ಬೆಂಗಳೂರು: ನಮ್ಮ ಪಕ್ಷದಲ್ಲಿ ದಲಿತರಿಗೆ ಗರ್ಭಗುಡಿ ಪ್ರವೇಶವಿಲ್ಲ ಎನ್ನುವ ಆರೋಪವನ್ನು ಬಿಜೆಪಿ ವಿರೋಧಿಗಳು ಮಾಡಿಕೊಂಡು ಬಂದಿದ್ದಾರೆ. ಆದರೆ ಇಂದು ಹಿಂದೆ ಇದೇ ಟೀಕೆ ಮಾಡಿದ್ದ ಛಲವಾದಿ ನಾರಾಯಣಸ್ವಾಮಿ ಗರ್ಭಗುಡಿಯಲ್ಲೇ ಕುಳಿತಿದ್ದಾರೆ, ಅವರು ಇನ್ನಷ್ಟು, ಮತ್ತಷ್ಟು ದೊಡ್ಡವರಾಗಲಿ. ಆದ್ರೆ ಅವರ ಜೊತೆಗೆ ಮತ್ತಷ್ಟು ಜನ ದೊಡ್ಡವರಾದರೆ ಆಗ ನಮಗೆಲ್ಲಾ ಆನಂದವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ತಿಳಿಸಿದ್ದಾರೆ.
ವಸಂತನಗರದ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಪದವೀಧರರ ಸಂಘದಿಂದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ವಿವಿಧ ಮಠಗಳ ಸಿದ್ದರಾಮ ಬೆಲ್ದಾಳ ಶ್ರೀ, ಜ್ಞಾನ ಯೋಗಿ ಸ್ವಾಮೀಜಿ, ಬಸವನಾಗಿ ಶರಣರು, ಸೇವಾಲಾಲ್ ಶ್ರದ್ಧಾ ಸ್ವಾಮೀಜಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಬಿ.ಎಲ್ ಸಂತೋಷ್, ಛಲವಾದಿ ನಾರಾಯಣಸ್ವಾಮಿ ಅವರು ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿ ಬಂದು ಕುಳಿತಿದ್ದಾರೆ. ಬಿಜೆಪಿ ಆಡಳಿತ ಇರಲಿ, ಇಲ್ಲದಿರಲಿ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಲಿದೆ ಎಂದರು.
ಸಾಧ್ಯವಿಲ್ಲ ಅಂದಿದ್ದು, ಸಾಧ್ಯವಾದಾಗ ಆನಂದವಾಗುತ್ತೆ. ಕೆಲವು ಹಿತಾಸಕ್ತಿಗಳು ಕೆಲ ಟೀಕೆ ಮಾಡ್ತಾರೆ, ಅವರಿಗೆ ನನ್ನ ವಿರೋಧ ಇಲ್ಲ. ಬಿಜೆಪಿ ಅಂದ ತಕ್ಷಣ ವಿರೋಧ ಮಾಡ್ತಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು, ಆದ್ರೂ ಅಲ್ಪಸಂಖ್ಯಾತರ ವಿರೋಧಿ ಅಂದ್ರು. ರಾಮನಾಥ್ ಕೋವಿಂದ್ ಅವರನ್ನ ರಾಷ್ಟ್ರಪತಿ ಮಾಡಿದ್ದು ಬಿಜೆಪಿ, ಆದ್ರೂ ದಲಿತ ವಿರೋಧಿ ಅಂತಾರೆ. ದ್ರೌಪದಿ ಮುರ್ಮು ಅವರನ್ನ ರಾಷ್ಟ್ರಪತಿ ಮಾಡಿದ್ದೇವೆ. ಎಲ್ಲರೂ ಉತ್ತಮ ಸ್ಥಾನವನ್ನ ಅಲಂಕರಿಸಿದ್ದಾರೆ. ಇದು ರಾಜಕೀಯೇತರ ಕಾರ್ಯಕ್ರಮ. ಆದ್ರೂ ಬಿಜೆಪಿ ವಿರೋಧಿ ದಲಿತ ಸಂಘಟನೆಗಳು ಇಲ್ಲಿವೆ. ಚ ಮತ್ತು ಛ ಎರಡು ಅಕ್ಷರಗಳಿವೆ. ಛ ಛಲವಾದಿ ಅನ್ನೋದು ಇಂದು ಅವರನ್ನ ಇಲ್ಲಿಗೆ ತಂದು