲಿರುವ ಡಜನ್ಗಟ್ಟಲೆ ಪಟ್ಟಣಗಳ ಪೈಕಿ ಕೇವಲ ಎರಡರಿಂದ ಮಾತ್ರ ಹಿಂದೆ ಸರಿದಿದೆ ಮತ್ತು ಹಿಜ್ಬುಲ್ಲಾಗೆ ಸೇರಿದ ನೆಲೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದೆ. ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ವಶಪಡಿಕೊಳ್ಳುವ ಮತ್ತು ಅವುಗಳನ್ನು ನಾಶಪಡಿಸುವುದಕ್ಕೂ ಮುನ್ನ ಇಸ್ರೇಲ್ ರಾಕೆಟ್ಗಳನ್ನು ಉಡಾಯಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸುಮಾರು 14 ತಿಂಗಳ ಸುದೀರ್ಘ ಯುದ್ಧದಿಂದ ಕಂಗೆಟ್ಟಿರುವ ಹಿಜ್ಬುಲ್ಲಾ, 60 ದಿನಗಳ ಗಡುವಿನೊಳಗೆ ಇಸ್ರೇಲ್ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳದಿದ್ದರೆ ಯುದ್ಧವನ್ನು ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದೆ.
ಕದನ ವಿರಾಮ ಉಲ್ಲಂಘನೆಯ ಬಗ್ಗೆ ಎರಡೂ ಕಡೆಗಳಿಂದ ಆರೋಪ ಕೇಳಿ ಬರುತ್ತಿರುವುದರ ನಡುವೆಯೂ ಕದನ ವಿರಾಮವು ಮುಂದುವರಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧದಿಂದ ಸ್ಥಳಾಂತರಗೊಂಡ ಸಾವಿರಾರು ಇಸ್ರೇಲಿ ಮತ್ತು ಲೆಬನಾನ್ ವಾಸಿಗಳಿಗೆ ಇದು ಶುಭ ಸುದ್ದಿಯಾಗಿದೆ.
ವಾಷಿಂಗ್ಟನ್ನಲ್ಲಿರುವ ಮಿಡಲ್ ಈಸ್ಟ್ ಇನ್ಸ್ ಸ್ಟಿಟ್ಯೂಟ್ನ ಹಿರಿಯ ಸಂಶೋಧನಾ ಫೆಲೋ ಫಿರಾಸ್ ಮಕ್ಸಾದ್ ಪ್ರತಿಕ್ರಿಯಿಸಿ, "ಕದನ ವಿರಾಮ ಒಪ್ಪಂದವು ಅಪಾರದರ್ಶಕವಾಗಿದೆ. ಕದನ ವಿರಾಮ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಸಿರಿಯಾದ ಅಧ್ಯಕ್ಷರಾಗಿದ್ದ ಬಶರ್ ಅಲ್ ಅಸ್ಸಾದ್ ಅವರ ಪದಚ್ಯುತಿ ಸೇರಿದಂತೆ ಬದಲಾಗುತ್ತಿರುವ ಸನ್ನಿವೇಶಗಳನ್ನು ಎದುರಿಸಲು ಉತ್ತಮ ಅವಕಾಶಗಳು ಇವೆ" ಎಂದು ಹೇಳಿದರು.
ಅಸ್ಸಾದ್ ದೇಶ ಬಿಟ್ಟು ಪರಾರಿಯಾದ ನಂತರ, ಇರಾನ್‌ನಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವ ಅವಕಾಶವನ್ನು ಹಿಜ್ಬುಲ್ಲಾ ಕಳೆದುಕೊಂಡಿದೆ. ಇದು ಹಿಜ್ಬುಲ್ಲಾವನ್ನು ಮತ್ತಷ್ಟು ದುರ್ಬಲಗೊಳಿಸಿತು ಮತ್ತು ಇಸ್ರೇಲ್ ಈಗಾಗಲೇ ಯುಎಸ್ ಮಧ್ಯಸ್ಥಿಕೆಯ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು.
