ಚಾಮರಾಜನಗರ: ಮೂರನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಂತ ಫ್ರಾನ್ಸಿಸ್ ಶಾಲೆಯಲ್ಲಿ 3 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 8 ವರ್ಷದ ತೇಜಸ್ವಿನಿ, ಹೃದಯಾಘಾತದಿಂದ ಶಾಲಾ ಆವರಣದಲ್ಲಿ ಕುಸಿದು ಮೃತಪಟ್ಟಿದ್ದಾಳೆ. ಸ್ನೇಹಿತರ ಜೊತೆಗಿದ್ದ ತೇಜ್ವಸಿನಿ ಹಠಾತ್ತನೇ ಕುಸಿದು ಬಿದ್ದಿದ್ದನ್ನು ಕಂಡ ಕೂಡಲೇ ಶಾಲಾ ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದರೂ, ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಲೆಗೆ ಬಿಇಒ ಭೇಟಿ: ವಿದ್ಯಾರ್ಥಿನಿ ಮೃತಪಟ್ಟ ಮಾಹಿತಿ ತಿಳಿದ ಚಾಮರಾಜನಗರ ಬಿಇಒ ಹನುಮಂತಶೆಟ್ಟಿ ಸೆಂಟ್ ಫ್ರಾನ್ಸಿಸ್ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, "ಬದನಗುಪ್ಪೆ ಗ್ರಾಮದ ಲಿಂಗರಾಜು ಮತ್ತು ಶೃತಿ ದಂಪತಿಯ ಮಗಳಾದ ತೇಜಸ್ವಿನಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಶಾಲಾ ವರಾಂಡದಲ್ಲಿ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದನ್ನು ಕಂಡು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದರು ಮೃತಪಟ್ಟಿದ್ದಾಳೆ. ವೈದ್ಯರು ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ" ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿನಿಗೆ ಆರೋಗ್ಯ ಸಮಸ್ಯೆ ಇರಲಿಲ್ಲ: ಶಾಲಾ ಪ್ರಾಂಶುಪಾಲ ಪ್ರಭಾಕರ್ ಮಾತನಾಡಿ, "ತೇಜಸ್ವಿನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ, ಶಾಲೆಯಲ್ಲಿ ಚಟುವಟಿಕೆಯಿಂದಲೇ ಇರುತ್ತಿದ್ದಳು. ಅವರ ಪಾಲಕರು ಕೂಡ ಆಕೆಗೆ ಅನಾರೋಗ್ಯ ಇರುವ ಬಗ್ಗೆ ತಿಳಿಸಿಲ್ಲ" ಎಂದರು.
ಇದನ್ನೂ ಓದಿ: ಚರಂಡಿಯಲ್ಲಿ ನವಜಾತ ಶಿಶು ಪತ್ತೆ, ಸರ್ಕಾರಿ ಆಸ್ಪತ್ರೆಗೆ ರವಾನೆ; ಹೆಚ್ಡಿ ಕೋಟೆ ತಾಲೂಕಿನಲ್ಲಿ ಘಟನೆ