ನಿಲ್ಲಿಸಿದೆ. ಅಂಬೇಡ್ಕರ್ ಅವರು ಹೇಳಿದ್ದು ಸಂಘಟನೆ, ಶಿಕ್ಷಣ ಒಟ್ಟಿಗೆ ಇದ್ರೆ ಮಾತ್ರ ಬೆಳವಣಿಗೆ ಸಾಧ್ಯ ಅಂತ. ಮೂರನೆಯದ್ದು ಸಂಘರ್ಷ ಅಂತ ಅಂಬೇಡ್ಕರ್ ಹೇಳಿದ್ದಾರೆ. ನ್ಯಾಯ ಸಿಗದಿದ್ದಾಗ ಸಂಘರ್ಷ ಅನಿವಾರ್ಯ ಅಂತ ಹೇಳಿದ್ದರು ಎಂದು ಸ್ಮರಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರಿಗೆ ನಾಟಕ ಯಾವುದು, ನಿಜ ಯಾವುದು ಅಂತ ಗೊತ್ತಾಗಿದೆ. ಅವರು ಇನ್ನಷ್ಟು, ಮತ್ತಷ್ಟು ದೊಡ್ಡವರಾಗಲಿ. ಜೊತೆಗೆ ಮತ್ತಷ್ಟು ಜನ ದೊಡ್ಡವರಾಗಲಿ. ಆಗ ನಮಗೆಲ್ಲಾ ಆನಂದವಾಗಲಿದೆ. ಸಮಾಜದಲ್ಲಿ ಈಗ ಟರ್ನಿಂಗ್ ಪಾಯಿಂಟ್ ಇದೆ. ಎಲ್ಲರೂ ಒಟ್ಟಾಗಿ ಹೋಗಬೇಕು ಅನ್ನೋ ಸಂಖ್ಯೆ ಇದೆ. ಜೊತೆಗೆ ಒಡೆಯಬೇಕು ಅನ್ನೋರ ಸಂಖ್ಯೆ ಕೂಡ ಇದೆ. ಎಲ್ಲರಿಗೂ ಶಿಕ್ಷಣ ಸಿಗುವ ಕಾಲ ಬಂದಿದೆ. ಪ್ರಧಾನಿಯವರು ಅಂತ್ಯೋದಯ ಕಾರ್ಯಕ್ರಮವನ್ನ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕಾರ್ಯಕ್ರಮ ಮೂಲಕ ಜಾರಿ ಮಾಡ್ತಿದ್ದಾರೆ. ಹತ್ತು ಹಲವು ಕವಲಾಗಿರೋ ಸಮಾಜ, ಒಂದೇ ಧ್ವನಿಯಾಗಿರಬೇಕು. ಕುಳಿತುಕೊಳ್ಳಲು ಅನೇಕ ಕುರ್ಚಿ ಇರಲಿ, ಆದ್ರೆ ಒಂದೇ ಧ್ವನಿಯಾಗಿರಲಿ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಅವರು ವಿಧಾನ ಪರಿಷತ್ ವಿಪಕ್ಷ ನಾಯಕರಾಗಿದ್ದಾರೆ. ಹಿಂದುಳಿದವರ ಪರ ಧ್ವನಿ ಎತ್ತಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರ ಅಭಿನಂದನೆ ಬಹಳ ಅಪರೂಪ ಹಾಗೂ ಅವಶ್ಯಕತೆ ಕಾರ್ಯಕ್ರಮ. ಇಂದು ಹೋರಾಟದ ಕಿಚ್ಚು ನಶಿಸಿ ಹೋಗ್ತಿದೆ. ಇಂತ ಹೋರಾಟಗಾರರನ್ನ ಗುರ್ತಿಸಿದ್ದೇವೆ. ನಾನು ರಾಜ್ಯಾಧ್ಯಕ್ಷನಾದಾಗ ವಿಪಕ್ಷ ನಾಯಕನಾಗಿ ಆಯ್ಕೆ ವಿಚಾರ ಬಂತು. ರಾಜ್ಯಾಧ್ಯಕ್ಷ ಹಾಗೂ ಯಡಿಯೂರಪ್ಪ ಅವರ ಮಗನಾಗಿ ಯೋಚನೆ ಮಾಡಿದೆ. ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಕರೆ ಮಾಡಿ, ಹಲವಾರು ಹೆಸರುಗಳು ಬಂದಿವೆ. ಛಲವಾದಿ ನಾರಾಯಣಸ್ವಾಮಿ ಅಂತ ಹೋರಾಟಗಾರ ಇದ್ದಾರೆ. ತುಳಿತಕ್ಕೊಳಗಾದ ಸಮುದಾಯದ ವ್ಯಕ್ತಿಯನ್ನ ಆಯ್ಕೆ ಮಾಡಬೇಕು ಅಂತ ಅಭಿಪ್ರಾಯ ತಿಳಿಸಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಜಯೇಂದ್ರ ಈ ರೀತಿ ಆಲೋಚನೆ ಮಾಡಿದ್ದಾರೆ ಅಂತ ನಡ್ಡಾ ಖುಷಿಪಟ್ಟರು ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ತಮ್ಮ ಬಾಲ್ಯದ ದಿನಗಳನ್ನ ನೆನೆದದರು. ನನ್ನ ರಾಜಕೀಯ ಜೀವನದ ಪಯಣ ಬಹಳ ಕಠಿಣ, ದುರ್ಗಮ ರಸ್ತೆಯಾಗಿತ್ತು. ರಾಜಕೀಯ ಅಂದ್ರೆ ಹಣ ಬಲ, ಜನ ಬಲ, ಬಾಹುಬಲ ಇರಬೇಕು. ಯಾವುದೂ ನನಗೆ ಇರಲಿಲ್ಲ. ನನ್ನ ಕಾಲೇಜು ದಿನದಲ್ಲಿ ಬಸವಲಿಂಗಪ್ಪ ಹಾಗೂ ದಿವಂಗತ ಬಂಗಾರಪ್ಪ ಅವರ ಪರಿಚಯ ಆಯ್ತು. ಬಂಗಾರಪ್ಪ ನನ್ನನ್ನ ಬಹಳ ಹತ್ತಿರಕ್ಕೆ ಕರೆದುಕೊಂಡ್ರು. ಹಾಗಾಗಿ ನಾನು ಕಾಂಗ್ರೆಸ್ನವನೇ ಆಗಿಹೋಗಿದ್ದೆ. 40 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಜೀತ ಮಾಡಿದೆವು. ಹಸಿದಿದ್ದೆವು ಅಂದ್ರೆ ನಮಗೆ ಹಾಕಿದ್ದು ಚಾಕ್ಲೆಟ್ ಮಾತ್ರ. ಅನ್ನ ಹುಟ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ನನ್ನ ಹೆಸರು ತಿಮ್ಮಯ್ಯ ನಾರಾಯಣಸ್ವಾಮಿ ಅಷ್ಟೇ. ನಂತರ ಛಲವಾದಿ ನಾರಾಯಣಸ್ವಾಮಿ ಅಂತ ಸೇರಿಕೊಳ್ತು. ನಾವು ತಳಸಮುದಾಯದವರು. ಹಿರಿಯರ ಜೊತೆ ಚರ್ಚಿಸಿ ಛಲವಾದಿ ಅನ್ನೋದನ್ನ ಸ್ಥಾಪನೆ ಮಾಡಿಕೊಂಡೆವು. ನಾನು ಎಂದೂ ಜಾತಿವಾದಿ ಅಲ್ಲ. ಛಲವಾದಿ ಅಂದ್ರೆ ಹೋರಾಟ ಅಂತ. ಇದಕ್ಕೆ ಅನ್ವಯ ಆಗುವವರು ಎಲ್ಲರೂ ಛಲವಾದಿಗಳೇ ಎಂದರು.
ಇತ್ತೀಚೆಗೆ ನನಗೆ ಧಮ್ ಬಿರ್ಯಾನಿ ನಾರಾಯಣಸ್ವಾಮಿ ಅಂತ ಹೆಸರು ಕೊಟ್ರು. ಕಾಂಗ್ರೆಸ್ನಲ್ಲಿ ನನಗೆ ಮೂರು ಬಾರಿ ಅಲ್ಲ, ಏಳು ಬಾರಿ ಟಿಕೆಟ್ ತಪ್ಪಿಸಿದ್ದಾರೆ. ನಾನು ಎಂದೂ ಕೆಲಸಕ್ಕೆ ಅರ್ಜಿ ಹಾಕಿದವನಲ್ಲ. ನಾನೂ ಕೂಡ ನಿಮ್ಮ ಹಾಗೆ ಬಿಜೆಪಿ ಬ್ರಾಹ್ಮಣರ ಪಕ್ಷ, ಗರ್ಭಗುಡಿಗೆ ಬಿಡಲ್ಲ ಅಂತ ಬೈದಿದ್ದೆ. ನಾನು ಬಿಜೆಪಿಯನ್ನ ಪ್ರೀತಿಸಿ ಬರಲಿಲ್ಲ. ಕಾಂಗ್ರೆಸ್ ಮೇಲಿನ ಕೋಪಕ್ಕೆ ಬಿಜೆಪಿಗೆ ಬಂದೆ. ಇಲ್ಲಿ ಬಂದ ಮೇಲೆ ಯೋಗ್ಯತೆ ಗುರ್ತಿಸಿ ಪದವಿ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಇದನ್ನೂ ಓದಿ: ರೆಡ್ಡಿ ಸಹೋದರರು-ಶ್ರೀರಾಮುಲು ಶೀಘ್ರ ಒಂದಾಗ್ತಾರೆ, ಪಕ್ಷ ಹಳೆ ಮಾದರಿಯಲ್ಲೇ ಮತ್ತೆ ಗಟ್ಟಿ: ಸಚಿವ ವಿ.ಸೋಮಣ್ಣ - V Somanna