ಲಂಡನ್ (ಬ್ರಿಟನ್): ಬ್ರಿಟನ್ನಲ್ಲಿ ಶುಕ್ರವಾರ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸುಮಾರು 26 ಭಾರತೀಯ ಮೂಲದ ಸದಸ್ಯರು ಹೌಸ್ ಆಫ್ ಕಾಮನ್ಸ್‌ಗೆ (ಯುಕೆ ಸಂಸತ್ತು) ಚುನಾಯಿತರಾಗಿದ್ದಾರೆ. 14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದರೂ, ಆ ಪಕ್ಷದಿಂದ ಸ್ಪರ್ಧಿಸಿದ್ದ ಭಾರತೀಯರು ಸಹ ಗೆದ್ದು ಗಮನ ಸೆಳೆದಿದ್ದಾರೆ.
ಯುಕೆ ಸಂಸತ್ತಿನ 650 ಸ್ಥಾನಗಳ ಪೈಕಿ 412 ಸ್ಥಾನಗಳಲ್ಲಿ ಪ್ರತಿಪಕ್ಷ ಲೇಬರ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷಕ್ಕೆ ಈ ಹಿಂದೆ ಗೆದ್ದಿದ್ದ 200ಕ್ಕೂ ಹೆಚ್ಚು ಸ್ಥಾನಗಳಲ್ಲೂ ಸೋಲು ಕಂಡಿದೆ. ನಿರ್ಗಮಿತ ಪ್ರಧಾನಿ, ಭಾರತೀಯ ಮೂಲದ ರಿಷಿ ಸುನಕ್ ಯಾರ್ಕ್‌ಷೈರ್‌ನ ರಿಚ್‌ಮಂಡ್ ಮತ್ತು ನಾರ್ತಲರ್‌ಟನ್ ಕ್ಷೇತ್ರದಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ್ದಾರೆ. ಜೊತೆಗೆ ಇತರ ಬ್ರಿಟಿಷ್ - ಭಾರತೀಯರು ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇದು ನಾಯಕ ಸುನಕ್ ಅವರಿಗೆ ಕೊಂಚ ಸಮಾಧಾನ ತರುವಂತೆ ಮಾಡಿದೆ.
ಕ್ಷೇತ್ರದ ಮತದಾರರಿಗೆ ಸುನಕ್ ಕೃತಜ್ಞತೆ: ಚುನಾವಣಾ ಫಲಿತಾಂಶದ ಬಳಿಕ ರಿಷಿ ಸುನಕ್ ಮಾತನಾಡಿ, ಈ ಕಷ್ಟದ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ರಿಚ್‌ಮಂಡ್ ಮತ್ತು ನಾರ್ತಲರ್‌ಟನ್ ಕ್ಷೇತ್ರದ ಜನರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇವೆ. ನಾನು ಒಂದು ದಶಕದ ಹಿಂದೆ ಇಲ್ಲಿಗೆ ಬಂದಿದ್ದೆ. ಅಂದಿನಿಂದಲೂ ನೀವು ನನಗೆ ಮತ್ತು ನನ್ನ ಕುಟುಂಬಕ್ಕೆ ನಾವು ಮನೆಯಲ್ಲಿದ್ದೇವೆ ಎಂಬ ಅನುಭವವನ್ನು ನೀಡಿದ್ದೀರಿ. ಮುಂಬರುವ ವರ್ಷಗಳಲ್ಲಿ ನಿಮಗೆ ಸೇವೆ ಸಲ್ಲಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.