ವಾಷಿಂಗ್ಟನ್:ರಷ್ಯಾ - ಉಕ್ರೇನ್ ನಡುವೆ ಯುದ್ಧ ಆರಂಭಗೊಂಡು ಒಂದು ವರ್ಷದ ಮೇಲಾದರೂ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. 2 ರಾಷ್ಟ್ರಗಳು ಯುದ್ದಗೆಲ್ಲಲು ಸೈನ್ಯ, ಯುದ್ದೋಪಕರಣಗಳನ್ನು ಸಿದ್ಧಪಡಿಸಿಕೊಳ್ಳುತ್ತಿವೆ. ನಿರಂತರವಾಗಿ ರಷ್ಯಾ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್ ತನ್ನ ಯುದ್ಧ ಶಸ್ತ್ರಾಸ್ತ್ರಗಳನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದೆ.
ಇದೀಗ ಅಮೆರಿಕ ರಹಸ್ಯವಾಗಿ ನೀಡಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಷ್ಯಾ ವಿರುದ್ಧ ಉಕ್ರೇನ್ ಬಳಸಲು ಪ್ರಾರಂಭಿಸಿದೆ. ಕಳೆದ ವಾರ ಕ್ರಿಮಿಯಾದಲ್ಲಿನ ರಷ್ಯಾದ ಮಿಲಿಟರಿ ಏರ್‌ಫೀಲ್ಡ್ ಮತ್ತು ರಷ್ಯಾದ ಪಡೆಗಳು ಮತ್ತೊಂದು ಆಕ್ರಮಿತ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಿದೆ ಎಂದು ಅಮೆರಿಕದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಅಮೆರಿಕಕ್ಕೆ ಉಕ್ರೇನ್ನ ನಾಯಕರು ಯುದ್ಧ ಪರಿಕರಗಳ ಬಗ್ಗೆ ಬಹುಕಾಲದಿಂದ ಬೇಡಿಕೆ ಇಟ್ಟಿದ್ದು, ಅಕ್ಟೋಬರ್ನಲ್ಲಿ ಮಿಡ್ ರೇಂಜ್ ಮಿಸೈಲ್ ನೀಡಿದಲ್ಲದೇ ಈಗ ಮತ್ತೆ ಅಧ್ಯಕ್ಷ ಜೋ ಬೈಡನ್ ಬುಧವಾರ ಹೊಸ ಮಿಲಿಟರಿ ನೆರವು ಪ್ಯಾಕೇಜ್ಗೆ ಅನುಮೋದನೆ ನೀಡಿದ್ದಾರೆ. ಇದಕ್ಕೂ ಮುನ್ನ ಕಳೆದ ಫೆಬ್ರವರಿಯಲ್ಲಿ ATACMS ಎಂದು ಕರೆಯಲ್ಪುಡುವ ಲಾಂಗ್ ರೇಂಜ್ ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಮ್ನನ್ನು ನೀಡಲು ಬೈಡನ್ ಅನುಮೋದಿಸಿದ್ದರು. ಬಳಿಕ ಮಾರ್ಚ್ನಲ್ಲಿ 300 ಮಿಲಿಯನ್ ಡಾಲರ್ ಸಹಾಯದ ಪ್ಯಾಕೇಜ್ ನೀಡಲಾಗಿತ್ತು.
ಇನ್ನು ಅಮೆರಿಕ ಉಕ್ರೇನ್ಗೆ ನೀಡಿರುವ ಯುದ್ಧ ಪರಿಕರಗಳ ಬಗ್ಗೆ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್‌ನ ಉಪಾಧ್ಯಕ್ಷ ಕ್ರಿಸ್ಟೋಫರ್ ಗ್ರೇಡಿ ಬುಧವಾರ ಮಾತನಾಡಿದ್ದಾರೆ. "ಉಕ್ರೇನ್ಗೆ ರಷ್ಯಾದ ಮಿಸೈಲ್ಗಳಿಂದ ಹೆಚ್ಚಿನ ಅಪಾಯಗಳಿದ್ದು, ಅವರಿಗೆ ಈಗ ಮಿಲಿಟರಿ ಸಹಾಯದ ಅಗತ್ಯವಿದೆ. ಈ ಸಂದರ್ಭ ಉಪಕರಣಗಳನ್ನು ನೀಡಲು ಸೂಕ್ತ ಸಂದರ್ಭವಾಗಿದೆ ಎಂದು ತಿಳಿಸಿದರು". ಆದರೆ ಗ್ರೇಡಿ ಅವರು ಈಗ ಯಾವ ನಿರ್ದಿಷ್ಟ ಆಯುಧಗಳನ್ನು ಉಕ್ರೇನ್ಗೆ ಒದಗಿಸಲಾಗಿದೆ ಎಂಬುದರ ಬಗ್ಗೆ ತಿಳಿಸಲು ನಿರಾಕರಿಸಿದ್ದು, 'ನೀಡಿರುವ ಶಸ್ತ್ರಾಸ್ತ್ರಗಳನ್ನು ಸರಿಯಾಗಿ ಬಳಸಿದಲ್ಲಿ ಗುರಿ ತಲುಪುವ ವಿಶ್ವಾಸ ನನಗಿದೆ' ಎಂದು ಅವರು ಹೇಳಿದ್ದಾರೆ.
ಹಾಗೇ ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ್ ಪಟೇಲ್, 'ಬೈಡನ್ ಅವರು ತನ್ನ ರಾಷ್ಟ್ರೀಯ ಭದ್ರತಾ ತಂಡಕ್ಕೆ ATACMS ಮಿಸೈಲ್ನ್ನು ಉಕ್ರೇನ್ ತನ್ನ ವ್ಯಾಪ್ತಿಯೊಳಗೆ ಬಳಸಬೇಕೆಂದು ಸೂಚಿಸಲು ನಿರ್ದೆಶನ ನೀಡಿದ್ದಾರೆ. ಹಾಗೇ ಬೈಡನ್ ಅವರು ಉಕ್ರೇನ್ ರಷ್ಯಾದ ಈಗಿನ ಯುದ್ಧ ಯಾವ ಹಂತದಲ್ಲಿದೆ ಎಂಬುದರ ಆಧಾರದ ಮೇಲೆ ಇವುಗಳೆಲ್ಲವನ್ನು ಒದಗಿಸಲು ಈ ಸಮಯ ಸೂಕ್ತವೆಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ಗ್ರೇಡಿ ಮಾಹಿತಿ ನೀಡಿದ್ದು, ಅವರ ಈ ನಿರ್ಧಾರ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ ' ಎಂದೂ ಹೇಳಿದರು.
ಇದನ್ನೂ ಓದಿ:ಅಫ್ಘಾನಿಸ್ತಾನ ಸರ್ಕಾರದೊಂದಿಗೆ ರಷ್ಯಾ ಮಾತುಕತೆ: ಯುಎನ್ ಪ್ರತಿನಿಧಿ ಸ್ಥಾನಕ್ಕೆ ತಾಲಿಬಾನ್ ಬೇಡಿಕೆ - Taliban Russia Talks