2023 ಅಕ್ಟೋಬರ್ 8 ರಂದು ಹಿಜ್ಬುಲ್ಲಾ, ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿಲು ಪ್ರಾರಂಭಿಸಿತು. ಜೊತೆಗೆ ಹಮಾಸ್ ಇಸ್ರೇಲ್‌ನ ಮೇಲೆ ಮಾರಣಾಂತಿಕ ದಾಳಿಯನ್ನು ಪ್ರಾರಂಭಿಸಿದ ನಂತರ ಅದು ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಮತ್ತಷ್ಟು ಪ್ರಚೋದಿಸಿತು. ಅಂದಿನಿಂದ, ಇಸ್ರೇಲಿನ ವೈಮಾನಿಕ ಮತ್ತು ಭೂ ದಾಳಿಗಳಿಂದ ಲೆಬನಾನ್‌ನಲ್ಲಿ ನೂರಾರು ನಾಗರಿಕರೂ ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಯುದ್ಧ ಉತ್ತುಂಗದಲ್ಲಿದ್ದಾಗ 10 ಲಕ್ಷಕ್ಕೂ ಹೆಚ್ಚು ಲೆಬನಾನ್ ನಾಗರಿಕರೂ ಸ್ಥಳಾಂತರಗೊಂಡಿದ್ದರು.
ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿಯಿಂದ ಸುಮಾರು 60 ಸಾವಿರ ನಾಗರಿಕರು ಸ್ಥಳಾಂತರಗೊಂಡಿದ್ದರು ಮತ್ತು ಇಸ್ರೇಲ್‌ನ 31 ಸೈನಿಕರು ಸೇರಿದಂತೆ 76 ಜನರು ಸಾವನ್ನಪ್ಪಿದ್ದರು. ಬನಾನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 50 ಇಸ್ರೇಲಿ ಸೈನಿಕರು ಮೃತರಾಗಿದ್ದರು.
ನ.27ರ ಕದನ ವಿರಾಮ ಒಪ್ಪಂದದ ಪ್ರಮುಖ ಷರತ್ತುಗಳು:
- ಈ ಒಪ್ಪಂದದ ಪ್ರಕಾರ 60 ದಿನಗಳ ಕಾಲ ಕದನ ವಿರಾಮ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಇಸ್ರೇಲಿ ಪಡೆಗಳು ಗಡಿಯ ತಮ್ಮ ಭಾಗಕ್ಕೆ ಹಿಂತಿರುಗುತ್ತವೆ ಮತ್ತು ಹಿಜ್ಬುಲ್ಲಾ ದಕ್ಷಿಣ ಲೆಬನಾನ್ನ ಹೆಚ್ಚಿನ ಭಾಗಗಳಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹಿಂಪಡೆಬೇಕು.
- ಈ ಒಪ್ಪಂದವು ನ.27ರಿಂದ ಜಾರಿಗೆ ಬರುತ್ತದೆ.
- ಲಿಟಾನಿ ನದಿಯ ದಕ್ಷಿಣದ ಪ್ರದೇಶದಲ್ಲಿ ಸಾವಿರಾರು ಲೆಬನಾನ್ ಸೈನಿಕರು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲು ಇಸ್ರೇಲ್ ಒಪ್ಪಿಕೊಳ್ಳಬೇಕು.
- ಯುಎಸ್ ನೇತೃತ್ವದ ಅಂತರರಾಷ್ಟ್ರೀಯ ಮೇಲ್ವಿಚಾರಣಾ ಗುಂಪು ಎಲ್ಲಾ ಪಕ್ಷಗಳು ಕದನವಿರಾಮ ಪಾಲಿಸುವ ಬಗ್ಗೆ ಮೇಲ್ವಿಚಾರಣೆ ಮಾಡಲಿದೆ. ಈ ಒಪ್ಪಂದವು ಹಗೆತನಕ್ಕೆ ಶಾಶ್ವತ ಅಂತ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಅಧ್ಯಕ್ಷ ಬೈಡನ್ ಹೇಳಿದ್ದರು.
- ಹಿಜ್ಬುಲ್ಲಾ ತನ್ನ ಬದ್ಧತೆಗಳನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳುವ ಹಕ್ಕು ತನಗಿರಬೇಕೆಂದು ಇಸ್ರೇಲ್ ಒತ್ತಾಯಿಸಿದೆ. ಈ ನಿಬಂಧನೆಯನ್ನು ಲೆಬನಾನ್ ಅಧಿಕಾರಿಗಳು ಒಪ್ಪಂದದಲ್ಲಿ ಸೇರಿದಂತೆ ವಿರೋಧಿಸಿದ್ದರು.
ಇದನ್ನೂ ಓದಿ: ಸಿರಿಯಾದಲ್ಲಿ ಚುನಾವಣೆ ನಡೆಸಲು 4 ವರ್ಷ ಬೇಕಾಗಬಹುದು: ಆಡಳಿತದ ಮುಖ್ಯಸ್ಥ ಅಹ್ಮದ್ ಅಲ್ - ಶರಾ ಹೇಳಿಕೆ