ಮೈಸೂರು: ''ಆಡಳಿತ ಪಕ್ಷ ಅವರದ್ದೇ ಇರುವುದರಿಂದ ಕಾಂಗ್ರೆಸ್ ಗೆದ್ದಿದೆ. ಯಾವಾಗಲೂ ಕೂಡ ಆಡಳಿತ ಪಕ್ಷ ಉಪ ಚುನಾವಣೆ ಗೆಲ್ಲುವುದು ಸಹಜ'' ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಮೈಸೂರಿನ ಜಿಲ್ಲಾ ಪಂಚಾಯಿತಿ ಬಳಿ ಉಪಚುನಾವಣೆ ಫಲಿತಾಂಶದ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಜಿಟಿಡಿ, ''ನಾನು ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ನಾನು ಹೋಗಿಲ್ಲ. ನನ್ನ ಮಗ ಹರೀಶ್ ಗೌಡ, ಎಂಎಲ್ಸಿ ವಿವೇಕಾನಂದ ಹೋಗಿದ್ದರು. ಗೆಲ್ಲುತ್ತೇವೆ ಎಂದು ಅವರೆಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರೂ ಕೂಡ ಸೋಲಾಗಿದೆ. ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಸಹಜ. ನಿಖಿಲ್ ಗೆಲ್ಲಬೇಕಿತ್ತು, ಅದರೆ ಮೂರನೇ ಬಾರಿಗೆ ಸೋತಿದ್ದಾರೆ. ಆದರೂ ಧೈರ್ಯವಾಗಿ ಈ ಮೂರನೇ ಸೋಲು ನಿಖಿಲ್ ಎದುರಿಸಬೇಕು. ಜನತಾದಳ ಪಕ್ಷವನ್ನು ಕಟ್ಟಬೇಕು. ಹೀಗೆ ಸೋತ ಅನೇಕರು ಮತ್ತೆ ಗೆದ್ದು, ಮಂತ್ರಿಗಳು, ನಾಯಕರಾಗಿದ್ದಾರೆ'' ಎಂದು ತಿಳಿಸಿದರು.
ಈ ಹಿಂದೆ ಕಾಂಗ್ರೆಸ್ಗೆ ಕರೆದಿರುವುದು ನಿಜ: ನೀವು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ''ಸಿದ್ದರಾಮಯ್ಯ ನನ್ನ ಜೊತೆ ಮಾತನಾಡಿಲ್ಲ. ಪಕ್ಷಕ್ಕೆ ಬರುವಂತೆ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕರೆದಿರುವುದು ನಿಜ. ಚಾಮುಂಡಿ ಬೆಟ್ಟದಲ್ಲಿ ವೇದಿಕೆ ಹಂಚಿಕೊಂಡಿದ್ದು ಬಿಟ್ಟರೆ, ನಾನು ಅವರು ಮಾತನಾಡಿಲ್ಲ. ಈಗ ಆ ರೀತಿಯ ಯಾವುದೇ ಚರ್ಚೆ ಇಲ್ಲ'' ಎಂದರು.
ಇದನ್ನೂ ಓದಿ: ಚನ್ನಪಟ್ಟಣ ಬೈ ಎಲೆಕ್ಷನ್: ಸಿ ಪಿ ಯೋಗೇಶ್ವರ್ ಗೆಲುವಿಗೆ ಪ್ರಮುಖ ಕಾರಣಗಳಿವು!
ಜೆಡಿಎಸ್ಗೆ ನನ್ನ ಅವಶ್ಯಕತೆ ಇಲ್ಲ ಅನಿಸುತ್ತೆ: ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜೊತೆ ಮುನಿಸು ಸರಿ ಹೋಯಿತಾ ಎಂಬ ಪ್ರಶ್ನೆಗೆ, ''ಕುಮಾರಸ್ವಾಮಿ ಜೊತೆ ಮುನಿಸು ಇಲ್ಲ. ನನ್ನನ್ನು ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ಯಾರೂ ಕರೆದಿಲ್ಲ. ಜೆಡಿಎಸ್ ಪಕ್ಷಕ್ಕೆ ನನ್ನ ಅವಶ್ಯಕತೆ ಇರಲಿಲ್ಲ ಅನಿಸುತ್ತೆ, ಹಾಗಾಗಿ ಕರೆದಿಲ್ಲ. ನಿಖಿಲ್ ತಾಯಿ, ನಿಖಿಲ್, ದೊಡ್ಡವ್ರು ಯಾರು ಕರೆದಿಲ್ಲ. ನನಗೆ ವಯಸ್ಸು ಆಯ್ತು ಅಂತ ತೀರ್ಮಾನ ಮಾಡಿದ್ದಾರೆ. ಜಿ.ಟಿ.ದೇವೇಗೌಡನ ಮಗ ಮಾತ್ರ ಸಾಕು ಎಂದು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ನಲ್ಲಿ ಹೌಸ್ಫುಲ್ ಆಗಿದೆ. ಜೆಡಿಎಸ್, ಬಿಜೆಪಿ ಒಂದಾಗಿವೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ, ಜೆಡಿಎಸ್ನವರು ನಾನು ನಿವೃತ್ತಿ ತೆಗೆದುಕೊಳ್ಳಲೆಂದು ಅವರ ಆದೇಶ ಆಗಿರಬಹುದು'' ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಉಪ ಚುನಾವಣೆಯಲ್ಲಿ ಜನ ಆಡಳಿತ ಪಕ್ಷದ ಪರ ಇರ್ತಾರೆ, ಸೋಲಿನ ಬಗ್ಗೆ ಪರಿಶೀಲಿಸುತ್ತೇವೆ: ಪ್ರಲ್ಹಾದ್ ಜೋಶಿ