ಮುಂಬೈ, ಮಹಾರಾಷ್ಟ್ರ: ಜಾಗತಿಕ ಅನಿಶ್ಚಿತತೆಗಳ ಜೊತೆಗೆ ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್ಎಂಪಿವಿ) ಬಗ್ಗೆ ಹೆಚ್ಚುತ್ತಿರುವ ಆತಂಕದ ಹಿನ್ನೆಲೆಯಲ್ಲಿ ದೇಶೀಯ ಬೆಂಚ್ ಮಾರ್ಕ್ ಸೂಚ್ಯಂಕಗಳು ಸೋಮವಾರ ಶೇಕಡಾ 1.5 ಕ್ಕಿಂತ ಹೆಚ್ಚು ಕುಸಿದಿದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಸೋಮವಾರ ತೀವ್ರ ನಷ್ಟ ಅನುಭವಿಸಿತು.
ನಿಫ್ಟಿಯಲ್ಲಿ ಪಿಎಸ್ಯು ಬ್ಯಾಂಕ್ ಷೇರುಗಳ ಭಾರಿ ಮಾರಾಟ ಕಂಡು ಬಂದಿದೆ. ಪಿಎಸ್ಯು ಬ್ಯಾಂಕ್ ವಲಯವು ಶೇಕಡಾ 4 ಕ್ಕಿಂತ ಹೆಚ್ಚು ಅಂಕಗಳ ಕುಸಿತ ಕಂಡಿದೆ. ಇದಲ್ಲದೇ, ರಿಯಾಲ್ಟಿ, ಲೋಹ, ಇಂಧನ, ಪಿಎಸ್ಇ ಮತ್ತು ಸರಕು ವಲಯಗಳು ಸಹ ಶೇಕಡಾ 3 ಕ್ಕಿಂತ ಹೆಚ್ಚು ಕುಸಿದವು.
ಸೋಮವಾರದಂದು ಸೆನ್ಸೆಕ್ಸ್ 1,258.12 ಪಾಯಿಂಟ್ ಅಥವಾ ಶೇಕಡಾ 1.59 ರಷ್ಟು ಕುಸಿದು 77,964.99 ರಲ್ಲಿ ಕೊನೆಗೊಂಡಿತು ಮತ್ತು ನಿಫ್ಟಿ 388.70 ಪಾಯಿಂಟ್ ಅಥವಾ 1.62 ಶೇಕಡಾ ಕುಸಿದು 23,616.05 ರಲ್ಲಿ ಕೊನೆಗೊಂಡಿತು. ವಹಿವಾಟಿನಲ್ಲಿ ಸೆನ್ಸೆಕ್ಸ್ 77,781.62 ಮತ್ತು ನಿಫ್ಟಿ 23,551.90ರ ಕನಿಷ್ಠ ಮಟ್ಟಕ್ಕಿಳಿದಿದ್ದವು.
ನಿಫ್ಟಿ ಬ್ಯಾಂಕ್ 1,066.80 ಪಾಯಿಂಟ್ ಅಥವಾ ಶೇಕಡಾ 2.09 ರಷ್ಟು ಕುಸಿದು 49,922 ರಲ್ಲಿ, ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ 1,564.10 ಪಾಯಿಂಟ್ ಅಥವಾ ಶೇಕಡಾ 2.70 ರಷ್ಟು ಕುಸಿದು 56,366.9 ರಲ್ಲಿ, ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕ 608.45 ಪಾಯಿಂಟ್ ಅಥವಾ ಶೇಕಡಾ 3.20 ರಷ್ಟು ಕುಸಿದು 18,425.25 ರಲ್ಲಿ ಕೊನೆಗೊಂಡವು.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (ಬಿಎಸ್ಇ) ನಲ್ಲಿ 3,472 ಷೇರುಗಳಲ್ಲಿ ನಷ್ಟವಾದರೆ, 657 ಷೇರುಗಳು ಲಾಭದಲ್ಲಿ ಕೊನೆಗೊಂಡಿವೆ. ಇನ್ನು 115 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಲಯವಾರು ನೋಡುವುದಾದರೆ ಎಲ್ಲಾ ವಲಯಗಳು ನಷ್ಟದಲ್ಲಿ ಕೊನೆಗೊಂಡಿವೆ.
ಈ ಷೇರುಗಳಲ್ಲಿ ನಷ್ಟ: ಸೆನ್ಸೆಕ್ಸ್ ಪ್ಯಾಕ್ನಲ್ಲಿ ಟಾಟಾ ಸ್ಟೀಲ್, ಎನ್ಟಿಪಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಪವರ್ ಗ್ರಿಡ್, ಜೊಮಾಟೊ, ಇಂಡಸ್ಇಂಡ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ರಿಲಯನ್ಸ್, ಎಂ & ಎಂ, ಅಲ್ಟ್ರಾಟೆಕ್ ಸಿಮೆಂಟ್, ಎಚ್ಡಿಎಫ್ಸಿ ಬ್ಯಾಂಕ್, ನೆಸ್ಲೆ ಇಂಡಿಯಾ ಮತ್ತು ಎಸ್ಬಿಐ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.
ಇಷ್ಟೊಂದು ಹಿಂಜರಿಕೆ ಮಧ್ಯ ಲಾಭ ಗಳಿಸಿದ ಷೇರುಗಳಿವು: ಟೈಟಾನ್, ಎಚ್ಸಿಎಲ್ ಟೆಕ್ ಮತ್ತು ಸನ್ ಫಾರ್ಮಾ ಲಾಭ ಗಳಿಸಿದವು.
ಎಚ್ಎಂಪಿವಿ ವೈರಸ್ ಹರಡುವಿಕೆಯ ಆತಂಕವು ಷೇರುಗಳ ಮಾರಾಟಕ್ಕೆ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. "ಹೊಸ ಯುಎಸ್ ಆರ್ಥಿಕ ನೀತಿಗಳ ಬಗೆಗಿನ ಅನಿಶ್ಚಿತತೆಗಳು, ಭವಿಷ್ಯದ ಬಡ್ಡಿ ದರ ಕಡಿತದ ಬಗ್ಗೆ ಫೆಡ್ನ ಕಠಿಣ ನಿಲುವು, ಹಣದುಬ್ಬರಕ್ಕೆ ಸಂಭಾವ್ಯ ಮೇಲ್ಮುಖ ಪರಿಷ್ಕರಣೆ ಮತ್ತು ಬಲವಾದ ಡಾಲರ್ನಿಂದಾಗಿ ಉದಯೋನ್ಮುಖ ಮಾರುಕಟ್ಟೆಗಳು ಬಲವಾಗುತ್ತಿವೆ. ಇವೆಲ್ಲವೂ ಮಾರುಕಟ್ಟೆಯ ಭಾವನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ" ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ : ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ 4ರಷ್ಟು ಹೆಚ್ಚಳ ಸಾಧ್ಯತೆ: ಉತ್ಪಾದನೆ ಕುಸಿತ ನಿರೀಕ್ಷೆ - PETROLEUM PRODUCTS